ಕರ್ನಾಟಕ: ಮದುವೆ ಸಮಾರಂಭಗಳಿಗೆ 40 ಜನ ಸೀಮಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯಾದ್ಯಂತ ಕಲ್ಯಾಣ ಮಂಟಪ, ಹೋಟೆಲ್ ಸಭಾಂಗಣ, ರೆಸಾರ್ಟ್‌ಗಳಲ್ಲಿ ಮದುವೆಯನ್ನು ನಡೆಸಬಹುದು, ಈ ನಿಯಮ ಜೂನ್ 28 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.
ಕಲ್ಯಾಣ ಮಂಟಪಗಳಲ್ಲಿ ನಡೆಯುವ ಮದುವೆಯಲ್ಲಿ ಪಾಲ್ಗೊಳ್ಳಲು 40 ಜನರಿಗೆ ಅವಕಾಶ ನೀಡಲಾಗುವುದು. ಮದುವೆಯಲ್ಲಿ ಭಾಗಿಯಾಗುವವರಿಗೆ ಪಾಸ್ ಕಡ್ಡಾಯ ಎಂದು ಸರ್ಕಾರ ತಿಳಿಸಿದೆ.
ಕರ್ನಾಟಕ ಸರ್ಕಾರ ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಘೋಷಿಸಲಾಗಿದೆ.
ಬೆಂಗಳೂರು ಹಾಗೂ ಇತರ 19 ಜಿಲ್ಲೆಗಳಲ್ಲಿ ಈ ನಿಯಮ ಇರಲಿದೆ. ಈ ಅವಧಿಯಲ್ಲಿ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಸಮಯಾವಕಾಶ ನೀಡಲಾಗಿದೆ.
ಆಹಾರ ಸಾಮಾಗ್ರಿಗಳ ಅಂಗಡಿ, ದಿನಸಿ ಅಂಗಡಿ, ಹಣ್ಣು, ತರಕಾರಿ ಅಂಗಡಿಗಳು, ಮಾಂಸ, ಮೀನು ಮಾರಾಟ, ಹಾಲು ಹಾಗೂ ಇತರ ಡೈರಿ ಉತ್ಪನ್ನಗಳ ಮಾರುಕಟ್ಟೆಯು ವಾರಾಂತ್ಯದ ಕರ್ಫ್ಯೂ ಅವಧಿಯಲ್ಲೂ ತೆರೆದಿರುತ್ತದೆ. ಜೂನ್ 21ರ ನಂತರ ಕರ್ನಾಟಕ ಸರ್ಕಾರ ಲಾಕ್ಡೌನ್ ನಿಯಮಾವಳಿಗಳಲ್ಲಿ ಹಲವು ಸಡಿಲಿಕೆಗಳನ್ನು ಮಾಡಿದೆ. ಆದರೂ ವಾರಾಂತ್ಯ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟುವಿಕೆಯ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.