ಬಂಟ್ವಾಳ, ಜೂ.18: ತಾಲೂಕಿನ ತುಂಬೆ ಬಿ.ಎ. ಕಾಲೇಜು ಪಕ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪಾದಾಚಾರಿ ಮೇಲ್ಸೇತುವೆಯ ಮೇಲ್ಛಾವಣಿಯಿಂದ ಕಿತ್ತು ನೇತಾಡುತ್ತಿದ್ದ ಅಪಾಯಕಾರಿ ತಗಟು ಶೀಟುಗಳನ್ನು ತುಂಬೆ ಗ್ರಾಮ ಪಂಚಾಯತ್ ಸದಸ್ಯ ಝಹೂರ್ ಅಹ್ಮದ್ ತೆರವುಗೊಳಿಸಿದರು.
ದಶಕದ ಹಿಂದೆ ನಿರ್ಮಾಣವಾಗಿರುವ ಈ ಪಾದಚಾರಿ ಮೇಲ್ಸೇತುವೆಯ ಮೇಲ್ಛಾವಣಿಗೆ ಹೊದಿಸಿದ ತಗಡು ಶೀಟ್ ಗಳು ತುಕ್ಕು ಹಿಡಿದಿದೆ. ಇತ್ತೀಚೆಗೆ ಭಾರೀ ಗಾಳಿ ಮಳೆಯಿಂದ ಕೆಲವು ತಗಡು ಶೀಟ್ ಗಳ ಕೀಲಿಗಳು ತಪ್ಪಿ ಅಪಾಯಕಾರಿಯಾಗಿ ನೇತಾಡುತ್ತಿತ್ತು.
ಅಪಾಯಕಾರಿ ತಗಡು ಶೀಟ್ ನೇತಾಡುವುದನ್ನು ಗಮನಿಸಿದ ತುಂಬೆ ಗ್ರಾಮ ಪಂಚಾಯತ್ ಸದಸ್ಯ ಗಣೇಶ್ ಸಾಲ್ಯಾನ್ ಅವರ ಮಾಹಿತಿಯಂತೆ, ಗ್ರಾಮ ಪಂಚಾಯತ್ ಸದಸ್ಯ ಝಹೂರ್ ಅಹ್ಮದ್ ಅವರು ತೆರಳಿ ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಶೌಹಾನ್ ತುಂಬೆ, ಸಿದ್ದೀಕ್ ತುಂಬೆ ಸಹಕಾರ ನೀಡಿದರು.
ಮೇಲ್ಸೇತುವೆಗೆ ಅಳವಡಿಸಿರುವ ಎಲ್ಲಾ ತಗಡು ಶೀಟ್ ಗಳ ಕೀಲಿಗಳು ತುಕ್ಕು ಹಿಡಿದಿವೆ. ಕೆಲವು ಶೀಟ್ ಗಳು ಈಗಾಗಲೇ ಗಾಳಿಗೆ ಹಾರಿ ಕೆಳಗೆ ಬಿದ್ದಿವೆ. ಕೀಲಿ ತಪ್ಪಿ ನೇತಾಡುತ್ತಿದ್ದ ಕೆಲವು ಶೀಟ್ ಗಳನ್ನು ತೆರವು ಮಾಡಿ ಸೇತುವೆಯ ಒಳಗೆ ಇಟ್ಟಿದ್ದೇವೆ ಎಂದು ಝಹೂರ್ ಅಹ್ಮದ್ ತಿಳಿಸಿದ್ದಾರೆ.
ಮೇಲ್ಸೇತುವೆಯಲ್ಲಿ ಇನ್ನೂ ಕೆಲವು ಶೀಟ್ ಗಳು ಕೀಲಿಗಳು ತಪ್ಪಿ ಅಪಾಯಕಾರಿಯಾಗಿದೆ. ಗಾಳಿ ಬೀಸಿದಾಗ ಹಾರಿ ಕೆಳಗೆ ಬೀಳಬಹುದು. ಈ ಸಂದರ್ಭದಲ್ಲಿ ಕೆಳಗೆ ರಸ್ತೆಯಲ್ಲಿ ಸಂಚಾರಿಸುವ ಪಾದಾಚಾರಿಗಳು ಹಾಗೂ ದ್ವಿಚಕ್ರ ಮತ್ತು ಇತರ ವಾಹನಗಳ ಸವಾರರ ಪ್ರಾಣಕ್ಕೆ ಅಪಾಯವಿದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಮೇಲ್ಸೇತುವೆಯ ಮೇಲ್ಛಾವಣಿಯನ್ನು ದುರಸ್ತಿ ಮಾಡುವ ಮೂಲಕ ಸುಸ್ಥಿತಿಗೆ ತರಬೇಕು ಎಂದು ಝಹೂರ್ ಅಹ್ಮದ್ ಆಗ್ರಹಿಸಿದ್ದಾರೆ.