ಬಂಟ್ವಾಳ: ಶಿಕ್ಷಣ ಮತ್ತು ಆರೋಗ್ಯದ ಹೆಚ್ಚು ಮುತುವರ್ಜಿ ವಹಿಸಿ ರುವ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕೊರೊನಾ ಸಂಕಷ್ಟದ ಅವಧಿಯಲ್ಲಿ ಸರಕಾರಿ ಆಸ್ಪತ್ರೆಗೆ ಅನೇಕ ಸವಲತ್ತುಗಳನ್ನು ಸರಕಾರದಿಂದ ಹಾಗೂ ವೈಯಕ್ತಿಕ ನೆಲೆಯಲ್ಲಿ ಕಲ್ಪಿಸಿದ್ದು ಪ್ರಸ್ತುತ ಇರುವ 100 ಬೆಡ್ ಬಂಟ್ವಾಳ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಶಾಸಕರು ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿದ್ದಾರೆ.
ಸರಕಾರದ ಸಚಿವರ ಜೊತೆಗೆ ಶಾಸಕರು ಪ್ರಥಮ ಸುತ್ತಿನ ಮಾತುಕತೆ ನಡೆಸಿದ್ದು, ಈಗಾಗಲೇ ಮೇಲ್ದರ್ಜೆಗೆ ಏರಿಸಲು ಉದ್ದೇಶಿಸಿ ರುವ ಆಸ್ಪತ್ರೆಯ ಕಟ್ಟಡ ವಿಸ್ತರಣೆಯ ಬಗ್ಗೆ ಹಾಗೂ ಇತರ ಆಸ್ಪತ್ರೆಯ ವಿವಿಧ ಅವಶ್ಯಕತೆಯನ್ನು ಪೂರೈಸುವ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್‌ಕುಮಾರ್ ಅವರು ಸೋಮವಾರ ಪರಿಶೀಲನೆ ನಡೆಸಿದರು.
ಪ್ರಸ್ತುತ ಇರುವ ಬಂಟ್ವಾಳ ಸರಕಾರಿ ಆಸ್ಪತ್ರೆಯ ಮಹಡಿಯ ಮೇಲೆಯೇ ಕಟ್ಟಡ ವಿಸ್ತರಣೆ ಮಾಡುವ ಯೋಜನೆ ತಯಾರಿ ನಡೆಯುತ್ತಿದ್ದು, ಆಸ್ಪತ್ರೆಯ ಆವರಣದಲ್ಲಿನ ಕಟ್ಟಡಗಳ ನವೀಕರಣ ಮೊದಲಾದ ವಿಚಾರಗಳ ಕುರಿತು ಪರಿಶೀಲನೆ ನಡೆಸಲಾಯಿತು. ಆಸ್ಪತ್ರೆಯ ಮೇಲ್ದರ್ಜೆಗೇರಿಸುವ ಕುರಿತು ಶಾಸಕರು, ಡಿಎಚ್‌ಒ, ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಾ ಪ್ರಭು, ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಪುಷ್ಪಲತಾ ಅವರ ಜತೆ ಚರ್ಚೆ ನಡೆಸಿದರು.
ಆಸ್ಪತ್ರೆಗೆ ಹೆಚ್ಚಿನ ಡಯಾಲಿಸೀಸ್ ಯಂತ್ರಗಳ ಅನುಷ್ಠಾನದ ದೃಷ್ಟಿಯಿಂದ ಹೆಚ್ಚಿನ ಸ್ಥಳಾವಕಾಶ ಬೇಕಿರುವುದರಿಂದ ಆಸ್ಪತ್ರೆಯ ಆಡಳಿತ ಕಚೇರಿಯನ್ನು ವೈದ್ಯಾಧಿಕಾರಿಗಳ ಖಾಲಿ ಇರುವ ವಸತಿ ಗೃಹಕ್ಕೆ ಸ್ಥಳಾಂತರ ಮಾಡುವ ಕುರಿತು ಶಾಸಕರು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪುರುಷೋತ್ತಮ ಶೆಟ್ಟಿ ವಾಮದಪದವು ಮೊದಲಾದವರಿದ್ದರು.