ರಮೇಶ ಎಂ ಬಾಯಾರು, ಎಂ ಎ. ಬಿ.ಎಡ್;
ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರು
ಹುಟ್ಟುವ ಮತ್ತು ಸಾಯುವ ಕ್ಷಣಗಳು ಅನಿರೀಕ್ಷಿತ. ಹುಟ್ಟಿನಿಂದ ಸಾವಿನ ತನಕ ಅಶನ, ವಸನ ಮತ್ತು ವಸತಿಗಳು ಮಾನವನ ಬದುಕಿನ ಪ್ರಾಥಮಿಕ ಅಗತ್ಯಗಳು. ಆದರೆ ಬದುಕಿಗೆ ಮೆರುಗು, ಅಲಂಕಾರ ಅಥವಾ ಸೌಂರ‍್ಯಗಳು ವೈಭವದ ಮನೆಯಿಂದಾಗಲೀ, ವರ್ಣಮಯ ಉಡುಪು ತೊಡುಪುಗಳಿಂದಾಗಲೀ ಅಥವಾ ವಿಶೇಷ ಭಕ್ಷö್ಯ ಭೋಜ್ಯಗಳುಳ್ಳ ಭೂರಿ ಭೋಜನಗಳಿಂದಾಗಲೀ ಒದಗದು. ಆರೋಗ್ಯವು ಜೀವನದ ಮೊದಲ ಲಕ್ಷಣ. ಹಾಗೇಯೇ ಸಮಯ ಪಾಲನೆ, ವಚನಪಾಲನೆ, ಸತ್ಯಪಾಲನೆ, ನಿಯಮ ಪಾಲನೆ ಮೊದಲಾದ ಶಿಸ್ತಿನ ಅಂಶಗಳೂ ಬದುಕಿನ ಸೌಂದರ್ಯ ವರ್ಧಕಗಳಾಗಿವೆ. ಭಾವನೆಯಲ್ಲಿ ಭಕ್ತಿ ಮತ್ತು ಪ್ರೀತಿಯ ಹೊನಲು, ಮನಸ್ಸಿನಲ್ಲಿ ದೇಶ ಭಕ್ತಿಯ ಪ್ರವಾಹ ಹಾಗೂ ದೇಹದಲ್ಲಿ ಹನುಮ ಶಕ್ತಿಯ ಸಂಚಾರಗಳಾಗುತ್ತಿದ್ದರೆ ಮಾತ್ರವೇ ಮಾನವನ ಬದುಕು ಸೌಂದರ್ಯದ ಉತ್ತುಂಗಕ್ಕೇರುತ್ತದೆ. ಅರಿ ಷಡ್ವರ್ಗಗಳಿಂದ ಮುಕ್ತವಾದ ಪ್ರಫುಲ್ಲಿತ ಮನಸ್ಸು; ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಸಾಧನೆಗೆ ಆಯ್ದುಕೊಳ್ಳುವ ಸತ್ಪಥಗಳೂ; ಮನುಜ ಜೀವನದ ಸುಂದರ ರೂಪಕ್ಕೆ ಕಿರೀಟಗಳಾಗುತ್ತವೆ. ಇಂತಹ ಆದರ್ಶಮಯ ಜೀವನ ಅಥವಾ ಆಕರ್ಷಕ ಜೀವನ ಒದಗಲು ನಾವು ಅನುಸರಿಸ ಬೇಕಾದ ಸೂತ್ರಗಳೇನು ಎಂದಾಗ ನಮ್ಮ ಮುಂದೆ ಪ್ರತ್ಯಕ್ಷವಾಗುವ ಆಧ್ಯಾತ್ಮಿಕ, ಆದಿದೈವಿಕ ಹಾಗೂ ಆದಿ ಭೌತಿಕ ವಿಚಾರವೇ, ಯೋಗ. ಯೋಗವನ್ನು ಬದುಕಿನ ಸುಂದರ ಸಂಪತ್ತು ಎಂದು ಋಷಿ ಮುನಿಗಳು ಅರಿತು ಅನುಸರಿಸಿ ವ್ಯಾಖ್ಯಾನಿಸಿದ್ದಾರೆ.
ಯೋಗ ಎಂದೊಡನೆಯೇ ಬಹುತೇಕರ ಮುಂದೆ ದೃಶ್ಯೀಕರಣಗೊಳ್ಳುವುದು ವಿವಿಧ ಆಂಗಿಕವಾದ ಚಲನೆಗಳು, ಕೈಕಾಲುಗಳ ಕುಲುಕಾಟ ಕ್ರಿಯೆಗಳೇ ಹೊರತು ಬೇರೇನೂ ಇರುವುದಿಲ್ಲ. ಕೆಲವರು ವ್ಯಾಯಾಮವೆಂಬುದಾಗಿ ಸರಳ ಪದದಲ್ಲಿ ಅರ್ಥೈಸುವುದೂ ಇದೆ. ವಿವಿಧ ಸಂದರ್ಭಗಳಲ್ಲಿ ಯೋಗ ಕೂಡಿ ಬರಲಿಲ್ಲ ಎಂದು ನಾವು ಹೇಳುತ್ತೇವೆ. ಇಲ್ಲಿ ಯೋಗ ಎಂದರೆ ಅನುಕೂಲ ಎಂಬ ಭಾವವು ಎದ್ದು ಕಾಣುತ್ತದೆ. ರಾಷ್ಟçಪತಿಯಾಗುವ ಯೋಗ ನಿನ್ನ ಜನ್ಮ ಜಾತಕದಲ್ಲಿದೆ ಎಂದೆನ್ನುವಾಗ ಯೋಗ ಎಂದರೆ ಅದೃಷ್ಟ ಎಂದೂ ಧ್ವನಿಸುತ್ತದೆ. ಜಾತಕ ಫಲ ಅಥವಾ ಸಿರಿ ಸಂಪದಗಳೇ ಮಾನವನನ್ನು ಚೇತೋಹಾರಿಗಳನ್ನಾಗಿ ರೂಪಿಸದು. ಎಲ್ಲವುಗಳ ಜೊತೆಗೆ ನಾವು ಮುಂದೆ ಹೇಳುವ ಯೋಗವೂ ಸಂಪನ್ನಗೊಳ್ಳಬೇಕು ಎಂಬುವುದೂ ಪ್ರಮುಖಾಂಶವಾಗಿದೆ.
ಯುಜ್ ಎಂಬ ಸಂಸ್ಕೃತ ಪದದಿಂದ ಯೋಗ ಪದದ ಉತ್ಪನ್ನವಾಗಿದೆ. ಐಕ್ಯವಾಗು, ಒಟ್ಟಾಗು, ಒಗ್ಗಟ್ಟಾಗು, ಸೇರು, ಸೇರಿಸಿಕೊಳ್ಳು, ಜೊತೆಗೂಡಿಸು, ಸಂಯೋಜಿಸು ಹೀಗೆ ನಾನಾ ಅರ್ಥಗಳಿಂದ ಯುಜ್ ಎಂಬ ಪದವನ್ನು ವ್ಯಾಖ್ಯಾನಿಸಬಹುದು. ಪತಂಜಲಿಯ ಯೋಗ ಸೂತ್ರದಂತೆ ಯೋಗವು ಜ್ಞಾನಯೋಗ, ರಾಜಯೋಗ, ಭಕ್ತಿಯೋಗ, ಕರ್ಮಯೋಗ, ಮತ್ತು ಹಠಯೋಗ ಎಂಬ ಶಾಖೆಗಳನ್ನೊಳಗೊಂಡಿದೆ. ಈ ಶಾಖೆಗಳ ಅರ್ಥ ಮತ್ತು ವ್ಯಾಪ್ತಿ ಅತ್ಯಂತ ವಿಶಾಲವಾಗಿದೆ. ಭಗವದ್ಗೀತೆ, ಉಪನಿಷತ್ತುಗಳು, ಧರ್ಮ ಶಾಸ್ತç ಗ್ರಂಥಗಳು, ಶಿವಸಂಹಿತೆ ಮುಂತಾದುವುಗಳೆಲ್ಲವೂ ಯೋಗದ ವಿವಿಧ ಮುಖಗಳನ್ನು ಅಥವಾ ಮಗ್ಗಲುಗಳನ್ನು ವಿವರಿಸಿವೆ. ಹೊರ ರಾಷ್ಟçಗಳೂ ಇಂದು ಯೋಗಕ್ಕೆ ಮಾನ್ಯತೆಯನ್ನು ನೀಡಿವೆ. ವಿದೇಶೀಯರೂ ಬದುಕಿನ ಅವಿಭಾಜ್ಯ ಅಂಗವಾಗಿ ಯೋಗವನ್ನು ಅಂಗೀಕರಿಸಿ ಅನುಷ್ಠಾನಿಸುತ್ತಿದ್ದಾರೆ. ವ್ಯಾಯಾಮದ ಭಾಗವಾಗಿ ಅವರು ಯೋಗವನ್ನು ರೂಢಿ ಮಾಡುತ್ತಿದ್ದಾರೆ, ಆದರೆ ವ್ಯಾಯಾಮ ಅಥವಾ ಯೋಗ ಭಂಗಿಗಳಷ್ಟೇ ಯೋಗವಲ್ಲ. ಯೋಗವು ಒಂದು ಜೀವನ ಶೈಲಿ, ಸುಂದರ ಬದುಕಿನ ಅವಿಭಾಜ್ಯ ನಿಯಂತ್ರಕ ಎಂಬುದಾಗಿ ಭಾರತೀಯ ಪರಂಪರೆ ಯೋಗವನ್ನು ಒಪ್ಪಿಕೊಂಡಿದೆ.
ನಾವು ಮನಸ್ಸನ್ನು ಪ್ರಫುಲ್ಲಿತವಾಗಿಡಲು ಓದುತ್ತೇವೆ, ಹಾಡುತ್ತೇವೆ, ಕಥೆ ಹೇಳುತ್ತೇವೆ, ದೇವರ ಭಜನೆ ಮಾಡುತ್ತೇವೆ, ಭಗವನ್ನಾಮಗಳನ್ನು ಜಪಿಸುತ್ತೇವೆ, ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತೇವೆ, ಹಾರುತ್ತೇವೆ, ಕುಣಿಯುತ್ತೇವೆ, ಅಭಿನಯಿಸುತ್ತೇವೆ, ದೇವರನ್ನು ನಮಿಸುತ್ತೇವೆ, ಪೂಜಿಸುತ್ತೇವೆ, ಭೂತಾಯಿಯನ್ನು ವಂದಿಸುತ್ತೇವೆ, ನದೀ ಜಲ ಮೂಲಗಳನ್ನು ಆದರಿಸುತ್ತೇವೆ, ಕಿರಿಯರನ್ನು ಪ್ರೀತಿಸುತ್ತೇವೆ, ಗುರು ಹಿರಿಯರನ್ನು ಗೌರವಿಸುತ್ತೇವೆ. ಹೀಗೆ ನಾವು ಮಾಡುವ ಎಲ್ಲಾ ನೈತಿಕ ಮೌಲ್ಯದ ಕಾರ್ಯಗಳಿಗೆ ಶಿಸ್ತಿನ ರೂಪ ನೀಡುವುದೇ ಯೋಗ. ಬದುಕಿನ ನಿಯಮಗಳ ಪಾಲನೆಯಾಗಲು ಯೋಗವೇ ರಾಜ ರಸ್ತೆ. ಯದಾ ಯದಾ ಯೋಗಃ| ತದಾ ತದಾ ನ ರೋಗಃ| ಎಂಬ ಮಾತಿದೆ. ರೋಗ ಬರುವುದು ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ರೋಗ ಬರುತ್ತದೆ. ದೇಹ ಮತ್ತು ಮನಸ್ಸುಗಳ ರೋಗಗಳನ್ನು ಕಳಚಿ ಸುಂದರ ಬದುಕು ಸಾಗಿಸಲು ಯೋಗವೊಂದೇ ರಹದಾರಿ.
ಉತ್ತಮ ವಿಚಾರಗಳನ್ನು ಆಲಿಸುವುದು ಮತ್ತು ಪಾಲಿಸುವುದು ಹಾಗೂ ಅದಕ್ಕಾಗಿ ಕೈಗೊಳ್ಳುವ ಸತ್ಸಂಗಗಳು, ಉತ್ತಮ ಸಾಹಿತ್ಯ ಗ್ರಂಥಗಳ ಪಠಣ, ಆಗಾಗ ಕೌಟುಂಬಿಕ ಮಿಲನ, ಅಗತ್ಯವಿರುವವರಿಗೆ ನೆರವು, ರಕ್ತದಾನ, ನೇತ್ರದಾನ, ಸಾಮಾಜಿಕ ಪಿಡುಗುಗಳಿಂದ ಮುಕ್ತಿ ಇವೆಲ್ಲವೂ ಯೋಗವೇ ಆಗಿದೆ. ನಮ್ಮ ಪ್ರಾಣ ಶಕ್ತಿಯನ್ನು ಬಲಗೊಳಿಸಲು ನಾವು ಪ್ರತೀ ದಿನ ನಿಯಮಿತವಾಗಿ ಯೋಗಾನುಷ್ಠಾನ ಮಾಡಿದರೆ ಮಾತ್ರ ಸಾಧ್ಯ. ಉಸಿರಾಟದ ನಿಯಂತ್ರಣ, ಮಾಂಸ ಖಂಡ- ನರನಾಡಿ- ಮೂಳೆಗಳು ಬಲಗೊಳ್ಳಲು, ದೇಹದ ಎಲ್ಲಾ ಅಂಗಾಗಗಳೂ ಸುಸ್ಥಿರವಾಗಿರಲು ಯೋಗವೇ ಅಗತ್ಯ. ಮನೋಬಲ, ಸ್ಮರಣ ಶಕ್ತಿ, ಆಹಾರದಲ್ಲಿ ಶಿಸ್ತು, ನಡೆ ನುಡಿಗಳಲ್ಲಿ ಆತ್ಮೀಯತೆ ಮತ್ತು ವಿನಮ್ರತೆ ಮೈಗೂಡಲು ಯೋಗವೇ ಸಾಧನ.
ಪರಿಸರದ ಶುಚಿತ್ವ, ಮನಸ್ಸಿನ ಶುಚಿತ್ವ, ಶ್ವಾಸೋಚ್ಛಾ÷್ವಸದಲ್ಲಿ ನಿಯಂತ್ರಣ ಸಾಧಿಸಲು ಯೋಗವೇ ಪೂರಕ. ಯೋಗದಲ್ಲಿ ವಿವರಿಸಿರುವ ಅನುಲೋಮ-ವಿಲೋಮ, ಸೂರ್ಯ-ಚಂದ್ರ ಭೇದನ, ದಂತ್ಯಾನುಲೋಮ ವಿಲೋಮ, ಜಿಹ್ವಾನುಲೋಮ ವಿಲೋಮ, ನಾಡಿ ಶುದ್ಧಿ, ಭ್ರಾಮರೀ, ಓಂಕಾರ, ಪೂರಕ-ಕುಂಭಕ-ರೇಚಕ ಉಸಿರಾಟ ಪ್ರಕ್ರಿಯೆಗಳು ಮೊದಲಾದುವುಗಳೆಲ್ಲವೂ ಪ್ರಾಣಾಯಾಮದ ನಾನಾ ಅಂಗಗಳಾಗಿ ದೇಹಾಂತರ್ಗತ ಮಾಲಿನ್ಯವನ್ನು ಹಾಗೂ ದುರ್ಗಂಧಗಳನ್ನು ನಮ್ಮ ದೇಹ ಮತ್ತು ಮನಸ್ಸುಗಳಿಂದ ವಿಮುಖಗೊಳಿಸಿ ದೇಹದ ಆರೋಗ್ಯ ಮತ್ತು ಸೌಂದರ್ಯವನ್ನು ವರ್ದಿüಸುತ್ತವೆ.
ಯೋಗವೆಂದೊಡನೆ ನಮಗೆ ಯಾಗ, ತ್ಯಾಗ, ಜಾಗ ಮತ್ತು ರೋಗ ಎಂಬ ಪದಗಳು ಪ್ರಮುಖವಾಗಿ ನೆನಪಿಗೆ ಬರಲೇ ಬೇಕು. ನಾವು ಯಾಗವೊಂದನ್ನು ಮಾಡುವಾಗ ಎಷ್ಟೊಂದು ಶ್ರದ್ಧೆ ಮತ್ತು ಭಕ್ತಿ ಅಥವಾ ಪೂಜ್ಯತೆಗಳನ್ನು ಹೊಂದಿರುತ್ತೇವೆ? ಅಂತರAಗ ಮತ್ತು ಬಹಿರಂಗಗಲಲ್ಲಿ ಶುದ್ಧಿಗಳಾಗಿರಲು ಬಹಳಷ್ಟು ಪ್ರಯತ್ನಿಸುತ್ತೇವೆ ಅಲ್ಲವೇ? ನಮ್ಮ ಬದುಕಿಗೆ ಸುಂದರ ನಾಳೆಗಳನ್ನು ಒದಗಿಸುವ ಯೋಗದ ಬಗ್ಗೆಯೂ ನಾವು ಯಾಗಕ್ಕೆ ನೀಡುವ ಶ್ರದ್ದೆ, ಭಕ್ತಿ, ಬದ್ಧತೆ, ಪ್ರಾಮಾಣಿಕತೆ, ಪೂಜ್ಯತೆ ಮತ್ತು ಶುಚಿತ್ವಗಳನ್ನು ಹೊಂದಿರುವುದು ಅತ್ಯಗತ್ಯ. ನಾವು ತ್ಯಾಗ ಮನೋಭಾವದವರೂ, ಶುದ್ಧಾತ್ಮರೂ ಆಗಿದ್ದಾಗ ನಮ್ಮ ಯೋಗಾಚರಣೆಗೆ ಅರ್ಥ ಬರುತ್ತದೆ. ಸಮಾಜಕ್ಕಾಗಿಯೋ, ದೇಶಕ್ಕಾಗಿಯೋ, ಬದುಕಿನ ಸಿದ್ಧಾಂತಕ್ಕಾಗಿಯೋ, ಮೌಲ್ಯ ನಿಷ್ಠೆಗಾಗಿಯೋ ಅನ್ಯಾನ್ಯ ಸಂದರ್ಭಗಳಲ್ಲಿ ನಾವು ಹಲವಾರು ವಿಷಯಗಳನ್ನು ತ್ಯಾಗ ಮಾಡಲೇ ಬೇಕಾಗುತ್ತದೆ, ಎಲ್ಲ ಸ್ವರೂಪದ ಮೋಹಗಳನ್ನೂ ತ್ಯಾಗ ಮಾಡಬೇಕಾಗುತ್ತದೆ. ತ್ಯಾಗವೂ ಯೋಗದ ಪ್ರಮುಖ ಭಾಗ ಹಾಗೂ ಯೋಗಿ ಅಥವಾ ಯೋಗಿನಿಯ ಲಕ್ಷಣ. ಜಾಗ ಎಂದೊಡನೆ ನಮ್ಮ ಮನೆ, ಪರಿಸರ, ಗ್ರಾಮ, ಜಿಲ್ಲೆ ಹೀಗೆ ದೇಶ, ಭಾಷೆ ಮತ್ತು ಧರ್ಮದ ಶುದ್ಧೀಕರಣವೂ ಸೇರಿದೆ. ನಮ್ಮ ಪರಿಸರ ಶುದ್ಧವಾಗಿದೆ ಎಂದರೆ ರೋಗ ರುಜಿನು ಮುಕ್ತಗಾಗಿ ನೆಲವನ್ನು ಶುದ್ಧವಾಗಿರಿಸಿದ್ದೇವೆ, ಭಾಷಾ ಗೊಂದಲಗಳಿಲ್ಲ ಹಾಗೂ ನಾವು ಧರ್ಮ ಸಹಿಷ್ಣುಗಳು ಹಾಗೂ ಸುಧರ್ಮ ಪಾಲಕರಾಗಿದ್ದೇವೆ ಎಂಬ ನೀತಿಗೊಳಪಡಬೇಕಾಗಿದೆ. ಬದುಕಿಗೆ ಇವುಗಳೂ ಆರೋಗ್ಯ, ಸೌಂದರ್ಯ, ಸುಖ- ಶಾಂತಿ ಮತ್ತು ನೆಮ್ಮದಿಗಳನ್ನು ನೀಡುತ್ತವೆ ಎಂಬ ಸಂಕಲ್ಪವಿರಬೇಕು. ಇಲ್ಲಿ ಹೇಳಿರುವ ರೋಗಗಳು ದೈಹಿಕ ರೋಗಗಳಿಗಿಂತ ಮಿಗಿಲಾದ ಮನಸ್ಸಿಗೆ ಅಂಟಿಕೊAಡಿರುವ ಅನಪೇಕ್ಷಿತವಾದ ನಾನಾ ಕಿಲುಬುಗಳು. ಇವುಗಳಿಂದ ಮುಕ್ತರಾಗದವರು ಯೋಗಿಯಾಗಲಾರರು. ಅಂತಹವರ ಬದುಕು ಸುಮಧುg ಮತ್ತು ಸುಂದರÀ ಆಗಲಾರದು. ಮಾನವನಲ್ಲಿ ಯೋಗದ ಎಲ್ಲ ಅಗತ್ಯಾಂಶಗಳು ಮೇಳೈಸಿದಾಗ ಅದು ಮೌಲಿಕ ಜೀವನವೇ ಆಗಿರುತ್ತದೆ ಎಂಬ ಸತ್ಯಾಂಶದಿAದ ನಾವು ಹೊರಗುರುಳಲೇ ಬಾರದು.
ನಾವು ಯೋಗ ಎಂದೊಡನೇ ಯೋಗಾಸನ, ಯೋಗ ಭಂಗಿಗಳು ಆತವಾ ವ್ಯಾಯಾಮಗಳು ಮಾತ್ರವೇ ಯೋಗ ಎಂದು ಪೂರ್ವಾಗ್ರಹದಿಂದ ಧ್ವನಿಸಬಾರದು. ಯೋಗ ಎಂದರೆ ಅದು ಬದುಕಿನ ಪ್ರಮುಖವಾದ ಪಂಚಾAಗ. ಬದುಕಿನ ಎಲ್ಲ ಅಗತ್ಯಗಳಂತೆ ಯೋಗವೂ ಪ್ರಮುಖವಾದ ಅಂಗ. ಬದುಕಿಗೆ ಅತೀ ಅಗತ್ಯವಾದ ಮತ್ತು ಮಹತ್ವವಾದ ನಾನಾ ಅಂಶಗಳನ್ನು ಮಾನವನಲ್ಲಿ ಒಟ್ಟುಗೂಡಿಸುವುದೇ ಯೋಗ. ಅದೇ ರೀತಿ ಬದುಕಿಗೆ ಬೇಡವಾದ ಅನಗತ್ಯವಾದ ಎಲ್ಲಾ ಅಂಶಗಳನ್ನೂ ನಮ್ಮಿಂದ ಕಳೆಯುವುದೇ ಯೋಗ ಎಂದು ಗೌರವದಿಂದ ಯೋಗಾನುಷ್ಠಾನ ಮಾಡಬೇಕು. ಹೊಲದಲ್ಲಿ ಕಳೆಗಳು ಬೆಳೆದರೆ ತೆನೆಗೆ ಕಳೆ ಬಾರದು. ಬೆಳೆಯೂ ಸಿಗದು. ಉತ್ತಮ ಬೆಳೆ ಬೇಕೆಂದಾದರೆ ಹೊಲದಲ್ಲಿರುವ ಕಳೆಗಳನ್ನು ಕಿತ್ತೆಸೆಯಲೇ ಬೇಕು. ಹಾಗೇಯೇ ಬದುಕಿನ ಬೆಳವಣಿಗೆಗೆ ನಮ್ಮಲ್ಲಿರುವ ದೈಹಿಕ ಮತ್ತು ಮಾನಸಿಕ ಕಳೆಗಳು ಮತ್ತು ಕೊಳೆಗಳ ನಾಶವಾಗಲೇಬೇಕು. ಯೋಗ ಸೂತ್ರವೇ ಮನುಜ ಕಳೆಗಳ ಮೂಲೋತ್ಪಾಟನೆಗೆ ಸೂಕ್ತ ಮತ್ತು ದಿವ್ಯ ಔಷಧ, ಹಾಗೂ ಸತ್ಪಥದ ದಾರಿ ದೀಪ. ಯೋಗದಿಂದಲೇ ಸುಂದರ ಬದುಕು ರೂಪಿಸಲು ಸಾಧ್ಯ ಎಂದು ಘಂಟಾ ಘೋಷವಾಗಿ ಹೇಳಬಹುದು.
ಆದುದರಿಂದ ಯೋಗವೆಂಬ ಡಿಂಡಿಮವು ಪ್ರತಿಯೊಂದು ಮನೆಯಲ್ಲೂ ಧ್ವನಿಸಬೇಕು. ಯೋಗ ಡಿಂಡಿಮವನ್ನು ನುಡಿಸುವಲ್ಲಿ ಎಲ್ಲರ ಮನ ಮಿಡಿಯಬೇಕು. ಯೋಗವು ಏಕವ್ಯಕ್ತಿಯ ಬೆಳವಣಿಗೆಯ ಉದ್ದೇಶವನ್ನು ಪ್ರತಿಪಾದಿಸುವುದಿಲ್ಲ. ಸಮಷ್ಠಿಯೊಳಗೆ ಸಮಾನವಾದ ಪ್ರಗತಿ, ಸುಖ ಶಾಂತಿಗಳ ಸ್ಥಾಪನೆಯೇ ಯೋಗದ ಆಶಯ. ಈ ಸಾಧ್ಯತೆಗೆ ಪ್ರತಿಯೊಬ್ಬರೂ ಯೋಗ ಪಟುಗಳಾಗಬೇಕು, ಯೋಗ ಸಾಧಕರಾಗಬೇಕು ಅಥವಾ ಯೋಗಿಗಳಾಗಬೇಕು. ಅದಕ್ಕಾಗಿ ಎಲ್ಲರಿಗೂ ಯೋಗ ಶಿಕ್ಷಣ ದೊರೆಯಬೇಕು. ಯೋಗವನ್ನು ಕೇಸರೀಕರಣ ಎಂಬ ಕಾಮಾಲೆ ದೃಷ್ಟಿಯಿಂದ ನೋಡದೆ ಯೋಗವು ಭಾರತೀಯ ಬದುಕಿನ ಸಾಂಸ್ಕೃತಿಕ ಅಂಗವೆAಬ ತಿಳುವಳಿಕೆಯನ್ನು ಮಾನವನಲ್ಲಿ ಮೂಡಿಸಬೇಕು. ಜಾಗತಿಕವಾಗಿ ಯೋಗಕ್ಕೆ ಸಂಸ್ಕಾರ ಸೂತ್ರ ಎಂಬ ಮಾನ್ಯತೆ ಕೂಡಿಬರಬೇಕು. ಭಾರತೀಯರೆಲ್ಲರೂ ಯೋಗವನ್ನು ಮನ ಮನಗಳಿಗೆ ತಲುಪಿಸುವ “ಯೋಗ ಯೋಧರು” ಆಗಲೇ ಬೇಕಾದ ಅಗತ್ಯವನ್ನು ಕೊರೋನಾ ತೋರಿಸಿ ಕೊಟ್ಟಿದೆ. ಯೋಗ ಸಾಧಕರಿಗೆ ಕೊರೊನಾ ರೋಗ ಪೀಡಿಸಿದ ಉದಾಹರಣೆಗಳಿಲ್ಲ. ದೇಹದ ರೋಗ ನಿರೋಧಕ ಶಕ್ತಿ ಯೋಗಸಾಧಕರಿಗೆ ಅತ್ಯಧಿಕವಾಗಿರುತ್ತದೆ. ಯೋಗದ ನಿಜಾರ್ಥವನ್ನರಿಯುವ ಮತ್ತು ಅದನ್ನು ಎಲ್ಲರಿಗೂ ತಿಳಿಸುವ ಕೇಲಸವನ್ನು ಯೋಗ ಋಷಿಗಳ ಜನ್ಮ ಭೂಮಿಯಾದ ಭಾರತದಲ್ಲಿ ಜನಿಸಿದ ನಾವು ಮಾಡಬೇಕಲ್ಲದೆ ಇತರರು ಮಾಡಲೆಂದು ಕೈಕಟ್ಟಿ ಕುಳಿತುಕೊಳ್ಳುವುದು ಭೂಷಣವಾಗದು, ಅಲ್ಲವೇ?. ಜೀವನಪೂರಕವಾಗಿರುವ ಯೋಗ ಮನೆ ಮನೆಗಳಲ್ಲೂ ಅರಳುತ್ತಿರಲಿ