Thursday, October 19, 2023

ಬಿಸಿರೋಡು -ಪುಂಜಾಲಕಟ್ಟೆ ಹೆದ್ದಾರಿ ಕಾಮಗಾರಿ ಮುಗಿಯುತ್ತಾ ಬಂದರೂ ರಸ್ತೆಗಾಗಿ ಜಮೀನು ಬಿಟ್ಟವರ ಪಾಲಿಗೆ ಇನ್ನೂ ಸಿಗದ ಪರಿಹಾರ

Must read

ಬಂಟ್ವಾಳ: ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದರೂ ನಮಗೆ ಇಲಾಖೆಯಿಂದ ಪರಿಹಾರದ ಪತ್ರ ಬಂತೇ ವಿನಃ ಪರಿಹಾರ ಬಂದಿಲ್ಲ ಎಂದು ರಸ್ತೆಗಾಗಿ ಜಾಗ ಬಿಟ್ಟು ಕೊಟ್ಟವರಿಗೆ ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ. ಕೋವಿಡ್ ಕಾರಣದಿಂದ ಅಧಿಕಾರಿಗಳು ಆಸ್ಪತ್ರೆ ಸೇರಿದ್ದ ಹಿನ್ನೆಲೆಯಲ್ಲಿ ಪರಿಹಾರ ವಿತರಣೆ ವಿಳಂಬವಾಗಿದ್ದು, ಶೀಘ್ರದಲ್ಲಿ ಅವರ ಜಾಗದ ಮೊತ್ತ ಜಮೆಯಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಹೇಳುತ್ತಿದೆ.

ಕಳೆದ ಎರಡು-ಮೂರು ವರ್ಷಗಳ ಹಿಂದೆ ಹೆದ್ದಾರಿಯ ಅಭಿವೃದ್ಧಿಗಾಗಿ ಬಂಟ್ವಾಳ ಪುರಸಭೆ ಸೇರಿದಂತೆ ತಾಲೂಕಿನ ನಾವೂರು, ಕಾವಳಮೂಡೂರು, ಕಾವಳಪಡೂರು ಹಾಗೂ ಪಿಲಾತಬೆಟ್ಟು ಗ್ರಾ.ಪಂ.ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂಸ್ವಾಧ್ವೀನಾಧಿಕಾರಿಯವರ ಮೂಲಕ ಹಲವಾರು ಮಂದಿಯ ಭೂಮಿಯನ್ನು ಸ್ವಾಧ್ವೀನ ಪಡಿಸಿಕೊಳ್ಳಲಾಗಿತ್ತು.

ಈ ರೀತಿ ಭೂಮಿ ಕಳೆದುಕೊಂಡವರ ದಾಖಲೆಯನ್ನು ಪಡೆದು ಕಳೆದ ಡಿಸೆಂಬರ್‌ನಲ್ಲಿ ಪ್ರತಿ ಭೂ ಮಾಲಕರಿಗೂ ಕೂಡ ಅವರ ಭೂಮಿಗೆ ನಿಗದಿ ಪಡಿಸಿದ ಮೊತ್ತವನ್ನು ನಮೂದಿಸಿ ನೋಟಿಸ್‌ವೊಂದನ್ನು ನೀಡಲಾಗಿದ್ದು, ಆದರೆ ಈ ತನಕ ಪರಿಹಾರ ಸಿಕ್ಕಿಲ್ಲ ಎಂಬುದು ಭೂಮಾಲಕರು ಆರೋಪಿಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮೂಲಕ ಸ್ವಾಧ್ವೀನ ಪಡಿಸಿಕೊಂಡ ಭೂಮಿಗೆ ಬೆಂಗಳೂರಿನಿಂದಲೇ ವಿಶೇಷ ಭೂಸ್ವಾಧೀನಾಧಿಕಾರಿಗಳ ಮೂಲಕ ಪರಿಹಾರ ಮೊತ್ತ ನಿಗದಿಯಾಗುತ್ತಿದ್ದು, ಪಾವತಿಯ ಪ್ರಕ್ರಿಯೆಯನ್ನೂ ಅವರೇ ನೋಡಿಕೊಳ್ಳುತ್ತಾರೆ. ಆದರೆ ಕೋವಿಡ್ ಕಾರಣಕ್ಕೆ ಅಽಕಾರಿಗಳು ಹಾಸ್ಪಿಟಲೈಸ್ಡ್ ಆದ ಕಾರಣ ವಿಳಂಬವಾಗಿದೆ. ನಿಗದಿ ಪಡಿಸಿದ ಮೊತ್ತ ಭೂಮಾಲಕರಿಗೆ ಸಿಕ್ಕೇ ಸಿಗುತ್ತದೆ. ಕಡಿಮೆಯಾಗಿದ್ದರೆ ಕಾನೂನು ಹೋರಾಟಕ್ಕೇ ಅವಕಾಶವಿದೆ ಎಂಬುದು ಹೆದ್ದಾರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ

ಪ್ರತಿ ಭೂಮಾಲಕರಿಗೂ ಇಲಾಖೆ ಪತ್ರವೊಂದನ್ನು ನೀಡಿದ್ದು, ಗ್ರಾಮಾಂತರ ಭಾಗದಲ್ಲಿ ಎಕರೆಗೆ ನಿಗದಿ ಪಡಿಸಿದ ಮೌಲ್ಯ, ಗುಂಟೆಯೊಂದಕ್ಕೆ ನಿಗದಿ ಪಡಿಸಿದ ಮೌಲ್ಯ, ನಗರ ವ್ಯಾಪ್ತಿಯಿಂದ ಇರುವ ದೂರ, ಕಟ್ಟಡದ ಮೌಲ್ಯ, ಮರಗಳ ಮೌಲ್ಯ(ತೋಟಗಾರಿಕೆ), ಇತರ ಮರಗಳ ಮೌಲ್ಯ ನಿಗದಿ ಪಡಿಸಿ ಒಟ್ಟು ಪರಿಹಾರವನ್ನು ತಿಳಿಸಿದ್ದಾರೆ. ಬಳಿಕ ಅಷ್ಟೇ ಮೊತ್ತವನ್ನು ಭೂ ಪರಿಹಾರದ ಮೊಬಲಗಿನ ಮೇಲೆ ೧೦೦ ಶೇ. ಶಾಸನ ಬದ್ಧ ಭತ್ಯೆ ಹಾಗೂ ಕಾಯ್ದೆಯ ಪ್ರಕಾರ ಪರಿಹಾರದ ಮೊತ್ತದ ಮೇಲೆ ೧೨ ಶೇ. ಹೆಚ್ಚುವರಿ ಮೊತ್ತವನ್ನೂ ಸೇರಿಸಿ ಪರಿಹಾರದ ಅಂತಿಮ ಮೊತ್ತವನ್ನು ತಿಳಿಸಿದ್ದಾರೆ.

ನಮ್ಮ ಭೂಮಿಯ ಪರಿಹಾರ ಮೊತ್ತಕ್ಕೆ ೨೦೧೯-೨೦ನೇ ಸಾಲಿನ ಬಡ್ಡಿಯನ್ನು ನೀಡುವುದಾಗಿ ತಿಳಿಸಿದ್ದು, ೨೦೨೦-೨೧ನೇ ಸಾಲಿನ ಬಡ್ಡಿಯ ಕುರಿತು ಮಾಹಿತಿ ನೀಡಿಲ್ಲ. ಎರಡೆರಡು ಬಾರಿ ದಾಖಲೆಯನ್ನು ನೀಡಿದ್ದು, ಪರಿಹಾರ ಮೊತ್ತ ನೀಡುವುದಕ್ಕೆ ವಿಳಂಬ ಮಾಡುತ್ತಿದ್ದಾರೆ. ಜತೆಗೆ ಅಭಿವೃದ್ಧಿಗೆ ಅಡ್ಡಿಯಾಗಬಾರದು ಎಂದು ನಮ್ಮ ಪಟ್ಟಾ ಜಾಗ ಬಿಟ್ಟಿದ್ದೇವೆ, ಆದರೆ ಈಗ ಪರಿಹಾರ ನೀಡುವುದಕ್ಕೆ ವಿಳಂಬ ಮಾಡುತ್ತಿದ್ದಾರೆ ಎಂಬುದು ಭೂ ಮಾಲಕರ ಆರೋಪವಾಗಿದೆ.

 

 *ಹೋರಾಟಕ್ಕೆ ಸಿದ್ಧತೆ ನಡೆಸಿದ್ದೇವೆ* 

ನಮ್ಮ ನಾವೂರು ಗ್ರಾಮದಲ್ಲಿ ೩೨ ಮಂದಿ ಭೂಮಿ ಕಳೆದುಕೊಂಡಿದ್ದು, ಎರಡು ಮಂದಿಯ ಕಟ್ಟಡಕ್ಕೆ ಪರಿಹಾರ ನೀಡಿದ್ದಾರೆ. ಉಳಿದಂತೆ ನೋಟಿಸ್ ನೀಡಿರುವುದು ಬಿಟ್ಟರೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ನಾವು ಮುಂದಿನ ತಿಂಗಳಲ್ಲಿ ಹೋರಾಟಕ್ಕೆ ಸಿದ್ಧತೆ ನಡೆಸಿದ್ದೇವೆ. ಪರಿಹಾರ ಮೊತ್ತ ವಿಳಂಬವಾಗಿರುವುದಕ್ಕೆ ಒಂದು ವರ್ಷದ ಬಡ್ಡಿಯನ್ನು ಮಾತ್ರ ನಿಗದಿಪಡಿಸಿದ್ದಾರೆ.

 

ಸದಾನಂದ ನಾವೂರು

ಭೂಮಿ ಕಳೆದುಕೊಂಡವರು

More articles

Latest article