Monday, October 23, 2023

ಅತ್ಯಾಚಾರ ಆರೋಪಿಗೆ ಅಪಘಾತ

Must read

ಅತ್ಯಾಚಾರ ಆರೋಪ ಎದುರಿಸುತ್ತಿದ್ದು ಪೋಲೀಸರಿಗೆ ಮೋಸ್ಟ್ ವಾಂಟೆಡ್‌ ಆರೋಪಿಯಾಗಿದ್ದ ವ್ಯಕ್ತಿಯೋರ್ವನಿಗೆ ಶುಕ್ರವಾರ ಬೆಳಿಗ್ಗೆ ಆಕ್ಸಿಡೆಂಟ್ ಆಗಿದ್ದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಆಲಾಡಿ ನಿವಾಸಿ ಪುರುಷೋತ್ತಮ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ.

ಕಳೆದ ವಾರ ಕಾಮುಕ ಚಿಕ್ಕಪ್ಪನಿಂದಲೇ ನಿರಂತರ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಸಂತ್ರಸ್ತ ಯುವತಿಯಿಂದ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ಆರೋಪಿಯ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆದರೆ ದೂರು ನೀಡಿ ಒಂದು ವಾರವಾದರೂ ಆರೋಪಿಯ ಬಂಧನವಾಗಿರಲಿಲ್ಲ.

ಆರೋಪಿ ಪುರುಷೋತ್ತಮ ಶುಕ್ರವಾರ ಪೋಲೀಸರ ಕಣ್ಣು ತಪ್ಪಿಸಿ ಬೆಂಗಳೂರು ಕಡೆಗೆ ಕಾರಿನಲ್ಲಿ ಸ್ವತಃ ಡ್ರೈವ್ ಮಾಡಿಕೊಂಡು ಹೋಗುವಾಗ ಕಡಬ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿಯಲ್ಲಿ ಅತ್ಯಾಚಾರ ಆರೋಪಿ  ಪುರುಷೋತ್ತಮನಿಗೆ ಗಾಯಗಳಾಗಿದ್ದು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರಸ್ತುತ ಪೋಲೀಸ್ ಕಾವಲಿನಲ್ಲಿ ಆರೋಪಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

 *ಘಟನೆಯ ವಿವರ*

ಚಿಕ್ಕಪ್ಪನಿಂದಲೇ ನಿರಂತರವಾಗಿ ದೈಹಿಕ ಅತ್ಯಾಚಾರಗೊಳಗಾದ ಯುವತಿಯ ದೂರಿನ ಮೇರೆಗೆ ವ್ಯಕ್ತಿಯೋರ್ವನ ಮೇಲೆ ಅತ್ಯಾಚಾರ ಪ್ರಕರಣ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಆಲಾಡಿ ನಿವಾಸಿ ಪುರುಷೋತ್ತಮ ಎಂಬಾತ ಆತನ ಪತ್ನಿಯ ಅಕ್ಕ‌ನ ಮಗಳ ಮೇಲೆಯೇ ನಿರಂತರವಾಗಿ ಬೆದರಿಕೆ ಹಾಕಿ ಬಲಾತ್ಕಾರ ಮಾಡಿ ಅತ್ಯಾಚಾರ ಮಾಡಿದ್ದಾನೆ ಎಂದು ಕಾಲೇಜು ವಿದ್ಯಾರ್ಥಿನಿ ದೂರು ನೀಡಿದ್ದಳು.

ಮನೆಯವರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ ಮನೆಯವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಳು.

ಕಳೆದ ಒಂದು ವರ್ಷದಿಂದ ಯುವತಿ ಬಿ.ಸಿ.ರೋಡ್ ಸಮೀಪದ ಸಂಬಂಧಿಕರ ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದು ಅದೇ ಮನೆಯಲ್ಲಿ ಆರೋಪಿ ಪುರುಷೋತ್ತಮ ಕೂಡ ವಾಸವಾಗಿದ್ದ, ಅವಾಗಿಂದಲೇ ಆರೋಪಿಯು ಸಂಬಂಧದಲ್ಲಿ ಮಗಳಾಗಿರುವ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿ ಅವಳ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡುತ್ತಲೇ ಬಂದಿದ್ದು, ಈತನ ಕಿರುಕುಳ ತಡೆಯಲಾಗದೆ ಮನೆಯವರಿಗೆ ತಿಳಿಸಿ ಠಾಣೆಗೆ ದೂರು ನೀಡಿದ್ದಾಳೆ.

ಆ ಬಳಿಕ ಆರೋಪಿ ಪುರುಷೋತ್ತಮ ತಲೆಮರೆಸಿಕೊಂಡಿದ್ದು ಪೊಲೀಸರು ಈತನ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದರು.

‌‌ ಆದರೆ ಪೋಲೀಸರ ಕಣ್ಣು ತಪ್ಪಿಸಿ ಅಡಗಿಕೊಂಡಿದ್ದ ಆರೋಪಿ ಬೆಂಗಳೂರು ಕಡೆಗೆ ತೆರಳುತ್ತಿದ್ದ ಎನ್ನಲಾಗಿದೆ.

ಅತ್ಯಾಚಾರ ಅರೋಪದಲ್ಲಿ ತಲೆಮರೆಸಿಕೊಂಡು ಪರಾರಿಯಾಗಲು ಯತ್ನಿಸಿದ್ದ ಆರೋಪಿ ಪ್ರಸ್ತುತ ಆಸ್ಪತ್ರೆಯ ಲ್ಲಿ ಮಲಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಪೋಲೀಸರು ವಶಕ್ಕೆ ಪಡೆಯುವ ಅವಕಾಶ ಗಳು ಹೆಚ್ಚು ಇವೆ.

More articles

Latest article