ವಿಟ್ಲ: ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಲಾಕ್ ಡೌನ್ ಸಂದರ್ಭದಲ್ಲಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಲಾರಿ, ಟ್ಯಾಂಕರ್, ಟ್ರಕ್, ಪಿಕಪ್ ಮೊದಲಾದ ಘನವಾಹನಗಳ ಚಾಲಕರು, ಕೂಲಿ ಕಾರ್ಮಿಕರಿಗೆ ಮಧ್ಯಾಹ್ನದ ಉಚಿತ ಊಟ ನೀಡುವ ಯೋಜನೆಗೆ ಕಲ್ಲಡ್ಕ ಜಂಕ್ಷನ್ ನಲ್ಲಿ ಚಾಲನೆ ನೀಡಲಾಯಿತು.
ಎಂ.ಫ್ರೆಂಡ್ಸ್ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಕಾರ್ಯದರ್ಶಿ ಆರಿಫ್ ಪಡುಬಿದ್ರಿ, ಕೋಶಾಧಿಕಾರಿ ಅಬೂಬಕರ್ ವಿಟ್ಲ, ಎನ್ನಾರೈ ಸದಸ್ಯರಾದ ಫಾರೂಕ್ ಜುಬೈಲ್, ಮುಸ್ತಫಾ ಇರುವೈಲ್, ಸದಸ್ಯರಾದ ಝುಬೈರ್, ನೌಶೀನ್, ಮುಸ್ತಫಾ ಗೋಳ್ತಮಜಲು, ಆಶಿಕ್ ಕುಕ್ಕಾಜೆ, ರಫೀಕ್ ಕಲ್ಲಡ್ಕ ಮೊದಲಾದವರು ಭಾಗವಹಿಸಿದ್ದರು. ಜೂನ್ 14ರ ತನಕ ಈ ಯೋಜನೆ ಮುಂದುವರಿಯಲಿದ್ದು, ಲಾಕ್ ಡೌನ್ ವಿಸ್ತರಣೆಯಾದರೆ ನಂತರದ ದಿನಗಳಲ್ಲೂ ಅನ್ನಸೇವೆ ಕುರಿತು ಚಿಂತಿಸಲಾಗುವುದು ಎಂದು ಎಂ.ಫ್ರೆಂಡ್ಸ್ ಪ್ರಕಟಣೆ ತಿಳಿಸಿದೆ. ಎಂ.ಫ್ರೆಂಡ್ಸ್ ಕಳೆದ ಮೂರೂವರೆ ವರ್ಷಗಳಿಂದ ದ.ಕ. ಜಿಲ್ಲಾ ವೆನ್ಲಾಕ್ ಸರಕಾರಿ ಆಸ್ಪತ್ರೆ ಹಾಗೂ ಲೇಡಿಗೋಶನ್ ಸರಕಾರಿ ಆಸ್ಪತ್ರೆಯ ರೋಗಿಗಳ ಜೊತೆಗಾರರಿಗೆ ದಿನನಿತ್ಯ ರಾತ್ರಿಯ ಭೋಜನ ವಿತರಿಸುತ್ತಿರುವುದನ್ನು ಸ್ಮರಿಸಬಹುದು.