ರಾಷ್ಟೀಯ ಹೆದ್ದಾರಿಯ ಮಂಗಳೂರು ಬೆಂಗಳೂರು ಮಧ್ಯೆ ಇರುವ ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಮರು ಆರಂಭವಾಗಿದ್ದು 2023 ಕ್ಕೆ ಪೂರ್ಣಗೊಳ್ಳಲಿದೆ , ಇದರ ಜೊತೆಯಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ ರಸ್ತೆ ಅಭಿವೃದ್ದಿಗೆ ಸರಕಾರ ಅನುಮೋದನೆ ನೀಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಅವರು ಬಂಟ್ವಾಳದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ದವರ ಜೊತೆ ಮಾತನಾಡಿದರು.
ಬಿಸಿರೋಡು ನಿಂದ ಅಡ್ಡಹೊಳೆವರೆಗೆ ಕಾಂಕ್ರೀಟ್ ರಸ್ತೆಯ
ಕಾರ್ಯವನ್ನು ಹಿಂದೆ ಎಲ್‌ಆ್ಯಂಡ್‌ಟಿ ಸಂಸ್ಥೆಯವರು ಪ್ರಾರಂಭಿಸಿದ್ದು, ನಂತರದ ದಿನಗಳಲ್ಲಿ ಕೆಲವೊಂದು ಕಾನೂನಾತ್ಮಕ ಸಮಸ್ಯೆಯಿಂದ ಆ ಕಾರ್ಯ ನಿಂತಿದೆ.
ಅ ಬಳಿಕ ಮರು ಟೆಂಡರ್ ನಡೆದು ಶಿರಾಡಿಯಿಂದ ಕೆಲಸವನ್ನು ಪ್ರಾರಂಭಿಸಿದ್ದಾರೆ. ಶಿರಾಡಿಯಿಂದ ಬಿ.ಸಿ.ರೋಡುವರೆಗಿನ ಸಂಪೂರ್ಣ ಕಾಂಕ್ರೀಟ್ ರಸ್ತೆ 2023 ರೊಳಗೆ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.
ಬಿ.ಸಿ.ರೋಡಿನಿಂದ ಪೂಂಜಾಲಕಟ್ಟೆವರೆಗಿನ ಹೆದ್ದಾರಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.
ನಾರಾಯಣಗುರು ವೃತ್ತದಿಂದ ಜಕ್ರಿಬೆಟ್ಟುವರೆಗೆ ಕಾಂಕ್ರೀಟ್ ಕಾಮಗಾರಿ ಹಾಗೂ ಪುಂಜಾಲಕಟ್ಟೆವರೆಗೆ ದ್ವಿಪಥ ಹೆದ್ದಾರಿ ಕಾಮಗಾರಿ ವೇಗವನ್ನು ಪಡೆದುಕೊಂಡಿದೆ. ಭೂ ಸ್ವಾದೀನ, ಪೈಪುಲೈನ್ ಸಮಸ್ಯೆಯ ಜತೆಗೆ ಕೊರೊನಾ ಹಾಗೂ ಮಳೆಯಿಂದ ಕಾಮಗಾರಿ ಕೊಂಚ ವಿಳಂಬವಾಗಿದ್ದು, ಅಕ್ಟೋಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುತ್ತದೆ. ಇದರ ೨ನೇ ಹಂತವಾಗಿ ಮುಂದಿನ ಭಾಗವೆಂಬಂತೆ ಪೂಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ ಹೆದ್ದಾರಿ ಅಭಿವೃದ್ಧಿಗೆ ಸರಕಾರ ಅಂಗೀಕಾರ ನೀಡಿದೆ ಎಂದರು.