ದೈಹಿಕ ಹಾಗೂ ಮಾನಸಿಕ ಸ್ಥಿರತೆ ಯೋಗದಿಂದ ಮಾತ್ರ ಸಾಧ್ಯ. ಈ ಸ್ಥಿರತೆಯಿಂದ ಸುಂದರವಾದ ಬದುಕು ರೂಪಿತವಾಗಿ ದೈವಿಕ ಶಕ್ತಿಯೊಂದಿಗೆ ಲೀನರಾಗುತ್ತೇವೆ. ಇದುವೇ ಬದುಕಿನ ಪರಮ ಉದ್ದೇಶ.
ಯೋಗ ಅನ್ನುವುದರ ಅರ್ಥವೇ ಸಂಧಿಸುವುದು, ಒಟ್ಟಿಗೆ ಸೇರುವುದು, ಸಂಬಂಧ ಸಾಧಿಸುವುದು, ಅದೇ ರೀತ ಕೊನೆಯಲ್ಲಿ ಒಂದರೊಳಗೊಂದು ಲೀನವಾಗುವುದು.ಪ್ರಕೃತಿ ಅದೊಂದು ಪ್ರಾಣ ಚೈತನ್ಯ ಶಕ್ತಿ. ನಾವಾದರೋ ಅದರ ಒಂದು ಅಂಗಮಾತ್ರ. ಹಾಗಿರುವಲ್ಲಿ ಈ ಪ್ರಕೃತಿಯ ಪ್ರಾಣ ಚೈತನ್ಯ ಶಕ್ತಿಯೊಂದಿಗೆ ನಮ್ಮ ದೇಹ ಮನಸ್ಸುಗಳೆರಡನ್ನೂ ಸರಿದೂಗಿಸಿಕೊಂಡೆವಾದರೆ ಆವಾಗ ಬದುಕು ಸುಂದರ. ಅದು ಹೇಗೆ ಸಾಧ್ಯವೆಂದರೆ ಬದುಕಿನಲ್ಲಿ ಯೋಗ ಅನ್ನುವುದು ಒಂದು ನಿರಂತರ ಹಾಗೂ ಅವಿಭಾಜ್ಯ ಕ್ರಿಯೆ ಅನ್ನುವಷ್ಟರಮಟ್ಟಿಗೆ ನಮ್ಮಲ್ಲಿ ಅದು ರೂಢಿಗತವಾದಾಗ. ದೇಹ ಮನಸ್ಸುಗಳೆರಡೂ ಸಮತೂಕದಲ್ಲಿ ತಮ್ಮ ಕ್ರಿಯೆಗಳಲ್ಲಿ ತೊಡಗಿಕೊಂಡಾಗ ನಮ್ಮ ಬದುಕು ಚೈತನ್ಯಶಾಲಿಯಾಗಿ ಸುಂದರವಾಗುತ್ತದೆ.
ನಮ್ಮ ಶ್ವಾಸೋಛ್ವಾಸದ ಮೇಲೆ ದೇಹದ ಹಾಗೂ ಮನಸ್ಸಿನ ಆರೋಗ್ಯ ನಿಂತಿರುವಂತಹದ್ದು. ಯೋಗದಲ್ಲಿ ಶ್ವಾಸೋಛ್ವಾಸ ಕ್ರಿಯೆಗೆ ಬಹಳಷ್ಟು ಪ್ರಾಧಾನ್ಯತೆ ಇದೆ. ಇದಕ್ಕನುಗುಣವಾಗಿಯೇ ದೇಹದ ಅಂಗಾಂಗಗಳ ಚಲನೆ ಹಾಗೂ ಕ್ರಿಯೆಗಳಿರುತ್ತವೆ. ಯಾವಾಗ ಇವೆರಡರ ಮಧ್ಯೆ ಸಮತೋಲನ ಇಲ್ಲವಾಗುತ್ತೋ ಆವಾಗ ಮಾನವ ಬದುಕು ಸ್ಥಿರತೆಯನ್ನು ಕಳೆದುಕೊಂಡು ತನ್ನ ನೈಜತೆಯಿಂದ ದೂರವಾಗುತ್ತಾ ಬಡವಾಗುತ್ತಾ ಹೋಗುತ್ತದೆ. ಈ ರೀತಿ ಶ್ವಾಸೋಛ್ವಾಸ ಕ್ರಿಯೆ ಹಾಗೂ ದೈಹಿಕ ಚಲನೆ ಇವೆರಡರ ಮಧ್ಯೆ ಹಿಡಿತ ಮತ್ತು ಸಮತೋಲನ ಪ್ರಾಪ್ತವಾಗುವುದು ಯೋಗದಿಂದ ಮಾತ್ರ ಸಾಧ್ಯ.
ದೈಹಿಕ ಮತ್ತು ಮಾನಸಿಕ ಕ್ಷಮತೆ ಯಾವಾಗ ಯೋಗದಿಂದ ಪ್ರಾಪ್ತವಾಗುತ್ತೋ ಆವಾಗ ನಮ್ಮ ದೇಹ ಮನಸ್ಸುಗಳೆರಡರ ಮೇಲೂ ನಮಗೆ ಹಿಡಿತ ಸಾಧ್ಯವಾಗಿ ಈ ಪ್ರಕೃತಿಯ ಸಾಮರ್ಥ್ಯ ನಮ್ಮಲ್ಲೂ ಆವಿರ್ಭವಿಸಿ ಅದುವೇ ನಾವಾಗಿಬಿಡುತ್ತೇವೆ. ಇದುವೇ ಜೀವನ ಸೌಂದರ್ಯ ಅಲ್ವೆ? ಮಾನಸಿಕ ಹಾಗೂ ದೈಹಿಕ ರೋಗ ನಿರೋಧಕ ಶಕ್ತಿಗೆ ಯೋಗ ಧನ್ವಂತರೀ ಚಿಕಿತ್ಸೆ, ಅದುವೇ ಧನ್ವಂತರಿ ಮಂತ್ರ; ಇದರಿಂದಾಗಿಯೇ ಬದುಕು ಸಂದರ.
ಸೌಂದರ್ಯ ಅನ್ನುವುದು ದೇಹ ಪುಷ್ಟಿಯಲ್ಲಿಲ್ಲ ಅದು ಮನಸ್ಸಿನ ದೃಢತೆಯಲ್ಲಿದೆ. ಆ ದೃಢತೆ ಸಾಧ್ಯವಾಗುವುದು ಯೋಗದಿಂದ. ಅಂತಹ ಯೋಗದಿಂದ ದೇಹ ಮನಸ್ಸುಗಳೆರಡೂ ಒಂದಾಗಿ ಜೀವನ ಸಾಫಲ್ಯ ಉಂಟಾಗುತ್ತದೆ.
ರಾಜಮಣಿ ರಾಮಕುಂಜ.🙏