ಸುಳ್ಯ: ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕ ತಾಯಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಪಂಬೆತ್ತಾಡಿ ಗ್ರಾಮದ ಮೂಲೆಮನೆ ವಿಶ್ವನಾಥ ಗೌಡರ ಪುತ್ರಿ, ಈಶ್ವರಮಂಗಲದ ಮುಂಡ್ಯ ಕೆಮ್ಮುತ್ತಡ್ಕ ಮನೋಜ್ ಎಂಬವರ ಪತ್ನಿ ಪೂಜಿತಾ ಎಂದು ಗುರುತಿಸಲಾಗಿದೆ.
ಪೂಜಿತಾ ಅವರನ್ನು ಹೆರಿಗೆಗೆಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ರವಿವಾರ ಬೆಳಗ್ಗೆ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆರೋಗ್ಯವಾಗಿದ್ದ ಅವರಿಗೆ ಮಧ್ಯಾಹ್ನದ ವೇಳೆಗೆ ತೀವ್ರ ರಕ್ತಸ್ರಾವ ಉಂಟಾಗಿದ್ದು ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಸಂಜೆಯ ವೇಳೆಗೆ ಅವರು ಚೇತರಿಸಿಕೊಂಡಿದ್ದರು. ಆದರೆ ತಡರಾತ್ರಿಯ ವೇಳೆ ಮತ್ತೆ ರಕ್ತಸ್ರಾವ ಉಂಟಾಗಿ ಅವರು ಮೃತಪಟ್ಟಿದ್ದಾರೆ.
ಮಕ್ಕಳು ಆರೋಗ್ಯವಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದಾರೆ. ಮೃತ ಪೂಜಿತಾ ಅವರು ತಂದೆ, ತಾಯಿ, ಸಹೋದರ, ಪತಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಪೂಜಿತಾ ಅವರು ಬಿಎಡ್ ಅಧ್ಯಯನ ಮಾಡಿದ್ದು ಇತ್ತೀಗಷ್ಟೇ ಅವರು ಡಿಸ್ಟಿಂಕ್ಷನ್‌ನೊಂದಿಗೆ ತೇರ್ಗಡೆಯಾಗಿದ್ದರು.