ಲೇ: ರಮೇಶ ಎಂ. ಬಾಯಾರು ಎಂ.ಎ; ಬಿ.ಇಡಿ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರು

ಕೋವಿಡ್೧೯ ಇದೀಗ ಎರಡನೇ ಅಲೆಯಾಗಿ ಕಾಡತೊಡಗಿದೆ. ಪ್ರಪಂಚದ ಜೀವನ ಸಂಗೀತದ ತಾಳ ಸಂಪೂರ್ಣವಾಗಿ ಹಳಿ ತಪ್ಪಿದೆ. ಮೊದಲ ಅಲೆಯಿಂದ ಕಂಗಾಲಾಗಿದ್ದ ಬದುಕಿನಿಂದ ಚೇತರಿಕೆ ಕಂಡುಬರುತ್ತಿದ್ದAತೆ, ಭರ ಸಿಡಿಲಾಗಿ ಎರಡನೇ ಅಲೆ ತನ್ನ ಪ್ರಹಾರವನ್ನು ಆರಂಭಿಸಿದೆ. ವೃತ್ತಿನಿರತರ ಬದುಕಿಗೆ ಭಾರೀ ಆಘಾತವಾಗಿದೆ. ಕೃಷಿ, ವ್ಯಾಪಾರ, ವ್ಯವಹಾರಗಳು ಅಯೋಮಯ ಆಗುತ್ತಿರುವುದರ ಜೊತೆಗೆ ವಿದ್ಯಾರ್ಥಿಗಳಿಗೂ ಕಲಿಕೆಯ ಮಾರ್ಗ ಕಾಣದಾಗಿದೆ. ಆನ್‌ಲೈನ್ ಶಿಕ್ಷಣ ಎಂಬುದೂ ಕೈಗೆಟುಕದ ಹಣ್ಣಾಗಿದೆ. ಅಂತರ್ಜಾಲ ಸಂಪರ್ಕ ಹಳ್ಳಿಗಳಲ್ಲಿ ಬಲಶಾಲಿಯಾಗಿಲ್ಲ. ಇದರಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನಗಳು ತಲಪುತ್ತಾ ಇಲ್ಲ. ಈ ವಿದ್ಯಾರ್ಥಿಗಳ ಅದಷ್ಟೋ ಕಲಿಕಾ ಸಮಸ್ಯೆಗಳಿಗೆ ಪರಿಹಾರ ದೊರೆಯದಂತಾಗಿದೆ. ಇಂತಹ ಸಂದಿಗ್ಧ ಕಾಲದಲ್ಲಿ ಸಮಾಜದ ಹಿತೋದ್ದೇಶದಿಂದ ನಮ್ಮ ಮಕ್ಕಳ ಶೈಕ್ಷಣಿಕ ಸಾಮರ್ಥ್ಯಗಳನ್ನು ಉನ್ನತಗೊಳಿಸುವ ಹೊಸ ಆಯಾಮಗಳನ್ನು ಕಂಡುಕೊಳ್ಳುವುದು ಅತೀ ಅಗತ್ಯವಾಗಿದೆ.

ಸುಶಿಕ್ಷಿತ ಯುವಕರು ಎಲ್ಲಾ ಊರುಗಳಲ್ಲಿಯೂ ಇದ್ದಾರೆ. ಅವರು ಸಾಮಾಜಿಕ ಕಾಳಜಿಯನ್ನು ವಹಿಸಿದರೆ ಇಂದು ನಮ್ಮ ವಿದ್ಯಾರ್ಥಿಗಳು ಎದುರಿಸುತ್ತಿರುವ ಶೈಕ್ಷಣಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಬಹುದು, ಯುವಕರು ಅವರವರ ಆಸಕ್ತ ವಿಷಯವನ್ನು ಆಯ್ದುಕೊಂಡು ತಂಡಗಳನ್ನು ರಚಿಸಿಕೊಂಡು ನಾಲ್ಕಾರು ಮನೆಗಳ ವಿದ್ಯಾರ್ಥಿಗಳನ್ನು ಕೋವಿಡ್ ನಿಯಮ ಪಾಲನೆಯೊಂದಿಗೆ ಒಂದೆಡೆ ಸೇರಿಸಿ ಅವರಿಗೆ ನೇರ ಬೋಧನೆ ನೀಡುವುದರ ಕಡೆಗೆ ಮನಸ್ಸನ್ನು ಮುಕ್ತಗೊಳಿಸುವ ಅಗತ್ಯ ಇಂದು ಎದ್ದು ಕಾಣುತ್ತಿದೆ. ಆದರೆ ಕಠಿಣವಾದ ಎಚ್ಚರಿಕೆಗಳು ಅಗತ್ಯವೆನ್ನುವುದನ್ನು ಮರೆಯಲಾಗದು. ಉಪಕರಿಸಲು ಹೋಗಿ ಕೋವಿಡ್ ಪ್ರಸರಣೆಗೆ ಕಾರಣವಾದಂತಾಗಬಾರದು. ಈ ರೀತಿಯ ಸೇವೆಯಿಂದ ಸಮಾಜದಲ್ಲಿ ಉತ್ತಮವಾದ ಮನ್ನಣೆ ಒದಗಿ ಬರುವುದರಲ್ಲಿ ಸಂದೇಹವಿಲ್ಲ.

ವಯೋ ನಿವೃತ್ತರಾದ ಶಿಕ್ಷಕರೂ ತಮ್ಮನ್ನು ಮಕ್ಕಳ ಕಲಿಕಾ ಸಮಸ್ಯೆಗಳನ್ನು ನಿಭಾಯಿಸಲು ತಮ್ಮ ಸಾಮರ್ಥ್ಯವನ್ನು ಬಳಸಬಹುದಾಗಿದೆ. ಆದರೆ ಆವರು ವಿಷಯ ಬೋಧನೆಗಿಂತ ಹೆಚ್ಚಾಗಿ ಯುವ ತಂಡಗಳಿಗೆ ಬೋಧÀನಾ ವಿಧಾನಗಳ ಬಗ್ಗೆ, ಬೊಧನಾ ತಂತ್ರಗಳು ಮತ್ತು ಮಕ್ಕಳ ಕಲಿಕಾ ಸಮಸ್ಯೆಗಳ ಪರಿಹಾರೋಪಾಯದ ಬಗ್ಗೆ ಸಲಹೆಗಳನ್ನು ನೀಡುವುದೇ ಸಮಂಜಸವೆನಿಸುತ್ತದೆ. ಯುವ ಸುಶಿಕ್ಷಿತರಿಗೆ ವಿಷಯ ಜ್ಞಾನವಿರುತ್ತದೆ. ಆದರೆ ಅವರು ಬೋಧನೆಯಲ್ಲಿ ಎಡಹುವ ಸಾಧ್ಯತೆ ನಿಚ್ಚಳವಾಗಿದೆ. ಬೋಧÀನೆಯ ಅವರ ಆಲೋಚನೆಗಳಿಗೆ ನಿವೃತ್ತ ಶಿಕ್ಷಕರು ಸೂಕ್ತವಾದ ರೂಪು ನೀಡಿದರೆ ಸಮಾಜಕ್ಕೆ ಮಹದುಪಕಾರವಾಗುತ್ತದೆ. ಪರೀಕ್ಷೆಯಲ್ಲಿ ಬರುವ ಪ್ರಶ್ನಾ ವಿಧಗಳು, ಅವುಗಳ ಆಯ್ಕೆಯ ವಿಧಾನಗಳು, ಜ್ಞಾನ, ಜ್ಞಾಪಿಸುವಿಕೆ, ಅನ್ವಯಿಸುವಿಕೆಯ ಕೌಶಲ್ಯ ಮುಂತಾದ ವಿವಿಧ ವಲಯಗಳನ್ನು ಗುರುತಿಸುವ ಬಗ್ಗೆಯೂ ಹೊಸ ಬೋಧನಾರ್ಥಿಗಳಿಗೆ ನೆರವು ಬೇಕಾಗುತ್ತದೆ.

ಉದ್ಯೋಗಗಳಲ್ಲಿರುವವರೂ ಮಕ್ಕಳ ಕಲಿಕಾ ತಂಡಗಳಿಗೆ ನೆರವಾಗಬಹುದು. ಉದ್ಯೋಗದಲ್ಲಿರುವ ಶಿಕ್ಷಕರಂತೂ ತಮ್ಮ ಊರಿನ ಮಕ್ಕಳಿಗಾಗಿ ದಿನದ ಒಂದಷ್ಟು ಸಮಯವನ್ನು ಮೀಸಲಿಟ್ಟರೆ ಊರ ಮಕ್ಕಳು ಕಲಿಕೆಯಲ್ಲಿ ಭಯಮುಕ್ತರಾಗಿ ಮುನ್ನಡೆಯನ್ನು ಸಾಧಿಸುವರು. ಊರ ಜನಪ್ರತಿನಿಧಿಗಳು, ನಾನಾ ಸಂಘ ಸಂಸ್ಥೆಗಳು ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಗಳೊಳಗೆ ತೊಡಗಿಸಿ ಕೊಳ್ಳುವವರಿಗೆ ಸ್ಥಳ ಮತ್ತು ಇತರೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಮುಂದೆ ಬರುವಂತಾರೆ ಅದು ಸ್ವರ್ಣಗ್ರಾಮವೇ ಆಗುತ್ತದೆ. ಕೆಲವು ಶಾಲಾಡಳಿತ ಮಂಡಳಿಗಳು ಮಕ್ಕಳ ಕಲಿಕೆಗೆ ಪ್ರೇರೇಪಿಸಲು ಸಂಜೆಯ ಉಪಾಹಾರ ಮತ್ತು ರಾತ್ರಿಯ ಊಟವನ್ನೂ ನೀಡುವುದಿದೆ. ಇಂತಹವರು ಅಭಿವಂದನೀಯರು.

ಧಾರ್ಮಿಕ ಕ್ಷೇತ್ರಗಳಲ್ಲಿ ಹುಂಡಿಯಲ್ಲಿ ಹಣವಿರಬಹುದು. ಕೊರೋನಾದ ಸಂದಿಗ್ಧ ಕಾಲದಲ್ಲಿ ಹುಂಡಿಯು ತುಂಬುವುದು ಕಡಿಮೆಯಾದರೂ ಹಿಂದಿನ ಆದಾಯದ ಮಿಗತೆ ಇರಲೂ ಬಹುದು. ಅಂತಹ ಆದಾಯದಲ್ಲಿ ಒಂದು ಭಾಗವನ್ನು ಊರಿನ ಮಕ್ಕಳ ಕಲಿಕಾಭಿವೃದ್ಧಿಯ ಚಟುವಟಿಕೆಗಳಿಗೆ ಉದಾರವಾಗಿ ನೀಡಿದರೆ ನೇರವಾಗಿ ಭಗವಂತನಿಗೆ ಮುದ ನೀಡುವ ಸದುದ್ದೇಶದ ಪ್ರಯತ್ನವಾಗದೇ? ಹುಂಡಿಗಳಿರದ ಮಸೀದಿ ಮತ್ತು ಚರ್ಚುಗಳೂ ನಾನ ರೀತಿಯಲ್ಲಿ ಧಾರ್ಮಿಕ ವಿಧಿಗಳಿಗೆಂದು ದೇಣಿಗೆ ಸಂಗ್ರಮಾಡುವ ಪರಿಪಾಠವಿರುವುದರಿಂದ ಅವರೂ ಮಕ್ಕಳ ಕಲಿಕೆಗೆ ನೆರವಾಗುವುದು ಇಂದು ಅನಿವಾರ್ಯವಾಗಿದೆಯಲ್ಲವೇ?

ಸರಕಾರಿ ಉನ್ನತ ಹುದ್ದೆಗಳು, ಐ.ಟಿ ಉದ್ಯೋಗಿಗಳು, ದೊಡ್ಡ ದೊಡ್ಡ ವ್ಯಾಪಾರಿಗಳು, ಬೃಹತ್ ಉದ್ಯಮಿಗಳು ಜ್ಯೋತಿಷಿಗಳು ಪುರೋಹಿತರು…. ಹೀಗೆ ನಮ್ಮ ಸಮಾಜದಲ್ಲಿ ಕಲಿಕೆಗೆ ನೇರವು ನೀಡುವ ನಾನಾ ವಿಭಾಗಗಳಿವೆ. ಆದರೆ ಅವರಿಂದ ಸೂಕ್ತವಾದ ಪ್ರಯೋಜನಗಳನ್ನು ಊರಿಗಾಗಿ ಸಂಚಯಿಸಲು, ವಿದ್ಯಾ ವಿಕಾಸದ ಚಟುವಟಿಕೆಗಳಿಗೆ ಬೆಂಬಲವಾಗಿ ಪಡೆಯಲು ಗ್ರಾಮಾಂತರ ಯುವ ಪೀಳಿಗೆ ಮನಸ್ಸು ಮಾಡುವ ಅಗತ್ಯವಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here