ಮಂಗಳೂರು: ಲಾಕ್ ಡೌನ್ ನಿಯಮ ಉಲ್ಲಂಘಿಸಿ ಏಕಕಾಲದಲ್ಲಿ ನಾಲ್ಕು ಮದುವೆ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಗರದ ಶ್ರೀ ಮಂಗಳಾದೇವಿ ದೇವಸ್ಥಾನದ ಸಮೀಪದ ವೇದಿಕೆಯಲ್ಲಿ ನಡೆದಿದೆ. ನಿಯಮಬಾಹಿರವಾಗಿ ಮದುವೆ ಸಮಾರಂಭ ಆಯೋಜಿಸಿರುವುದಾಗಿ ಬಂದ ದೂರನ್ನು ಆಧರಿಸಿ ಎ.ಸಿ. ಮದನ್ ಮೋಹನ್ ನೇತೃತ್ವದ ತಂಡ ದಾಳಿ ನಡೆಸಿ, ಕೇಸು ದಾಖಲಿಸಿದೆ.
ದೇವಾಲಯದ ಹೊರಗೆ 40ಕ್ಕೂ ಹೆಚ್ಚು ಕಾರುಗಳು ಇದ್ದ ಹಿನ್ನಲೆಯಲ್ಲಿ ಟ್ರಾಫಿಕ್ ಜಾಮ್ ಕೂಡಾ ಉಂಟಾಗಿತ್ತು.
ಸ್ಥಳೀಯ ಬಿಜೆಪಿ ನಾಯಕ ಎಕ್ಕೂರು ಭಾಸ್ಕರ ಚಂದ್ರಶೆಟ್ಟಿ ಪುತ್ರಿ ಮದುವೆಯ ಜೊತೆಗೆ 4 ಜೋಡಿಗಳ ಮದುವೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಈ ಮದುವೆಯಲ್ಲಿ ನೂರಕ್ಕೂ ಹೆಚ್ಚು ಜನರು ಗುಂಪುಗೂಡಿದ್ದರು. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಮದುವೆ ಕಾರ್ಯಕ್ರಮ ನಿಲ್ಲಿಸಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಮಾತ್ರ ಮದುವೆ ನಡೆಸಲು ಅವಕಾಶ ಇದೆ. ಆದ್ದರಿಂದ ದೇವಾಲಯದಲ್ಲಿ ಮದುವೆ ಆಯೋಜಿಸಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಮದುವೆ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟ ದೇವಾಲಯದ ಆಡಳಿತ ಮಂಡಳಿಯ ವಿರುದ್ಧ ಕ್ರಮಕ್ಕೂ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಸೂಚಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ ಕೊರೊನಾ ಹತೋಟಿಗೆ ತರಲು ಶ್ರಮಪಡುತ್ತಿದ್ದದೆ. ವಿದ್ಯಾವಂತರೇ ಈ ರೀತಿ ನಿಯಮ ಮೀರಿ ನಡೆದುಕೊಳ್ಳುವುದರ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.