ಬಂಟ್ವಾಳ: ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್, ಬಂಟ್ವಾಳ ಯುವ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ಹಾಗೂ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇವರ ಸಹ ಭಾಗಿತ್ವದಲ್ಲಿ ರವಿವಾರ ಬಿ.ಸಿ.ರೋಡ್ ಕೈಕಂಬದ ಬೆಸ್ಟ್ ಶಾಲೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದ ಮಾಜಿ ಸಚಿವ ಬಿ.ರಮಾನಾಥ ರೈ, ಒಂದೆಡೆ ಕೋವಿಡ್-19 ವೈರಸ್ ತೀವ್ರವಾಗಿ ಹರಡುತ್ತಿರುವುದರಿಂದ ರೋಗಿಗಳ ಸಂಖ್ಯೆ ಹೆಚ್ಚಾಗಿ ರಕ್ತದ ಬೇಡಿಕೆ ಹೆಚ್ಚಾಗುತ್ತಿದೆ. ಅಲ್ಲದೆ ಕೋವಿಡ್ ವ್ಯಾಕ್ಸಿನ್ ಹಾಕಿದ ಬಳಿಕ ಕೆಲವು ಸಮಯದ ವರೆಗೆ ರಕ್ತದಾನ ಮಾಡುವಂತಿಲ್ಲ. ಈ ಪರಿಸ್ಥಿತಿಯನ್ನು ಅರಿತು ಬಂಟ್ವಾಳ ಕಾಂಗ್ರೆಸ್ ನ ವಿವಿಧ ಘಟಕಗಳ ವತಿಯಿಂದ ಇಂದು ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದರು.
ಮೇ 9ರಂದು ರಕ್ತದಾನ ಶಿಬಿರವನ್ನು ಏರ್ಪಡಿಸಲು ದಿನಾಂಕ ನಿಗದಿ ಪಡಿಸಲಾಗಿತ್ತು. ಆದರೆ ಕೆ.ಎಂ.ಸಿ. ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ಕೊತರೆಯಿಂದ ಶಿಬಿರವನ್ನು ಮುಂದೂಡಿ ಇಂದು ರೆಡ್ ಕ್ರಾಸ್ ಸಂಸ್ಥೆಯ ಸಹಕಾರೊಂದಿಗೆ ಏರ್ಪಡಿಸಲಾಗಿದೆ. ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿರುವುದು ನಮಗೆ ಸಂತೋಷ ವಿಷಯವಾಗಿದೆ ಎಂದು ಅವರು ಹೇಳಿದರು.
ಲಾಕ್ ಡೌನ್ ನ ಈ ಸಂಕಷ್ಟದ ಸಮಯದಲ್ಲಿ ರಕ್ತದಾನ ಶಿಬಿರ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಲಾಕ್ ಡೌನ್ ನಿಂದ ಬಡವರು, ಜನಸಾಮಾನ್ಯರು ತೀವ್ರ ಸಂಕಷ್ಟದಲ್ಲಿ ಇದ್ದಾರೆ. ಇದನ್ನು ಕೂಡಾ ಮನಗಂಡು ಕಾಂಗ್ರೆಸ್ ನ ವಿವಿಧ ತಂಡಗಳು ನಿರಂತರ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ, ನಿರ್ಗತಿಕರಿಗೆ ಊಟದ ವ್ಯವಸ್ಥೆ, ಕೊರೋನ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್ ಸೇವೆ ಸಹಿತ ಇತರ ವೈದ್ಯಕೀಯ ಸೇವೆಯನ್ನು ಕಾಂಗ್ರೆಸ್ ವತಿಯಿಂದ ಯಶಸ್ವಿಯಾಗಿ ನಡೆಯುತ್ತಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತಿದ್ದೇನೆ ಎಂದು ರಮಾನಾಥ ರೈ ಹೇಳಿದರು.
ಶಿಬಿರದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಎಂ.ಎಸ್.ಮುಹಮ್ಮದ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ. ಶೆಟ್ಟಿ, ಬಂಟ್ವಾಳ ಪುರಸಭೆಯ ಅಧ್ಯಕ್ಷ ಮುಹಮ್ಮದ್ ಶರೀಫ್, ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಹಾಗೂ ಸುದೀಪ್ ಕುಮಾರ್ ಶೆಟ್ಟಿ, ಪಾಣೆಮಂಗಳೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷರ ಇಬ್ರಾಹೀಂ ನವಾಝ್ ಬಡಕಬೈಲು, ಬಂಟ್ವಾಳ ಎನ್.ಎಸ್.ಯು.ಐ. ಅಧ್ಯಕ್ಷ ವಿನಯ್ ಕುಮಾರ್ ಸಿಂದ್ಯಾ ಬಂಟ್ವಾಳ ಸಹಿತ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.