ಬಂಟ್ವಾಳ: ಪುಂಜಾಲಕಟ್ಟೆಯಿಂದ ಮುಂದುವರಿದ ಭಾಗವಾಗಿ ಚಾರ್ಮಾಡಿ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಇಲಾಖಾ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.
ಪುಂಜಾಲಕಟ್ಟೆ-ಚಾರ್ಮಾಡಿ ಮಧ್ಯದ ರಸ್ತೆ ಅಭಿವೃದ್ಧಿಯ ಕುರಿತು ಭೂಸ್ವಾಧೀನಕ್ಕೆ ಜಾಗ ಅಂತಿಮಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಸರ್ವೇ ಕಾರ್ಯ ಆರಂಭಗೊಂಡಿದ್ದು, ಬುಧವಾರ ಬೆಳ್ತಂಗಡಿ ಶಾಸಕರು ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ್ದಲ್ಲದೆ ರಸ್ತೆ ಅಭಿವೃದ್ಧಿ ಯ ಸಂದರ್ಭದಲ್ಲಿ ಸಾರ್ವಜನಿಕ ರಿಗೆ ತೊಂದರೆ ಯಾಗದ ನಿಟ್ಟಿನಲ್ಲಿ ಕೆಲವೊಂದು ಪ್ರಮುಖ ಕ್ರಮಕೈಗೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ.
ಬಿ.ಸಿ.ರೋಡಿನಿಂದ ಜಕ್ರಿಬೆಟ್ಟುವರೆಗೆ ದ್ವಿಪಥ ಕಾಂಕ್ರೀಟಿಕರಣ ರಸ್ತೆ ಕಾಮಗಾರಿ ಬಹತೇಕ ಅಂತಿಮ ಹಂತದಲ್ಲಿದ್ದು, ಜಕ್ರಿಬೆಟ್ಟುವಿನಿಂದ ಪುಂಜಾಲಕಟ್ಟೆ ವೆರೆಗಿನ ಡಾಮರೀಕರಣ ಕಾಮಗಾರಿ ಕೂಡ ಬಹುತೇಕ ಅಕ್ಟೋಬರ್ ನಲ್ಲಿ ಮುಗಿಯಲಿದೆ .
ಪುಂಜಾಲಕಟ್ಟೆಯಿಂದ ಮುಂದುವರಿದ ಭಾಗವಾಗಿ ಚಾರ್ಮಾಡಿವರೆಗೆ ಹಾಲಿ ರಸ್ತೆಯು ದ್ವಿಪಥ ರಸ್ತೆಯಾಗಿ ಅಭಿವೃದ್ಧಿಗೊಳ್ಳಲಿದೆ. ಈ ವೇಳೆ ಸಾಕಷ್ಟು ಭಾಗಗಳಲ್ಲಿ ರಸ್ತೆಯ ಅಗಲೀಕರಣ, ತಿರುವುಗಳ ತೆರವಿನ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ.
ಅಭಿವೃದ್ಧಿಗೊಳ್ಳುವ ಹೆದ್ದಾರಿಯ ಮಧ್ಯೆ ಒಟ್ಟು ಎಷ್ಟು ಭೂಸ್ವಾದೀನ ನಡೆಸಬೇಕು ಎಂಬುದರ ಕುರಿತು ಸರ್ವೇ ನಂಬರ್ ಆಧಾರದಲ್ಲಿ ಗುರುತು ಮಾಡಿ, ಬಳಿಕ ಅದಕ್ಕೆ ಪರಿಹಾರ ಮೊತ್ತ ನಿಗದಿಯಾಗಬೇಕಿದೆ. ಈ ಕಾರ್ಯದ ಹಿನ್ನೆಲೆಯಲ್ಲಿ ಪ್ರಸ್ತುತ ಸರ್ವೇ ಕಾರ್ಯ ನಡೆಯುತ್ತಿದ್ದು, ರಾಷ್ಟೀಯ ಹೆದ್ದಾರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೃಷ್ಣಕುಮಾರ್ ನೇತೃತ್ವದ ತಂಡ ಪರಿಶೀಲನೆ ನಡೆಸಿದೆ. ರಸ್ತೆಯ ಮಧ್ಯ(ಸೆಂಟ್ರಲೈಸ್ಡ್) ಭಾಗದಿಂದ ಸರ್ವೇ ಕಾರ್ಯ ನಡೆಯಲಿದೆ.
ಬಿ.ಸಿ.ರೋಡು- ಪುಂಜಾಲಕಟ್ಟೆ ರಸ್ತೆಯ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಕಳೆದ ಒಂದು ತಿಂಗಳಲ್ಲಿ ಸುರಿದ ಮಳೆ ಕಾಮಗಾರಿಯ ವೇಗವನ್ನು ಕುಂಠಿತಗೊಳಿಸಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅವರು ತಿಳಿಸಿದ್ದಾರೆ.