ಆಗ 1975-77ರ ಅವಧಿ; ನಾನಾಗ ಹೈಸ್ಕೂಲಿನಲ್ಲಿ ಓದುತ್ತಿದ್ದೆ. ಕಿತ್ತು ತಿನ್ನುವ ಬಡತನ. ಹೊಟ್ಟೆ ತುಂಬಬೇಕಾದಲ್ಲಿ ‘ಒಂದು ಮನೆಹೋಗಿ ಒಂಬತ್ತು ಮನೆ ದಾಸಯ್ಯ’ ಅನ್ನುವಹಾಗೆ ನಿರ್ದಿಷ್ಟವಾಗಿ ಕೆಲವೊಂದು ಮನೆಗಳಿಗೆ ಭೇಟಿ ನೀಡಲೇಬೇಕಾಗಿತ್ತು. ಸಿಗುವ ಒಂದೆರಡು ಸೇರು ಅಕ್ಕಿ ಕಷ್ಟದಲ್ಲಿ ಒಂದೆರಡು ದಿನಕ್ಕೆ ಸಾಕಾಗುತ್ತಿತ್ತು. ಕೆಲವೊಂದು ನಿರ್ದಿಷ್ಟ ಸಂದರ್ಭಗಳಲ್ಲಿ ಊರಿನ ಬ್ರಾಹ್ಮಣರ ಮನೆಯಲ್ಲಿ ಹಾಗೂ ಕೌಟುಂಬಿಕ ದೇವಾಲಯಗಳಲ್ಲಿ ಅಂದಂದಿನ ಪೂಜೆಗೆ ಇಷ್ಟಪಟ್ಟು ಕೆಲವು ಸಲ ಕಷ್ಟಪಟ್ಟು ಹೋಗುತ್ತಿದ್ದ ದಿನಗಳವು. ನನ್ನ ಮಟ್ಟಿಗೆ ಅಂದಂದಿನ ಊಟಕ್ಕೇನೂ ತೊಂದರೆಯಾಗುತ್ತಿರಲಿಲ್ಲ, ಮತ್ತೆ ಏನಾದರೂ ಪುಡಿಗಾಸು ನನ್ನ ಪುಣ್ಯವಶದಿಂದ ಸಿಕ್ಕಿದರೆ ಮನೆಯ ಉಪ್ಪು ಹುಳಿ ಖಾರಕ್ಕೆ ಸೀಮಿತ. ಅಂದಹಾಗೆ ಯಾವಾಗಲೂ ಹಾಗೆಲ್ಲ ಪೂಜೆ ಊಟ ಸಿಗುತ್ತಿರಲಿಲ್ಲ, ಆಗ ನಟ್ಟ ತಿರುಗುವುದೇ ಗತಿ. ಅಂದ ಹಾಗೆ ದುಃಖವೇನಿಲ್ಲ, ಅದರಲ್ಲೂ ಒಂದು ಕಲಿಕೆಯಿದೆ. ನಿಮಗೆ ಯಾರಿಗಾದರೂ ಗೊತ್ತ? ತೌಡು ಮತ್ತು ದಾಸವಾಳದ ಎಲೆಯನ್ನು ಚೆನ್ನಾಗಿ ಅರೆದು ಬೆಂಕಿಯಲ್ಲಿ ಸ್ವಲ್ಪ ಮಜಾಯಿಸಿ ಹಾಲುಬಾಯಿ ಮಾಡಿದರೆ ಎಂತಹ ರುಚಿ! ಆದರೆ ಹಸಿವು ಬೇಕು, ಇದು ಇಲ್ಲಿನ ಅನಿವಾರ್ಯತೆ. ಅದೂ ಕೆಲವು ಸಲ ಸಿಗುತ್ತಿರಲಿಲ್ಲ, ದನಗಳಿಗೆ ಬೇಕಲ್ಲ? ಪರ್ವಾಗಿಲ್ಲ, ಪ್ರಕೃತಿದತ್ತ ಆಹಾರ ತಾನೆ? ನಾವದನ್ನು ಕಸಿದುಕೊಂಡರೆ ಹೇಗೆ ಅಲ್ವೆ? ಅಡಕೆ ತೆಂಗು ಇತ್ಯಾದಿ ಮರಗಳನ್ನು ಹತ್ತಲು ನಾನಾಗಲೇ ಕಲಿತಿದ್ದು. ಆಗ ಒಂದು ಅಡಕೆ ಮರಕ್ಕೆ ಹತ್ತಿದರೆ 10 ಪೈಸೆ, ತೆಂಗಿನ ಮರಕ್ಕೆ 25 ಪೈಸೆ. ಮತ್ತೆ ಹಾಗೆ ಹೀಗೆಂತ ಅಲ್ಲಲ್ಲಿ ಮದುವೆ ಮುಂಜಿ ಪೂಜೆ ಅಂತ ಏನಾದರೂ ಇರುತ್ತಿತ್ತು, ಒಂದು ಹೊತ್ತು ಮೊದಲೇ ಹೋಗುವುದು, ಹೇಗಾದರೂ ಆಹ್ವಾನ ಪತ್ರಿಕೆಯಲ್ಲಿ ಒಪ್ಪೊತ್ತು ಮುಂಚಿತವಾಗಿ ಬಂದು ಸುಧಾರಿಸಿಕೊಡಬೇಕೆಂದು ನಮಗಾಗಿಯೇ ಎನ್ನುವಂತೆ ಮುದ್ರಣವಾಗುತ್ತಿತ್ತು, ಆದಕಾರಣ ಅದರಲ್ಲಿ ಮರ್ಯಾದೆ ಹೋಗುವ ಪ್ರಶ್ನೆಯೇನೂ ಇಲ್ಲ, ಕೆಲವರು ಹಾಸ್ಯವೋ ವ್ಯಂಗ್ಯವೋ ಮಾತಾಡಿರಬಹುದು, ಅವರಿಗೆ ಹಸಿವಿಲ್ಲ ಬಿಡಿ. ಎಲ್ಲಾ ಭೂಮಸೂದೆಯ ಅವಾಂತರ… ಆವಾಗಲೇ ದೇಶಾದ್ಯಂತ ತುರ್ತುಪರಿಸ್ಥಿತಿ ಘೋಷಣೆಯಾಗಬೇಕೆ!
ಮುಂದುವರಿಯುತ್ತದೆ…..
ರಾಜಮಣಿ ರಾಮಕುಂಜ