ಬಂಟ್ವಾಳ: ಸರ್ಕಾರದ ನಿರ್ದೇಶನದಂತೆ ಆದ್ಯತೆಯ ನೆಲೆಯಲ್ಲಿ ಕೋವಿಡ್ ಲಸಿಕೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಕಾರ್ಯಕರ್ತರ ಜೊತೆ ಟಾಸ್ಕ್ ಫೋರ್ಸ್ ಸಮಿತಿಯೂ ನಿಗಾವಹಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸಲಹೆ ನೀಡಿದ್ದಾರೆ.
ಅವರು ಅನಂತಾಡಿ ಗ್ರಾಮ ಪಂಚಾಯತ್ ನಲ್ಲಿ ಸೋಮವಾರ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.
ಅನಂತಾಡಿ ಗ್ರಾಮದಲ್ಲಿ ಲಸಿಕೆ ನೀಡಿಕೆಯ ಪ್ರಗತಿ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, 45 ವರ್ಷಕ್ಕಿಂತ ಮೇಲ್ಪಟ್ಟವರು ಇನ್ನೂ ಲಸಿಕೆ ಪಡೆದುಕೊಳ್ಳದೇ ಇದ್ದಲ್ಲಿ ಅಂತವರನ್ನು ಗುರುತಿಸಿ, ಲಸಿಕೆ ಪಡೆದುಕೊಳ್ಳಲು ಮನವೊಲಿಸಿ, ಲಸಿಕೆ ನೀಡಿಕೆಯಲ್ಲಿ ಶೇ.100 ಸಾಧನೆ ಮಾಡುವಂತೆ ಶಾಸಕರು ತಿಳಿಸಿದರು.
ಗ್ರಾಮದಲ್ಲಿ ಎದುರಾಗುವ ಸಮಸ್ಯೆಗಳಿಗೆ ಗ್ರಾಮದಲ್ಲೇ ನಿಯಂತ್ರಣ ಸಾಧ್ಯವಾದರೆ ಮಾತ್ರ ನೈಜ ಪರಿಹಾರ ಸಾಧ್ಯ. ಈ ನಿಟ್ಟಿನಲ್ಲಿ ಪಂಚಾಯತ್ ಗಮನಹರಿಸುವಂತೆ ಅವರು ಮನವಿ ಮಾಡಿದರು.
ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್.ಆರ್. ಮಾಹಿತಿ ನೀಡಿ, ನ್ಯಾಯಬೆಲೆಯ ಪಡಿತರಗಳನ್ನು ಮಧ್ಯಾಹ್ನ 12 ಗಂಟೆಯ ವರೆಗೆ ವಿತರಿಸಲು ಅವಕಾಶವಿದೆ. ಕೋವಿಡ್ ನಿಯಮಗಳನ್ನು ಪಾಲಿಸಿ ಇದನ್ನು ನಿರ್ವಹಿಸುವಂತೆ ಸೂಚಿಸಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ, ಕೋವಿಡ್ ನಿಯಮಗಳ ಪಾಲನೆ ಹಾಗೂ ಅದರ ನಿರ್ವಹಣೆ ಟಾಸ್ಕ್ ಫೋರ್ಸ್ ಸಮಿತಿಯ ಮುಖ್ಯ ಆಶಯವಾಗಿದೆ. ಗ್ರಾಮ ಪಂಚಾಯತ್ ಮಟ್ಟದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜೊತೆಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೇಸರ್, ಕೊಡೆ ವಿತರಣೆಗೆ ಪಂಚಾಯತ್ ನಿಧಿಯಿಂದ ಅನುದಾನ ಬಳಸಿಕೊಳ್ಳುವಂತೆ ಅವರು ಸೂಚಿಸಿದರು.
ಗ್ರಾ.ಪಂ. ವ್ಯಾಪ್ತಿಯಲ್ಲಿ 11 ಮಂದಿ ಕೊರೋನಾ ಫಾಸಿಟಿವ್ ವರದಿ ಬಂದಿದ್ದು, ಈ ಪೈಕಿ ಮೂವರು ಗುಣಮುಖರಾಗಿ, 8 ಮಂದಿ ಹೋಂ ಐಸೋಲೇಶನ್ ನಲ್ಲಿದ್ದಾರೆ. 20 ಮಂದಿ ಹೊರಜಿಲ್ಲೆಯಿಂದ ಬಂದಿದ್ದು ಎಲ್ಲರನ್ನೂ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಈ ಪೈಕಿ ಕೋವಿಡ್ ಲಕ್ಷಣವಿದ್ದ ಓರ್ವರಲ್ಲಿ ಫಾಸಿಟಿವ್ ವರದಿಯಾಗಿದೆ ಎಂದು ಆರೋಗ್ಯ ಸಹಾಯಕಿ ಮಾಹಿತಿ ನೀಡಿದರು.
ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಪೂಜಾರಿ ಬಂಟ್ರಿಂಜ, ಉಪಾಧ್ಯಕ್ಷ ಕುಸುಮಾಧರ ಗೌಡ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ,
ಪಿ.ಡಿ.ಒ.ಜಯರಾಮ ಕೆ, ತಾ.ಪಂ. ಸದಸ್ಯೆ ಗೀತಾಚಂದ್ರಶೇಖರ್ , ಕಂದಾಯ ನಿರೀಕ್ಷಕ ದಿವಾಕರ, ಗ್ರಾಮ ಕರಣಿಕ ಮಂಜುನಾಥ ಎಚ್, ಕೆ, ಶಾಸಕರ ವಾರ್ ರೂಂ ಪ್ರಮುಖರಾದ ದೇವಪ್ಪ ಪೂಜಾರಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಮತ್ತು ಅಧಿಕಾರಿಗಳು ಹಾಜರಿದ್ದರು.