ಪಿಲಾತಬೆಟ್ಟು ವ್ಯ. ಸೇ.ಸ. ಸಂಘದಿಂದ ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರದ ಕೊರೊನಾ ವಾರಿಯರ‍್ಸ್‌ಗೆ ಸಮ್ಮಾನ
ಬಂಟ್ವಾಳ: ಬಂಟ್ವಾಳ ತಾಲೂಕು ಪುಂಜಾಲಕಟ್ಟೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಕೋವಿಡ್-೧೯ ವಾರಿಯರ‍್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಆರೋಗ್ಯ ಸಿಬಂದಿಗಳಿಗೆ ಸಮ್ಮಾನ ಹಾಗೂ ಸುರಕ್ಷತಾ ಸಾಮಾಗ್ರಿ ವಿತರಣೆ ಕಾರ್ಯಕ್ರಮ ಗುರುವಾರ ಪ್ರಾ.ಆ.ಕೇಂದ್ರದಲ್ಲಿ ಜರಗಿತು.
ಸಂಘದ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ ಉಡುಪ ಅವರು ಸಮ್ಮಾನಿಸಿ ಮಾತನಾಡಿ, ಸಮಾಜದ ಜನರ ಆರೋಗ್ಯ ರಕ್ಷಣೆಗಾಗಿ ತಮ್ಮನ್ನು ಸಮರ್ಪಿಸಿಕೊಂಡು, ಕೊರೋನಾ ನಿರ್ಮೂಲನ ಹೋರಾಟದ ಒತ್ತಡದಲ್ಲಿ ತಮ್ಮ ಜೀವವನ್ನು ಪಣವಾಗಿಟ್ಟುಕೊಂಡು ಸೇವಾ ತತ್ಪರರಾಗಿರುವ ವೈದ್ಯರು, ಸಿಬಂದಿ ಅವರ ಸೇವೆ ಅಮೂಲ್ಯವಾಗಿದ್ದು, ಅವರನ್ನು ಗೌರವಿಸುವುದು ಸಮಾಜದ ಕರ್ತವ್ಯ ಎಂದು ಹೇಳಿದರು.
ಪ್ರಾ.ಆ.ಕೇಂದ್ರದ ವೈದ್ಯಾಽಕಾರಿ ಡಾ| ಸತೀಶ್ ಎಂ. ಸಿ. ಅವರು ಮಾತನಾಡಿ, ಕೊರೊನಾ ಸಂದಿಗ್ದ ಪರಿಸ್ಥಿತಿಯಲ್ಲಿ ತಂಡವಾಗಿ ಕಾರ್ಯ ನಿರ್ವಹಿಸಿ, ಕೊರೊನಾ ಹಿಮ್ಮೆಟ್ಟಿಸುವಲ್ಲಿ ಆರೋಗ್ಯ ಕೇಂದ್ರದ ಸಿಬಂದಿಗಳು ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರನ್ನು ಗುರುತಿಸಿ ಗೌರವಿಸುವುದರ ಮೂಲಕ ಅವರ ಮನೋಸ್ಥೈರ್ಯ ಬೆಳೆಸುವುದು ಉತ್ತಮ ಕಾರ್ಯ ಎಂದು ಹೇಳಿದರು.
ಆಯುಷ್ ವೈದ್ಯಾಽಕಾರಿ ಡಾ| ಸೋಹನ್ ಕುಮಾರ್ ಅವರು ಮಾತನಾಡಿ, ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮ. ಸಹಕಾರ ಸಂಘದ ಕಾರ್ಯಕ್ಕೆ ಋಣಿಯಾಗಿದ್ದೇವೆ ಎಂದರು. ಪ್ರಾ. ಆ.ಕೇಂದ್ರದ ವೈದ್ಯರ ಸಹಿತ ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕಿಯರು, ವಾಹನ ಚಾಲಕರು, ಪ್ರಯೋಗಾಲಯ ಸಿಬಂದಿ, ಇತರ ವಿಭಾಗದ ಒಟ್ಟು ೨೦ ಮಂದಿ ಕೊರೋನಾ ವಾರಿಯರ‍್ಸ್ ರನ್ನು ನಗದು ಸಹಿತ ಸಮ್ಮಾನಿಸಲಾಯಿತು. ಇದೇ ವೇಳೆ ಮಾಸ್ಕ್, ಸ್ಯಾನಿಟೈಸರ್‌ನ್ನು ವಿತರಿಸಲಾಯಿತು.
ಪಿಲಾತಬೆಟ್ಟು ಗ್ರಾ. ಪಂ ಅಧ್ಯಕ್ಷೆ, ಸಂಘದ ನಿರ್ದೇಶಕಿ ಹರ್ಷಿಣಿ ಪುಷ್ಪಾನಂದ, ಸಂಘದ ಉಪಾಧ್ಯಕ್ಷ ಉಮೇಶ್ ಪೂಜಾರಿ, ನಿರ್ದೇಶಕರಾದ ಬೂಬ ಸಪಲ್ಯ, ಸುಂದರ ನಾಯ್ಕ, ಸೀತಾರಾಮ ಶೆಟ್ಟಿ ಸೇವಾ, ಸಂತೋಷ್ ಕುಮಾರ್ ಶೆಟ್ಟಿ, ನಾರಾಯಣ ಪೂಜಾರಿ, ಚಂದ್ರಶೇಖರ ಹೆಗ್ಡೆ, ದಿನೇಶ್ ಮೂಲ್ಯ, ಶಿವಯ್ಯ, ಸಿಬಂದಿಗಳಾದ ಬಬಿತಾ, ದೀಕ್ಷಿತ್ ಉಪಸ್ಥಿತರಿದ್ದರು.
ನಿರ್ದೇಶಕ ಪಿ.ಎಂ.ಪ್ರಭಾಕರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಾಹಣಾಽಕಾರಿ ಮಂಜಪ್ಪ ಮೂಲ್ಯ ವಂದಿಸಿದರು.