ಬಂಟ್ವಾಳ: ಹದಗೆಟ್ಟಿದ್ದ ಬಿ.ಸಿ.ರೋಡಿನ ಕೈಕುಂಜೆ ರಸ್ತೆಯ ಅಭಿವೃದ್ಧಿ ಕಾರ್ಯ ಬಹುತೇಕ ಪೂರ್ಣಗೊಂಡು ಕಾಂಕ್ರೀಟ್ ರಸ್ತೆ ಸಿದ್ಧಗೊಳ್ಳುತ್ತಿದ್ದಂತೆ ರಸ್ತೆಯ ಎರಡೂ ಬದಿಗಳು ಪಾರ್ಕಿಂಗ್ ತಾಣವಾಗಿ ಪರಿಣಮಿಸಿದ್ದು, ಲಾಕ್‌ಡೌನ್ ಸಡಿಲಗೊಂಡ ಬೆಳಗ್ಗಿನ ಹೊತ್ತು ಹತ್ತಾರು ವಾಹನಗಳು ರಸ್ತೆಯಲ್ಲೇ ನಿಂತಿರುತ್ತವೆ.
ಪ್ರಸ್ತುತ ಕಾಂಕ್ರೀಟ್ ಕಾಮಗಾರಿ ನಡೆದು ರಸ್ತೆಯು ಸಾಕಷ್ಟು ಅಗಲಗೊಂಡಿರುವುದರಿಂದ ಕಾರು ಸೇರಿದಂತೆ ಇತರ ವಾಹನದವರು ತಮಗೆ ವಾಹನ ನಿಲ್ಲಿಸುವುದಕ್ಕಾಗಿಯೇ ರಸ್ತೆಯನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂಬ ರೀತಿಯಲ್ಲಿ ವಾಹನವನ್ನು ನಿಲ್ಲಿಸಿ ತೆರಳುತ್ತಿದ್ದಾರೆ. ಇನ್ನು ರಸ್ತೆಯಲ್ಲಿ ಸಾಗುವ ವಾಹನಗಳು ಎಲ್ಲಿ ಸಾಗುವುದಕ್ಕೆ ಅನುಕೂಲವಿದೆ ಎಂದು ಹುಡುಕಿಕೊಂಡು ಹೋಗಬೇಕಾದ ಸ್ಥಿತಿ ಇದೆ.
ಪ್ರಸ್ತುತ ಮಧ್ಯಾಹ್ನದವರೆಗೆ ಮಾತ್ರ ಲಾಕ್‌ಡೌನ್ ಸಡಿಲಿಕೆ ಇರುವುದರಿಂದ ಬೆಳಗ್ಗಿನ ಹೊತ್ತು ಹೆಚ್ಚಿನ ವಾಹನಗಳು ಬಿ.ಸಿ.ರೋಡಿನತ್ತ ಆಗಮಿಸುತ್ತಿದ್ದು, ಹೀಗಾಗಿ ಈ ರಸ್ತೆಯಲ್ಲಿ ವಾಹನದೊತ್ತಡವೂ ಅಽಕವಿರುತ್ತದೆ. ಇನ್ನು ತಾಲೂಕು ಕಚೇರಿ ಸೇರಿದಂತೆ ಬಹುತೇಕ ಸರಕಾರಿ ಇಲಾಖೆಗಳಿಗೆ ಇದೇ ರಸ್ತೆಯಲ್ಲಿ ಸಾಗಬೇಕಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಮಂಗಳವಾರ ಇದೇ ರೀತಿ ವಾಹನ ನಿಲ್ಲಿಸಿದ ಪರಿಣಾಮ ಸಂಚಾರಕ್ಕೆ ತೊಂದರೆ ಉಂಟಾಗಿದ್ದು, ಬಳಿಕ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯ ಪೊಲೀಸರೊಬ್ಬರು ಸ್ಥಳದಲ್ಲಿ ನಿಂತು ವಾಹನಗಳು ಸಾಗುವುದಕ್ಕೆ ಅನುಕೂಲ ಮಾಡಿಕೊಟ್ಟರು. ಮುಂದಿನ ದಿನಗಳಲ್ಲಿ ಲಾಕ್‌ಡೌನ್ ಪೂರ್ಣ ತೆರೆದು ವಾಹನಗಳ ಓಡಾಟ ಹೆಚ್ಚಿದರೆ ಈ ರೀತಿ ವಾಹನಗಳ ಪಾರ್ಕಿಂಗ್‌ನಿಂದ ತೊಂದರೆ ಉಂಟಾಗುವ ಸಾಧ್ಯತೆ ಇದೆ.
ಕೈಕುಂಜೆ ರಸ್ತೆಯ ಪ್ರಾರಂಭದ ಭಾಗದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆದಿದ್ದು, ವಾಹನಗಳ ಅಡ್ಡಾದಿಡ್ಡಿ ನಿಲುಗಡೆಯಿಂದ ಕಾಂಕ್ರೀಟ್ ಮಿಕ್ಸರ್ ಲಾರಿಗಳು ತೆರಳುವುದಕ್ಕೂ ತೊಂದರೆಯುಂಟಾಗಿತ್ತು. ರಸ್ತೆಯಲ್ಲೇ ಎರಡೂ ಬದಿ ವಾಹನ ನಿಂತಿರುವುದರಿಂದ ಲಾರಿ ಬಂದಾಗ ಸುಗಮ ಸಂಚಾರಕ್ಕೂ ತೊಂದರೆ ಉಂಟಾಗಿತ್ತು.