ಬಂಟ್ವಾಳ : ಲಾಕ್ ಡೌನ್ ಸಡಿಲಗೊಂಡಿದೆ ಎಂದು ಶನಿವಾರ ಮತ್ತು ಭಾನುವಾರವೂ ನೀವು ಪೇಟೆಗೆ ಬಂದಿರೆಂದರೆ ಪೊಲೀಸರಿಂದ ಕಾನೂನು ಕ್ರಮ ಖಚಿತ. ಯಾಕೆಂದರೆ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 7 ರವರೆಗೆ ದ.ಕ.ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಜಿಲೆಯಲ್ಲಿ ಆರೋಗ್ಯ ಸೇವೆಗಳನ್ನು ಹೊರತು ಪಡಿಸಿದರೆ, ಬಹುತೇಕ ಎಲ್ಲಾ ಸೇವೆಗಳು ಬಂದ್ ಆಗಲಿದೆ. ಹಾಲು ಹಾಗೂ ಪೇಪರ್ ಅಂಗಡಿ ಹೊರತು ಪಡಿಸಿ ಉಳಿದಂತೆ ಯಾವುದೇ ಅಂಗಡಿ ತೆರೆಯಲು ಅವಕಾಶವಿಲ್ಲ. ವಾರಾಂತ್ಯ ಕರ್ಫ್ಯೂ ಪರಿಣಾಮಕಾರಿ ಜಾರಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅಧಿಕಾರಿಗಳ ಸಭೆ ನಡೆಸಿ ಈ ಆದೇಶ ನೀಡಿದ್ದಾರೆ.
ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ದ.ಕ. ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಸಂದರ್ಭ ಏನಿದೆ? ಏನಿರಲ್ಲ?
ಶುಕ್ರವಾರ ಸಂಜೆ 7ರಿಂದ ವಾರಾಂತ್ಯ ಕರ್ಫ್ಯೂ ಜಾರಿ
ಸೋಮವಾರ ಬೆಳಿಗ್ಗೆ 7 ಗಂಟೆಯ ತನಕ ವೀಕೆಂಡ್ ಕರ್ಫ್ಯೂ
ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಹಾಲಿನ ಅಂಗಡಿ, ದಿನಪತ್ರಿಕೆ ವಿತರಣೆಗೆ ಮಾತ್ರ ಅವಕಾಶ
ಇತರೆ ಯಾವುದೇ ಅಂಗಡಿಗಳು ತೆರೆಯಲು ಅವಕಾಶವಿಲ್ಲ
ವಾರಾಂತ್ಯ ಕರ್ಫ್ಯೂವಿನಲ್ಲಿ ದಿನಸಿ ಅಂಗಡಿಗಳು ಕೂಡ ಬಂದ್
ತುರ್ತು ಅಗತ್ಯ ಆರೋಗ್ಯ ಸೇವೆಗಳಿಗೆ ಅವಕಾಶ
ಶನಿವಾರದಂದು ಕೋವಿಡ್ ನಿಯಮಾವಳಿಯಂತೆ ಸರಕಾರಿ ಕಚೇರಿಗಳು ಕಾರ್ಯಾಚರಿಸಲಿವೆ
24 ಗಂಟೆ ಕಾರ್ಯಾಚರಿಸುವ ಸಂಸ್ಥೆ, ಕಂಪೆನಿಗಳಿಗೆ ಅವಕಾಶ
ತುರ್ತು ಸಂದರ್ಭದಲ್ಲಿ ರೋಗಿಗಳು, ಅವರ ಪರಿಚಾರಕರು ಸಂಚಾರ ನಡೆಸಬಹುದು
ಲಸಿಕೆ ಪಡೆಯುವರು ಸೂಕ್ತ ದಾಖಲೆ ತೋರಿಸಿ ತೆರಳಬಹುದು
ರೆಸ್ಟೋರೆಂಟ್, ಹೊಟೇಲ್ ಗಳಿಂದ ಪಾರ್ಸೆಲ್ ಗೆ ಮಾತ್ರ ಅವಕಾಶ
ದೂರ ಪ್ರಯಾಣದ ಅಂತರ್ ಜಿಲ್ಲಾ ಬಸ್, ರೈಲು, ವಿಮಾನ ಸಂಚಾರವಿದೆ
ಸೂಕ್ತ ದಾಖಲೆ, ಟಿಕೆಟ್ ತೋರಿಸಿ ನಿಲ್ದಾಣಗಳಿಗೆ ತೆರಳಲು ಅನುಮತಿ
ನಿಗದಿಯಾಗಿರುವ ವಿವಾಹಗಳಿಗೆ 25 ಜನರ ಮಿತಿಯಲ್ಲಿ ಮನೆಯಲ್ಲೇ ನಡೆಸಲು ಅವಕಾಶ
5 ಜನರ ಪರಿಮಿತಿಯಲ್ಲಿ ಶವಸಂಸ್ಕಾರ, ಅಂತ್ಯಕ್ರಿಯೆಗೆ ಅನುಮತಿ