ಬಂಟ್ವಾಳ: ನಾಡಿನ ಕಾರಣೀಕ ಕ್ಷೇತ್ರವಾಗಿ ಗುರತಿಸಿಕೊಂಡಿರುವ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಕೋಲ ಹಾಗೂ ಅಗೇಲು ಸೇವೆಗಳು ವಿಶೇಷವಾಗಿದ್ದು, ಸತತ ಎರಡು ವರ್ಷಗಳ ಲಾಕ್‌ಡೌನ್ ಪರಿಣಾಮ ಕೋಲ ಸೇವೆಗಳು ಸ್ಥಗಿತಗೊಂಡು ಮುಂದೆ ಸೇವೆ ತೀರಿಸುವುದಕ್ಕಾಗಿ ಭಕ್ತರು ಇನ್ನಷ್ಟು ಸಮಯ ಕಾಯಬೇಕಾಗಿದೆ.
ಕ್ಷೇತ್ರದ ವಿಶೇಷ ಸೇವೆಗಳಾದ ಕೋಲ ಹಾಗೂ ಅಗೇಲು ಸೇವೆಗಳು ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದರೂ, ಮುಂದೆ ಸೇವೆಗಳು ಪ್ರಾರಂಭಗೊಂಡರೆ ಅಗೇಲು ಸೇವೆಗಳನ್ನು ವಾರದ ಮೂರು ದಿನಗಳಲ್ಲಿ ದಿನವೊಂದಕ್ಕೆ ಎಷ್ಟು ಬೇಕಾದರೂ ನೀಡಿ ಅದರ ಹರಕೆ ತೀರಿಸಿಕೊಳ್ಳಬಹುದು. ಆದರೆ ಕೋಲ ಸೇವೆಯನ್ನು ಆ ರೀತಿ ನೀಡುವುದಕ್ಕೆ ಸಾಧ್ಯವಿಲ್ಲ.
ಕೋಲ ಸೇವೆಗಳು ವಾರದಲ್ಲಿ ೫ ದಿನಗಳು ಮಾತ್ರ ನಡೆಸುತ್ತಿದ್ದು, ದಿನವೊಂದಕ್ಕೆ ೪ ಸೇವೆಗಳು ನಡೆಯುತ್ತದೆ. ಈಗಾಗಲೇ ಸಾವಿರಾರು ಕೋಲ ಸೇವೆಗಳು ಬುಕ್ಕಿಂಗ್ ನಲ್ಲಿದ್ದು, ಪ್ರಸ್ತುತ ೨೦೦೫ರ ಬುಕ್ಕಿಂಗ್ ಸೇವೆಗಳು ನಡೆಯಬೇಕಿದೆ. ಆ ನಂತರದ ಬುಕ್ಕಿಂಗ್‌ಗಳಿಗೆ ಇನ್ನಷ್ಟು ಸಮಯ ಕಾಯಬೇಕಿರುವುದು ಅನಿವಾರ್ಯವಾಗಿದೆ.
ಅಮಾವಾಸ್ಯೆ ದಿನ, ಮಾಗಣೆಯ ಧಾರ್ಮಿಕ ಕಟ್ಟಳೆಗಳು, ತುಳುವಿನ ಆಟಿ ತಿಂಗಳು ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಕೋಲ ಸೇವೆ ಇರುವುದಿಲ್ಲ. ಸಾಮಾನ್ಯವಾಗಿ ವರ್ಷದಲ್ಲಿ 650-700ರಷ್ಟು ಕೋಲ ಸೇವೆಗಳು ನಡೆಯುತ್ತಿದ್ದು, ವರ್ಷದಲ್ಲಿ ಸಾವಿರಕ್ಕೂ ಅಽಕ ಕೋಲಗಳ ಬುಕ್ಕಿಂಗ್ ನಡೆಯುತ್ತದೆ. ಲಾಕ್‌ಡೌನ್ ಪರಿಣಾಮದಿಂದ ವರ್ಷದಲ್ಲಿ ನಡೆಯುವ ಕೋಲಗಳ ಸಂಖ್ಯೆ ಇಳಿಮುಖವಾಗಿದೆ.
ಕಳೆದ ವರ್ಷ ಸುಮಾರು 6 ತಿಂಗಳ ಕಾಲ ಕೊರೊನಾ ಲಾಕ್‌ಡೌನ್‌ನಿಂದ ಕೋಲ ಸೇವೆ ಸ್ಥಗಿತಗೊಂಡಿದ್ದು, ಮಾರ್ಚ್ ಅಂತ್ಯದಲ್ಲಿ ನಿಂತ ಸೇವೆಗಳು ಸಪ್ಟೆಂಬರ್‌ನಲ್ಲಿ ಪ್ರಾರಂಭಗೊಂಡಿತ್ತು . ಈ ವರ್ಷವೂ ಎಪ್ರಿಲ್ 18ಕ್ಕೆ ಕೋಲ ಸೇವೆ ನಿಂತಿದ್ದು, ಮುಂದೆ ಯಾವಾಗ ಪ್ರಾರಂಭಗೊಳ್ಳುತ್ತದೆ ಎಂಬುದು ಇನ್ನೂ ಖಚಿತಗೊಂಡಿಲ್ಲ. ಈ ವರ್ಷ ಅಂದಾಜು 150ರಷ್ಟು ಕೋಲ ಸೇವೆಗಳ ಸ್ಥಗಿತಗೊಂಡಿರುವ ಸಾಧ್ಯತೆ ಇದೆ.
ಮುಂದಿನ ದಿನಗಳಲ್ಲಿ ಸರಕಾರ ಧಾರ್ಮಿಕ ಕೇಂದ್ರಗಳಲ್ಲಿ ಸೇವೆಗೆ ಅವಕಾಶ ನೀಡಿದರೂ, ಜು. 16ರ ಬಳಿಕ ತುಳುವಿನ ಆಟಿ ತಿಂಗಳು ಪ್ರಾರಂಭವಾಗುವುದರಿಂದ ಒಂದು ತಿಂಗಳ ಕಾಲ ಸೇವೆ ರುವುದಿಲ್ಲ. ಹೀಗಾಗಿ ಕ್ಷೇತ್ರದಲ್ಲಿ ಕೋಲ ಸೇವೆ ಪ್ರಾರಂಭವಾಗುವುದು ಇನ್ನೂ ಒಂದೂವರೆ ತಿಂಗಳು ವಿಳಂಬವಾಗುವ ಸಾಧ್ಯತೆ ಇದೆ. ಆ ಸಂದರ್ಭದಲ್ಲೂ ಸರಕಾರದಿಂದ ಅನುಮತಿ ಸಿಗದೇ ಇದ್ದರೆ ಮತ್ತಷ್ಟು ವಿಳಂಬದ ಸಾಧ್ಯತೆ ಹೆಚ್ಚಿದೆ.