ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಅವರು ಇಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಕರಾವಳಿಯಲ್ಲಿ ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಸಲಾಗುತ್ತಿರುವ ಜನಪರ ಕೆಲಸಗಳ ಬಗ್ಗೆ ಚರ್ಚೆ ನಡೆಸಿದರು.
ಕೊರೋನಾ ನಿಯಂತ್ರಣ ಮತ್ತು ಲಾಕ್ ಡೌನ್ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ವತಿಯಿಂದ ಕೈಗೊಂಡಿರುವ ಪರಿಹಾರ ಹಾಗೂ ಹೆಲ್ಪ್ ಲೈನ್ ನೆರವು ಕಾರ್ಯಕ್ರಮಗಳ ಬಗ್ಗೆ ಹಿರಿಯ ಕಾಂಗ್ರೆಸ್ ಮುಖಂಡ ರಮಾನಾಥ ರೈ ಅವರು ಕೆಪಿಸಿಸಿ ಅಧ್ಯಕ್ಷರಿಗೆ ವಿವರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಬ್ಲಾಕುಗಳ ಸಮಿತಿಗಳು, ವಿವಿಧ ಮಂಚೂಣಿ ಸಂಘಟನೆಗಳು ಮತ್ತು ಜಿಲ್ಲಾ ಸಮಿತಿಯ ವತಿಯಿಂದ ನಡೆಯುತ್ತಿರುವ ವೈದ್ಯಕೀಯ ನೆರವು, ಆಂಬ್ಯುಲೆನ್ಸ್ ಸೇವೆ, ಆಕ್ಸಿಜನ್ ಒದಗಿಸುವುದು, ಆಹಾರ ಕಿಟ್ ವಿತರಣೆ, ಪ್ರತಿ ದಿನ ಆಹಾರ ವಿತರಣೆ ಬಗ್ಗೆ ಮಾಜಿ ಸಚಿವರು ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಶ್ಲಾಘನೆ ವ್ಯಕ್ತಪಡಿಸಿದರು.