(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ,ಜೂ.೧೧: ಉಪನಗರ ನವಿಮುಂಬಯಿ ವಾಶಿ ಇಲ್ಲಿನ ಮಂಗಳೂರು ಮೂಲದ ಶ್ರೀಮಂತ ಮತ್ತು ಪ್ರತಿಷ್ಠಿತ ಸೆರಾವೋ ಕುಟುಂಬದ ನವದಂಪತಿ ನವಜಾತ ಶಿಶುವೊಂದರ ಆಗಮನದ ನಿರೀಕ್ಷೆಯಲ್ಲಿತ್ತು. ಅದೂ ಶ್ರೀಮಂತರ ಬಂಗಲೆಯಲ್ಲಿ ಹುಟ್ಟುವ ಮೊದಲಮಗು ಎಂದಾಗ ಆಗುವ ಖುಷಿ ಅಷ್ಟಿಷ್ಟಲ್ಲ. ಎಲ್ಲರಂತೆ ಇಲ್ಲೂ ಎಲ್ಲರಲ್ಲೂ ಸಂತಸವೇ ಸಂತಸ. ಅಂತೂ ಸಿಸೇರಿಯನ್ ಡೆಲಿವರಿಯೊಂದಿಗೆ ಹೆರಿಗೆ ಮುಗಿಸಿ ತನ್ನ ಬಂಗಲೋ ಮನೆಗೆ ಸ್ಟಾರ್‌ಬೇಬಿ ಗಂಡುಮಗು ಜೊತೆ ಆಕೆ ಬಂದದ್ದೂ ಆಯಿತು. ಪೂರ್ವ ತಯಾರಿಯಂತೆ ಬಾಣಂತಿಯ ಆರೈಕೆಗಾಗಿ ಐರಿನ್ ವಾಸ್ ಅವರನ್ನು ಸೂಲಗತ್ತಿ (ದಾದಿ)ಯ ಸೇವೆಗೆ ನೇಮಕವೂ ಮಾಡಿದ್ದು ಆಕೆಯೂ ಅಲ್ಲಿದ್ದು ತನ್ನ ಬಾಹುಗಳಲ್ಲಿ ಮಗುವನ್ನು ಪಡೆದು ಶಿಶುಪಾಲನಾ ಕೆಲಸ ಆರಂಭಿಸಿದ್ದಾಯಿತು.
ಒಂದುವಾರ ಎಲ್ಲವೂ ಸಂತೋಷಮಯ, ಸುಗಮವಾಗಿ ನಡೆಯಿತು. ವಾರದ ಬಳಿಕ ಮಗು ಏಕಾಏಕಿ ಬಿಕ್ಕಿಬಿಕ್ಕಿ ಅಳುವುದೇ ಅಳುವುದು ಎಂದಾಗ ಮನೆಒಡತಿ (ಅಜ್ಜಿ) ಮಗು ಆಳುತ್ತಿದೆಯೇ..? ಮಗುವಿಗೆ ಗ್ರೇಪ್ ವಾಟರ್ ಕುಡಿಸಿ…. ಅಂದು ಕುಡಿಸಿದರೂ ಮಗು ಇನ್ನಷ್ಟು ಜೋರಾಗಿ ಅಳುತ್ತಿತ್ತು. ದಿನೇದಿನೇ ಮಗುವಿನ ತಡೆಯಲಾರದ ರೋದನೆ ಕಂಡು ಪಾಲಕರು ಮಗುವನ್ನು ಕುಟುಂಬ ವೈದ್ಯರಲ್ಲಿ ಒಯ್ದರು. ಮಗುವನ್ನು ತಪಾಸನೆಗೈದ ವೈದ್ಯರು ಮಗುವಿನ ದೇಹ, ಕೈಕಾಲುಗಳಲ್ಲಿ ಹೆಪ್ಪುಗಟ್ಟಿದ ರಕ್ತದ ಕಲೆಗಳು ಮತ್ತು ಊತು ಕೊಂಡಿದ್ದ ಕೈಕಾಲುಗಳನ್ನು ಗಮನಿಸಿದರು. ಚಿಕಿತ್ಸೆ ನೀಡಿದ ವೈದ್ಯರು ಸೂಲಗಾತಿ ನಡೆಯಲ್ಲಿ ಮೇಲೆ ನಿಗಾ ಇರಿಸುವಂತೆ ಸೂಚಿಸಿದ್ದು ಮನೆಮಾಲೀಕರು ಅಂದೇ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರು.
ಅಷ್ಟರಲ್ಲೇ ಬಯಲಾಯಿತು ಯಮರೂಪಿ ಬಾಣಂತಿ ಆರೈಕೆ ಆಳಿನ ಕರ್ಮಕಾಂಡ. ಇದನ್ನು ಕಂಡ ಮನೆಮಂದಿ ಬೆಚ್ಚಿಬಿದ್ದಿದ್ದರು. ಮಹಾರಾಣಿಯಂತೆ ಸೋಫಾದಲ್ಲಿ ಕುಳಿತು ಮಗುವನ್ನು ಮಲಗಿಸುವ ವೇಳೆಗೆ ಮಗು ಮೌನವಾಗಿ ನಿದ್ರಿಸದೇ ಇರುವುದಕ್ಕೆ ಆಟಿಕೆಯ ಮಗು (ಗೊಂಬೆ-ಡಾಲ್) ತರಹ ಮಗುವಿನ ಕೈ, ಕಾಲು, ಕತ್ತು, ತಲೆಯನ್ನು ಯದ್ವಾತದ್ವಾ ಬೆಂಡೆತ್ತಿ ಮಗುವನ್ನು ಉಂಡೆ ತರಹ ಮಾಡಿ ತೀವ್ರವಾಗಿ ಚಿತ್ರಹಿಂಸೆಯನ್ನಿತ್ತು ಮಗುವಿನ ಪ್ರಾಣವನ್ನೇ ಹಿಂಡುತ್ತಾ ತನ್ನ ಕೋಪವನ್ನೆಲ್ಲಾ ಮಗುವಿನಲ್ಲಿ ತೆಗೆಯುತ್ತಿರುವುದು ಗಮನಕ್ಕೆ ಬಂದಿತು. ಇನ್ನೂ ಕಣ್ಣು ಬಿಡದೆ ಲೋಕ ಕಾಣದ ಮುಗ್ಧ ಹಸುಗೂಸುವಿನ ಸೇವೆ ಮಾಡಬೇಕಿದ್ದ ಐರಿನ್ ಹಸುಳೆಯಲ್ಲಿ ರಾಕ್ಷಸಿ ರೌದ್ರಾವತಾರ ತೋರಿದ ಅಮಾನುಷ ಕೃತ್ಯಗಳೆಲ್ಲವನ್ನೂ ಮನೆಮಂದಿ ಸಿಸಿಟಿವಿ ಕ್ಯಾಮೆರಾ ಮೂಲಕ ಸೆರೆಹಿಡಿದು ಆಕೆಯನ್ನು ರೆಡ್‌ಹ್ಯಾಂಡ್ ಆಗಿ ಪೋಲಿಸರ ವಶಕ್ಕೆ ಒಪ್ಪಿಸಿದ್ದಾರೆ.
ಈಕೆಯ ವರ್ತನೆಯಲ್ಲೇ ಸಂಶಯ ವ್ಯಕ್ತಪಡಿಸಿದ್ದ ಫ್ಯಾಮಿಲಿ ಡಾಕ್ಟರ್ ನುಡಿದದ್ದೇ ಸತ್ಯ ಆಗಿತ್ತು. ಶಿಶುವಿನ ಸೇವೆಗೈದು ಉಂಡುತಿಂದು ಮಹಾರಾಣಿಯಂತೆ ಮೆರೆಯಬೇಕಾಗಿದ್ದ ಈಕೆ ಸದ್ಯ ಪೋಲಿಸರ ಅತಿಥಿ ಆಗಿದ್ದಾಳೆ. ಪ್ರಕರಣದ ಇಡೀ ತನಿಖೆ ನಡೆಸಿದ ವಾಶಿ ಪೋಲಿಸ್ ಠಾಣಾಧಿಕಾರಿ ಸಬ್ ಇನ್ಸ್ಪೆಕ್ಟರ್ ರೇಶ್ಮಾ ಬಿ.ಮೊಮಿನ್ ಪ್ರಕರಣವನ್ನು ದಾಖಲಿಸಿ ನ್ಯಾಯಲಯಕ್ಕೆ ಒಪ್ಪಿಸಿದ್ದರು. ಪೋಲಿಸ್ ಕಸ್ಟಡಿಯಲ್ಲಿದ್ದ ಐರಿನ್ ವಾಸ್ ಷರತ್ತುಬದ್ಧ ಜಾಮೀನು ಮೇಲೆ ಬಿಡುಗಡೆ ಆಗಿದ್ದಾಳೆ. ಸದ್ಯ ಐರಿನ್ ಮಲಾಡ್ ಅಲ್ಲಿನ ಸಂಬಂಧಿಕರ ಮನೆಯಲ್ಲಿದ್ದು ಷರತ್ತಿನಂತೆ ದಿನಾಲೂ ಠಾಣೆಗೆ ಬಂದು ಹಾಜರಾಗಬೇಕಾಗಿದೆ.
ಸೆರಾವೋ ಕುಟುಂಬದಲ್ಲಿ ಏಳೆಂಟು ಶಿಶುಗಳ ಹಾರೈಕೆ ಮಾಡಿದ್ದವಳು ಮತ್ತೊಂದು ಕಡೆ ಜವಾಬ್ದಾರಿ ವಹಿಸಿದ್ದ ಕಾರಣ ಆಕೆ ಐರಿನ್‌ಳ ಪರಿಚಯ ಮಾಡಿಸಿದ್ದಳು ಎನ್ನಲಾಗಿದೆ. ಬಂಟ್ವಾಳ ಅಮ್ಟಾಡಿ ಗ್ರಾಮದ ಬಾಂಬಿಲ ಪದವು ಮೆಕ್ಸಿಮ್ ವಿನ್ಸೆಂಟ್ ಲಾಸ್ರದೋ ಇವರ ಪತ್ನಿ ಆಗಿರುವ ಐರಿನ್ ತಾನೊಬ್ಬ ನಿಪುಣ ಬಾಣಂತಿ ಪೋಷಕಿ (ಎಕ್ಸ್ಫರ್ಟ್ ಮಿಡ್‌ವೈಫ್) ಆಗಿದ್ದು ತಿಂಗಳಿಗೆ ಬರೋಬ್ಬರಿ ಐವತ್ತು ಸಾವಿರ ಸಂಬಳಕ್ಕೆ ಒಪ್ಪಿದ್ದಳು. ಮಿಕ್ಕಿದ್ದು ಬೇರೆ ಜೊತೆಗೆ ಇನ್ನಿತರ ಷರತ್ತುಗಳು ಅನ್ವಯ ಎಂದೆಲ್ಲಾ ಸೇವೆಗೆ ಬದ್ಧವಾಗಿ ಬಂದಿದ್ದಳು. ಈಕೆಗೆ ಬಂಗಲೆಯಲ್ಲೇ ಉಳಕೊಳ್ಳಲು ವ್ಯವಸ್ಥೆಯೂ
ಮಾಡಲಾಗಿತ್ತು. ಈಗ ಪೋಲಿಸರ ಅತಿಥಿಯಾಗಿ ಮಾಡಿದ್ದನ್ನು ಉಣ್ಣು ಮಾರಾಯ ಎಂಬಂತೆ ಮಾಡಿದ ಕರ್ಮಕ್ಕೆ ಶಿಕ್ಷೆ ಅನುಭವಿಸ ಬೇಕಾಗಿದೆ.