ಬಂಟ್ವಾಳ: ಜಾಲತಾಣಗಳಲ್ಲಿ ಬ್ರಾಹ್ಮಣ ಸಮಾಜದ ವಿರುದ್ಧ ಅವಹೇಳನಕಾರಿ ಮಾತುಗಳನ್ನುಜ ಪ್ರಚುರಪಡಿಸಿ, ಸಾಮಾಜಿಕ ಅಶಾಂತಿಯನ್ನು ನಟ ಚೇತನ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ತಾಲೂಕು ಬ್ರಾಹ್ಮಣ ಪರಿಷತ್ತು ಬಂಟ್ವಾಳ ನಗರ ಪೊಲೀಸ್ ಆರಕ್ಷಕ ಉಪನಿರೀಕ್ಷಕರಿಗೆ ಶುಕ್ರವಾರ ದೂರು ಸಲ್ಲಿಸಿದೆ.
ಪರಿಷತ್ತಿನ ಅಧ್ಯಕ್ಷ ರಮೇಶ್ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ಪ್ರಕಾಶ ನಾರಾಯಣ ಜೆಡ್ಡು, ಗಿರೀಶ್ ಮುಳಿಯಾಲ, ಕುಂಜಾರು ಪ್ರಸನ್ನ ಮಯ್ಯ ಈ ಸಂದರ್ಭ ಉಪಸ್ಥಿತರಿದ್ದರು. ಇತ್ತೀಚೆಗೆ ಚೇತನ್ ಹಿಂದು ಸಮಾಜದ ಅವಿಭಾಜ್ಯ ಅಂಗವಾಗಿರುವ ಬ್ರಾಹ್ಮಣರ ವಿರುದ್ಧ ದ್ವೇಷಭರಿತ ಮಾತುಗಳನ್ನಾಡಿದ್ದು, ಆಧ್ಯಾತ್ಮಿಕ ಭಯೋತ್ಪಾದನೆ ಎಂದು ಬ್ರಾಹ್ಮಣ ಚಟುವಟಿಕೆಗಳಿಗೆ ಹೆಸರು ನೀಡಿ, ಬ್ರಾಹ್ಮಣರನ್ನು ಭಯೋತ್ಪಾದಕರು ಎಂಬಂತೆ ಬಿಂಬಿಸಿದ್ದಾರೆ ಎಂದು ಆರೋಪಿಸಿರುವ ಪರಿಷತ್ತು, ಈ ಮೂಲಕ ಬ್ರಾಹ್ಮಣ ಸಮಾಜಕ್ಕೆ ಸೇರಿದ ನಮ್ಮ ಭಾವನೆಗಳಿಗೆ ಧಕ್ಕೆಯನ್ನುಂಟುಮಾಡಿದ್ದು, ಸಮಾಜದ ಉಳಿದವರು ಬ್ರಾಹ್ಮಣರನ್ನು ದ್ವೇಷಿಸುವಂತೆ ಮಾಡುವ ಉದ್ದೇಶ ಇದರ ಹಿಂದಡಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈಗಾಗಲೇ ರಾಷ್ಟ್ರೀಯ ಮುಸ್ಲಿಂ ಮೋರ್ಚಾ ಎಂಬ ಸಂಘಟನೆ ಆರೋಪಿ ಪರವಾಗಿ ಹೇಳಿಕೆ ನೀಡಿ, ನಮ್ಮ ದೇಶವನ್ನು ಬ್ರಾಹ್ಮಣಮುಕ್ತ ದೇಶವನ್ನಾಗಿ ಮಾಡುವುದಾಗಿ ದ್ವೇಷಭರಿತ ಹೇಳಿಕೆಗಳನ್ನು ನೀಡಿ, ಸಮಾಜದಲ್ಲಿ ಅಶಾಂತಿಯನ್ನು ಪ್ರಚೋದಿಸುವ ಕೆಲಸವನ್ನು ಮಾಡುತ್ತಿರುವುದು ಆರೋಪಿಯ ಪ್ರಚೋದನಾತ್ಮಕ ಕೃತ್ಯಕ್ಕೆ ಉದಾಹರಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.