ಕೊರೋನ ಪಾಸಿಟಿವ್ ಬಂದ ಮನೆಯವರು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ಮಾಡುವುದು ಮತ್ತು ಹತ್ತಿರದ ಮನೆಯವರು ಕೂಡ ಜಾಗೃತೆಯಿಂದ ಇರುವ ಹಾಗೆ ನೋಡಿಕೊಳ್ಳುವುದು ಇದರ ಜೊತೆಗೆ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ಮನವರಿಕೆ ಮಾಡುವ ಕೆಲಸವನ್ನು ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಮಾಡಬೇಕು ಎಂದು ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಶಶಿಕಲಾರವರು ಹೇಳಿದರು.
ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯ ವಾರದ ಸಭೆಯಲ್ಲಿ ಅವರು ಮಾತನಾಡಿದರು.
ಮಾಣಿ ಗ್ರಾಮ ಪಂಚಾಯತ್ ಪ್ರಾಥಮಿಕ ಆರೋಗ್ಯ ಕೇಂದ್ರದ ಜೊತೆಗೆ ಸೇರಿಕೊಂಡು ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇವರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ. ಇನ್ನು ಮುಂದಕ್ಕೂ ಕೋವಿಡ್ ವಿಚಾರವಾಗಿ ಮತ್ತಷ್ಟು ಕೆಲಸ ಮಾಡುವ ಹಾಗೆ ಆಗಲಿ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆಯವರು ಮಾತನಾಡಿ, ಟಾಸ್ಕ್ ಫೋರ್ಸ್ ಸಮಿತಿ ಈಗಾಗಲೇ ಕೋವಿಡ್ ಮುಂಜಾಗೃತೆ ಮತ್ತು ಲಸಿಕೆಯ ವಿಚಾರದಲ್ಲಿ ಬಹಳಷ್ಟು ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದು ತಾಲೂಕಿನಲ್ಲಿಯೇ ಗುರುತಿಸುವಂತಾಗಿದೆ. ಕೋವಿಡ್ ಪಾಸಿಟಿವ್ ಬಂದ ಮನೆಗಳಿಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸುವುದರೊಂದಿಗೆ ಆಯ್ದ ಮನೆಗಳಿಗೆ ಅಗತ್ಯ ವಸ್ತುಗಳ ಕಿಟ್ ಗಳನ್ನೂ ನೀಡುವ ಕಲಸವನ್ನು ಮಾಡುತ್ತಿದ್ದೇವೆ.
ಗ್ರಾಮದಲ್ಲಿ ಕೋವಿಡ್ ಲಸಿಕೆ ಪಡೆದವರ ಮತ್ತು ಪಡೆಯದವರ ಸಮೀಕ್ಷೆಯನ್ನು ಮಾಡುವ ಜವಾಬ್ದಾರಿಯನ್ನು ಅಂಗನವಾಡಿ ಕಾರ್ಯಕರ್ತರಿಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಟಾಸ್ಕ್ ಫೋರ್ಸ್ ಸಮಿತಿಯ ಎಲ್ಲಾ ಸದಸ್ಯರು ನಮ್ಮ ಜೊತೆಗೆ ಕೈಜೋಡಿಸಬೇಕು ಎಂದು ಹೇಳಿದರು.
ಕೋವಿಡ್ ಸಂಬಂಧವಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಸಮಿತಿಯ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಮಾತ್ರವಲ್ಲದೆ, ಹಲವಾರು ಸಲಹೆಸೂಚನೆಗಳನ್ನು ಕೂಡಾ ನೀಡಿದರು.
ಶಿಕ್ಷಣ ಸಮೂಹ ಸಂಪನ್ಮೂಲ ವ್ಯಕ್ತಿ ಸತೀಶ್ ರಾವ್, ಗ್ರಾಮ ಕರಣಿಕೆ ಸುರಕ್ಷಾ ಮಾತನಾಡಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಸದಸ್ಯರುಗಳಾದ ಸುದೀಪ್ ಕುಮಾರ್ ಶೆಟ್ಟಿ, ಇಬ್ರಾಹಿಂ.ಕೆ.ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ಸೀತಾ, ಸುಜಾತಾ, ಮಿತ್ರಾಕ್ಷಿ ಹಾಗೂ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಗಟ್ಟಿಯವರು ಸ್ವಾಗತಿಸಿ, ವಂದಿಸಿದರು.