ಬಂಟ್ವಾಳ: ತಾಲೂಕಿನ ಕಡೇಶ್ವಾಲ್ಯ ಗ್ರಾ.ಪಂ.ವ್ಯಾಪ್ತಿಯ ಕೊರತಿಗುರಿ ಕಾಲನಿಯಲ್ಲಿ ಜಿ.ಪಂ. ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳ ವೀಡಿಯೋ ಸಂವಾದದ ಸೂಚನೆಯಂತೆ ಕಾಲನಿಯ 40ಕ್ಕೂ ಅಧಿಕ ಮನೆಗಳಲ್ಲಿ ಅನುಷ್ಠಾನಗೊಳ್ಳಲಿರುವ ಸೋಕ್ ಫಿಟ್(ಬಚ್ಚಲು ಗುಂಡಿ) ಕಾಮಗಾರಿಗೆ ಬಂಟ್ವಾಳ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ನರೇಗಾದ ಮೂಲಕ ಹಲವು ಯೋಜನೆಗಳನ್ನು ನೀಡುತ್ತಿದ್ದು, ಪ್ರತಿಯೊಬ್ಬರೂ ಅದರ ಪ್ರಯೋಜನ ಪಡೆದುಕೊಳ್ಳಬೇಕು. ಬಚ್ಚಲು ಗುಂಡಿ ನಿರ್ಮಾಣ ಮಾಡುವುದರಿಂದ ತ್ಯಾಜ್ಯ ನೀರಿನ ಸಮಸ್ಯೆಗೆ ಕಡಿವಾಣ ಹಾಕುವ ಜತೆಗೆ ಸಾಂಕ್ರಾಮಿಕ ರೋಗಳಿಂದಲೂ ರಕ್ಷಣೆ ಪಡೆಯಬಹುದು ಎಂದರು.
ಈ ಸಂದರ್ಭದಲ್ಲಿ ತಾ.ಪಂ. ಪ್ರಭಾರ ಸಹಾಯಕ ನಿರ್ದೇಶಕ ಶಿವಾನಂದ ಪೂಜಾರಿ, ಕಡೇಶ್ವಾಲ್ಯ ಗ್ರಾ.ಪಂ.ಅಧ್ಯಕ್ಷ ಸುರೇಶ್ ಶೆಟ್ಟಿಗಾರ್, ಉಪಾಧ್ಯಕ್ಷೆ ಜಯ ಆರ್., ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ನಾಯ್ಕ, ಕಾರ್ಯದರ್ಶಿ ಸಂಜೀವ ನಾಯ್ಕ, ವಾರ್ಡ್ ಸದಸ್ಯರು ಉಪಸ್ಥಿತರಿದ್ದರು.
ಕೊರತಿಗುರಿ ಕಾಲನಿಯಲ್ಲಿ 50ಕ್ಕೂ ಹೆಚ್ಚು ಮನೆಗಳಿದ್ದು, 180ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಇಲ್ಲಿನ ಜನತೆ ತ್ಯಾಜ್ಯ ನೀರಿನ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದು, ತ್ಯಾಜ್ಯ ನೀರು ವಿಲೇವಾರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಗ್ರಾ.ಪಂ.ಸದಸ್ಯರು, ಅಧಿಕಾರಿಗಳು, ಸಿಬಂದಿ ಮನೆ -ಮನೆಗೆ ತೆರಳಿ ಕಾಲನಿಯ ಜನರಿಗೆ ಉದ್ಯೋಗ ಖಾತರಿ ಯೋಜನೆಯಡಿ ಸೋಕ್‌ಪಿಟ್ ನಿರ್ಮಿಸಲು ಮನವೊಲಿಸಿದ್ದರು. ಈಗ 40 ಫಿಟ್‌ಗಳ ಕಾಮಗಾರಿ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಕಾಮಗಾರಿಗೆ ಬೇಡಿಕೆ ಬರುವ ನಿರೀಕ್ಷೆ ಇದೆ.