ಕೊರೋನ ಮುನ್ನೆಚ್ಚರಿಕೆ ಮತ್ತು ನಿಯಂತ್ರಣಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮ ಪಂಚಾಯತ್ ನೊಂದಿಗೆ ಹಲವು ಸಂಘ-ಸಂಸ್ಥೆಗಳು ಮತ್ತು ದಾನಿಗಳು ಕೈಜೋಡಿಸುತ್ತಿದ್ದು, ಈ ನಿಟ್ಟಿನಲ್ಲಿ ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾನಿಯೋರ್ವರು ಪ್ರಾಣವಾಯು ಯಂತ್ರಗಳನ್ನು ನೀಡಿರುವುದು ಶ್ಲಾಘನೀಯ ಎಂದು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಹೇಳಿದರು.
ಮಾಣಿ ಗ್ರಾಮದವರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ಪಬ್ಲಿಕ್ ಟೀವಿಯಲ್ಲಿ ವೃತ್ತಿಯನ್ನು ಮಾಡುತ್ತಿರುವ ಬದ್ರುದ್ದೀನ್ ಮಾಣಿ ಇವರಿಂದ ಕೊಡುಗೆಯಾಗಿ ನೀಡಲ್ಪಟ್ಟ ಪ್ರಾಣವಾಯು ಯಂತ್ರಗಳನ್ನು ವೈದ್ಯಾಧಿಕಾರಿ ಡಾ ಶಶಿಕಲಾರವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ವೈದ್ಯಾಧಿಕಾರಿಯವರು ಮಾತನಾಡಿ, ಕೊರೋನ ಇನ್ನಿತರ ಆರೋಗ್ಯ ಸಮಸ್ಯೆಗಳು ಇರುವಂತಹ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಾಣವಾಯು ಯಂತ್ರಗಳ ಅಗತ್ಯ ಈ ಮೊದಲೇ ಇತ್ತು. ಈ ಸಂದರ್ಭದಲ್ಲಿ ಇವುಗಳನ್ನು ದಾನಿಯೋರ್ವರು ಕೊಡುಗೆಯಾಗಿ ನೀಡಿರುವುದು ನಿಜಕ್ಕೂ ಸಂತಸವನ್ನು ನೀಡಿದೆ. ಇವುಗಳ ಉಪಯೋಗ ಜನಸಾಮಾನ್ಯರಿಗೆ ಸಿಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೆರ್ನೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುನಿಲ್ ನೆಲ್ಸನ್ ಪಿಂಟೋ, ಮಾಣಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಇಬ್ರಾಹಿಂ.ಕೆ.ಮಾಣಿ, ಸುದೀಪ್ ಕುಮಾರ್ ಶೆಟ್ಟಿ, ಕಡಬ ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷ ರೊ. ಮಹಮ್ಮದ್ ರಫೀಕ್, ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಮತ್ತಿತರರು ಉಪಸ್ಥಿತರಿದ್ದರು.