Wednesday, October 18, 2023

ನಡ್ವಂತಾಡಿ ಶ್ರೀ ವೇದವ್ಯಾಸ ವಾದಿರಾಜ ಮಠ: ದೈವಗಳ ನೂತನ ಆಲಯ, ಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆ

Must read

ಬಂಟ್ವಾಳ: ಉಡುಪಿ ಸೋದೆ ಮಠದ ಸುಪರ್ದಿಯಲ್ಲಿರುವ ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದ ನಡ್ವಂತಾಡಿಯಲ್ಲಿ ಶ್ರೀ ವೇದವ್ಯಾಸ ಮುಖ್ಯಪ್ರಾಣ ವಾದಿರಾಜ ಮಠದಲ್ಲಿ ನೆಲೆಗೊಂಡಿರುವ ದೈವಗಳಿಗೆ ನೂತನ ಆಲಯ ಮತ್ತು ಕಟ್ಟೆ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮ ಜರಗಿತು.

ಉಡುಪಿ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದ ಅವರು ಭೂಮಿ ಪೂಜೆ ನೆರವೇರಿಸಿ, ಅಶೀರ್ವಚನ ನೀಡಿ ಮಾತನಾಡಿ, ದೇವರು, ದೈವ, ಗುರು, ಹಿರಿಯರೆಂಬ ನಾಲ್ಕು ಕಂಬಗಳ ಮೇಲೆ ಧರ್ಮ ಚಪ್ಪರ ನಿಂತಿದೆ. ಪ್ರತಿ ಗ್ರಾಮಗಳಲ್ಲೂ ದೇವಸ್ಥಾನ ಮತ್ತು ದೈವಸ್ಥಾನಗಳ ಸಮಾನ ಅಭಿವೃದ್ಧಿ ಮತ್ತು ಸುಸ್ಥಿತಿ ಆ ಗ್ರಾಮದ ಏಕತೆಯ ಮೇಲೆ ನಿಂತಿದೆ.ಇಂದು ಇಲ್ಲಿ ಶಿಲಾನ್ಯಾಸಗೊಂಡ ದೈವಗಳ ಆಲಯ ನಿರ್ಮಾಣ ಕಾರ್ಯ ಅತೀ ಶೀಘ್ರವಾಗಿ ಪೂರ್ಣಗೊಂಡು ಸರ್ವ ದೈವಗಳ ಕೃಪೆ ಗ್ರಾಮದ ಎಲ್ಲರಿಗೂ ಸಿಗಲಿ ಎಂದು ಹೇಳಿದರು.

ಶ್ರೀ ವೇದವ್ಯಾಸ ಮುಖ್ಯಪ್ರಾಣ ದೇವರ ಸೇವಾ ಸಮಿತಿ ಪ್ರಮುಖರಾದ ಕೆ.ಲಕ್ಷ್ಮೀ ನಾರಾಯಣ ಉಡುಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ , ಈ ಪುಣ್ಯ ಕಾರ್ಯಕ್ಕೆ ಭಗವದ ಕ್ತರು  ತನು, ಮನ, ಧನದ ಸಹಕಾರ ನೀಡಬೇಕೆಂದು ಹೇಳಿದರು.  ಶ್ರೀ ಮಠದಲ್ಲಿದ್ದ ದೈವಗಳಿಗೆ ಆರಾಧನೆ ನಿಂತು ಹೋಗಿದ್ದು,ಆಲಯ ನಿರ್ಮಾಣದ ಪ್ರಯತ್ನ ನಡೆಯುತ್ತಿತ್ತು. ಈ ಬಾರಿ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ವಿಶೇಷ ಆಸಕ್ತಿ, ಆಶೀರ್ವಾದಗಳೊಂದಿಗೆ ಪ್ರಶ್ನಾ ಚಿಂತನೆ ನಡೆಸಿ,ಸುಮಾರು ೧೫ ಲಕ್ಷ ರೂ.ಗಳ ಅಂದಾಜು ವೆಚ್ಚದೊಂದಿಗೆ ಪಿಲಿಚಾಮುಂಡಿ, ಜುಮಾದಿ, ಪೊಟ್ಟ ಪಂಜುರ್ಲಿಗೆ ಆಲಯ, ಹಾಗೂ ಕಲ್ಲುರ್ಟಿ, ಕಲ್ಕುಡ, ಕಾಳಮ್ಮ, ಗುಳಿಗ ದೈವಗಳಿಗೆ ಕಟ್ಟೆ ನಿರ್ಮಾಣಕ್ಕೆ ಶ್ರೀಗಳಿಂದ ಭೂಮಿ ಪೂಜೆ ನಡೆಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ  ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಆಲಯ ನಿರ್ಮಾಣ ಕಾರ್ಯಕ್ಕೆ ತಮ್ಮ ಮೊದಲ ಕಾಣಿಕೆಯನ್ನು ಸಮರ್ಪಿಸಿ, ಆಲಯ ನಿರ್ಮಾಣದ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿದರು.

ಮಾಗಣೆ ತಂತ್ರಿ ಬಾಲಕೃಷ್ಣ ಪಾಂಗಣ್ಣಾಯರ ಪೌರೋಹಿತ್ಯದಲ್ಲಿ  ನಡೆದ ಕಾರ್ಯಕ್ರಮದಲ್ಲಿ ತಂತ್ರಿಗಳಾದ  ಉದಯ ಪಾಂಗಣ್ಣಾಯ, ಪಾದ ಪಾಂಗಣ್ಣಾಯ, ವೇದವ್ಯಾಸ ಪಾಂಗಣ್ಣಾಯ, ಕ್ಷೇತ್ರದ ಅರ್ಚಕ ರಾಘವೇಂದ್ರ ಕುಂಜ್ಞಣ್ಣಾಯ, ಆಲಯ ನಿರ್ಮಾಣ ಸಮಿತಿ ಅಧ್ಯಕ್ಷ ಮೋಹನ ಶೆಟ್ಟಿ ನರ್ವಲ್ದಡ್ಡ, ಡಾ. ರಾಮಕೃಷ್ಣ ಎಸ್.ಸುಂದರ ನಾಯ್ಕ, ಕೊರಗ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

More articles

Latest article