ಬಂಟ್ವಾಳ: ಕೋವಿಡ್ ನಿರ್ಮೂಲನೆಯೇ ನಮ್ಮ ಮೊದಲ ಆದ್ಯತೆಯಾಗಿದ್ದು ರಾಜಕೀಯ ಮಾಡದೆ ಪ್ರತಿಯೊಬ್ಬರೂ ಜವಬ್ದಾರಿಯಿಂದ ವರ್ತಿಸಿ. ಸರ್ಕಾರದ ಜೊತೆ ಸಹಕಾರ ನೀಡಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ವೀರಕಂಭ ಗ್ರಾಮ ಪಂಚಾಯತ್ ನಲ್ಲಿ ಗುರುವಾರ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.
ಲಸಿಕೆ ವಿಚಾರದಲ್ಲಿ ವೀರಕಂಭ ಗ್ರಾಮದಲ್ಲಿ ಶೇ.32 ಸಾಧನೆಯಾಗಿದ್ದು, ಮುಂದಿನ ಹಂತದಲ್ಲಿ ಲಭ್ಯವಿರುವಾಗ ಆದ್ಯತೆಯ ನೆಲೆಯಲ್ಲಿ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
ಕೊರೋನಾ ನಿಗ್ರಹದ ವಿಚಾರದಲ್ಲಿ ದಾಕ್ಷಿಣ್ಯದ ಪ್ರಶ್ನೆ ಇಲ್ಲ, ಸಹಕಾರ ನೀಡದೇ ಇದ್ದರೆ ಅಗತ್ಯ ಕ್ರಮ ಕೈಗೊಳ್ಳಲು ಟಾಸ್ಕ್ ಫೋರ್ಸ್ ಸಮಿತಿಗೂ ಅಧಿಕಾರ ಇದೆ, ಅದನ್ನು ಸ್ಥಳೀಯವಾಗಿ ಬಳಸಿಕೊಳ್ಳಿ, ಎಲ್ಲರೂ ಜೊತೆಯಾಗಿ ಕೊರೋನಾ ನಿಗ್ರಹಿಸೋಣ ಎಂದರು.
ವೀರಕಂಭದಲ್ಲಿ ಪತ್ತೆಯಾದ 34 ಫಾಸಿಟಿವ್ ಪ್ರಕರಣಗಳ ಪೈಕಿ ಪ್ರಸ್ತುತ 32 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ 31 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಸಹಾಯಕಿಯರು ಮಾಹಿತಿ ನೀಡಿದರು.
ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್.ಆರ್. ಮಾಹಿತಿ ನೀಡಿ, ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಬಂದಿರುವವರು ಕನಿಷ್ಠ ಒಂದು ವಾರ ಕ್ವಾರಂಟೈನ್ ನಲ್ಲಿ ಇರಬೇಕು, ಈ ಬಗ್ಗೆ ನಿಗಾವಹಿಸುವಂತೆ ಸೂಚನೆ ನೀಡಿದರು.
ತಾ.ಪಂ. ಇ.ಒ. ರಾಜಣ್ಣ ಮಾತನಾಡಿ, ಕೋವಿಡ್ ಮುಕ್ತ ಗ್ರಾಮವಾಗಿಸುವುದು ಟಾಸ್ಕ್ ಫೋರ್ಸ್ ಸಮಿತಿಯ ಮುಖ್ಯ ಉದ್ದೇಶವಾಗಿದ್ದು, ಮನೆಮನೆಗಳಲ್ಲಿ ಕೋವಿಡ್ ನಿಯಮಗಳ ಪಾಲನೆಯ ಕುರಿತು ಜಾಗೃತಿ ವಹಿಸಬೇಕೆಂದರು.
ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್, ಉಪಾಧ್ಯಕ್ಷೆ ಶೀಲಾ ನಿರ್ಮಲಾ ವೇಗಸ್, ತಾ.ಪಂ. ಸದಸ್ಯೆ ಗೀತಾ ಚಂದ್ರಶೇಖರ್, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಪಿ.ಡಿ.ಒ. ಗಿರಿಜಾ ಪಿ., ಗ್ರಾಮ ಕರಣಿಕ ಕರಿಬಸಪ್ಪ, ಕಂದಾಯ ನಿರೀಕ್ಷಕ ರಾಮಕಾಟಿಪಳ್ಳ, ಶಾಸಕರ ವಾರ್ ರೂಂ ಪ್ರಮುಖರಾದ ದೇವಪ್ಪ ಪೂಜಾರಿ, ಆನಂದ ಶಂಭೂರು, ಯಶವಂತ ನಾಯ್ಕ್, ದೇವಿಪ್ರಸಾದ್ ಶೆಟ್ಟಿ ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.