ಬೆಂಗಳೂರು: ”ಕೊರೊನಾ ಎರಡನೇ ಅಲೆ ಇನ್ನಷ್ಟು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ” ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಜೂನ್ 21 ರಿಂದ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಈಗ ಕೊರೊನಾ ಹೆಚ್ಚಳ ಹಿನ್ನೆಲೆ ಮುಂದೂಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸುರೇಶ್ ಕುಮಾರ್ ಅವರು, ”ಕೊರೊನಾ ಹೆಚ್ಚಳ ಹಿನ್ನೆಲೆ ಜೂನ್ 21 ರಿಂದ ನಡೆಯಲಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ. ಮುಂದಿನ ಪರೀಕ್ಷಾ ದಿನಾಂಕವನ್ನು ತಿಳಿಸಲಾಗುವುದು” ಎಂದು ಹೇಳಿದ್ದಾರೆ.
”ಹಾಗೆಯೇ ವಿದ್ಯಾರ್ಥಿ-ಪೋಷಕರ, ವಿವಿಧ ಶಾಲಾ ಸಂಘಟನೆಗಳ ಆತಂಕಗಳನ್ನು ಗಮನದಲ್ಲಿರಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ” ಎಂದು ಕೂಡಾ ತಿಳಿಸಿದ್ದಾರೆ.
ಇನ್ನು ಮೇ 08 ರಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ಸುರೇಶ್ ಅವರು, ”ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಜೂನ್ 21 ರಂದು ನಡೆಸಲು ನಿಶ್ಚಯಿಸಲಾಗಿದೆ. ಈಗ ಕೊರೊನಾ ಸೋಂಕಿನ ಮಧ್ಯೆ ವಿದ್ಯಾರ್ಥಿಗಳು ಯಾವುದೇ ವಿಚಲಿತರಾಗದೆ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಿ” ಎಂದು ಹೇಳಿದ್ದರು.