ಬಂಟ್ವಾಳ: ಕಳೆದ ಎರಡೂವರೆ ವರ್ಷಗಳ ಹಿಂದೆ ಮಳೆಗಾಲದ ಸಮಯದಲ್ಲಿ ಪಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮೂಲರಪಟ್ಣ ಸೇತುವೆಯು ಏಕಾಏಕಿ ಮುರಿದು ಬಿದಿದ್ದು ಪ್ರಸ್ತುತ ಅದೇ ಸ್ಥಳದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಮಂಗಳೂರು ಶಾಸಕ ಡಾ. ವೈ ಭರತ್ ಶೆಟ್ಟಿ ಅವರ ವಿಶೇಷ ಮುತುವರ್ಜಿಯಿಂದ ನೂತನ ಸೇತುವೆ ನಿರ್ಮಾಣ ಕಾಮಗಾರಿ ಸುಮಾರು 13 ಕೋಟಿ ರೂ. ವೆಚ್ಚದಲ್ಲಿ ಭರದಿಂದ ಸಾಗುತ್ತಿದೆ.
ಈಗಾಗಲೇ ಸೇತುವೆಯ ಸುಮಾರು 60 ಶೇ.ಕ್ಕೂ ಅಧಿಕ ಕಾಮಗಾರಿ ಪೂರ್ಣಗೊಂಡಿದೆ. ಈ ಬಾರಿಯ ಲಾಕ್ ಡೌನ್ ಅವಧಿಯಲ್ಲಿ ಅತ್ಯಂತ ವೇಗವಾಗಿ ಕಾಮಗಾರಿ ನಡೆಸುವ ಕಂಪೆನಿ ಜುಲೈ ಅಂತ್ಯಕ್ಕೆ ಬಹುತೇಕ ಸೇತುವೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ಈ ಹಿಂದೆ ಹೇಳಿಕೆ ನೀಡಿತ್ತಾದರೂ ಕೆಲಸದ ವೇಗ ನೋಡಿದರೆ ಮಳೆಗಾಲದ ಮೊದಲೇ ಸಂಚಾರಕ್ಕೆ ಅವಕಾಶ ಮಾಡಿಕೊಡುವ ನಿರೀಕ್ಷೆ ಇದೆ.
ಮಂಗಳೂರು ಹಾಗೂ ಬಂಟ್ವಾಳ ತಾಲೂಕನ್ನು ಬೆಸೆಯುವ ಮೂಲರಪಟ್ಣ ಸೇತುವೆಯು 2018ರ ಜೂನ್ 25ರಂದು ಮಳೆಗೆ ಕುಸಿದು ಬಿದ್ದಿತ್ತು. ನೂರಾರು ಕುಟುಂಬಗಳಿಗೆ ನಿತ್ಯದ ಆಸರೆಯಾಗಿದ್ದ ಈ ಸೇತುವೆಯ ಸಂಪರ್ಕ ಕಡಿತಗೊಂಡ ಪರಿಣಾಮ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಬಳಿಕ ಸುತ್ತ ಬಳಸಿ ಸಾಗಬೇಕಾದ ಅನಿವಾರ್ಯತೆಯೂ ಎದುರಾಗಿತ್ತು.
ಫಿಲ್ಲರ್‌ಗಳು ಬಹುತೇಕ ಪೂರ್ಣ
ಸೇತುವೆ ಕುಸಿತಗೊಂಡ ಬಳಿಕ ಕಾಮಗಾರಿ ವಿಳಂಬವಾಗಿ ಆರಂಭಗೊಂಡಿದ್ದರೂ ಕೆಲವೇ ತಿಂಗಳ ಹಿಂದೆ ಪ್ರಾರಂಭಗೊಂಡ ಕಾಮಗಾರಿ ಸುಮಾರು ಮಕ್ತಾಯದ ಹಂತ ತಲುಪಿದೆ.
ಸೇತುವೆಯ ಫಿಲ್ಲರ್ ಗಳ ಕಾಮಗಾರಿ ಪೂರ್ಣಗೊಂಡಿದ್ದು ಬಂಟ್ವಾಳ ಭಾಗದಲ್ಲಿ ಒಂದು ಫಿಲ್ಲರ್‌ಗೆ ಕಾಂಕ್ರೀಟ್ ಹಾಕುವ ಕೆಲಸ ಮುಕ್ತಾಯದ ಹಂತದಲ್ಲಿದೆ.
ಮಳೆಗಾಲಕ್ಕೆ ಮುಂಚೆ ಫಿಲ್ಲರ್‌ಗಳ ಕಾಮಗಾರಿ ಪೂರ್ಣಗೊಂಡರೆ ಬಳಿಕ ಮಳೆ ಬಂದರೂ ಯಾವುದೇ ಅಡ್ಡಿಯಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಲೋಕೋಪಯೋಗಿ ಇಲಾಖೆ ಮಂಗಳೂರು ವಿಭಾಗದಿಂದ ಕಾಮಗಾರಿ ನಡೆಯುತ್ತಿದ್ದು, ಜಿಲ್ಲೆಯ ಪ್ರಮುಖ ಗುತ್ತಿಗೆ ಸಂಸ್ಥೆ ಮುಗ್ರೋಡಿ ಕನ್ಸ್ಟ್ರಕ್ಷನ್ಸ್ ನವರು ಕಾಮಗಾರಿ ನಿರ್ವಹಿಸುತ್ತಿದ್ದಾರೆ.
ಸ್ಥಳೀಯ ನಿರ್ಮಾಣ ಸಂಸ್ಥೆಯೇ ಕಾಮಗಾರಿಯನ್ನು ಗುತ್ತಿಗೆ ವಹಿಸಿಕೊಂಡಿರುವ ಕಾರಣದಿಂದ ಕಾಮಗಾರಿ ವೇಗವಾಗಿ ಸಾಗುವುದಕ್ಕೆ ಅನುಕೂಲವಾಗಿದೆ. ಇಲ್ಲದೇ ಇದ್ದಾಗ ಹೊರ ಜಿಲ್ಲೆ, ರಾಜ್ಯದ ಗುತ್ತಿಗೆ ಸಂಸ್ಥೆಗಳು ಕಾಮಗಾರಿ ನಿರ್ವಹಿಸುವುದಾದರೆ, ಸ್ವಲ್ಪ ಬದಲಾವಣೆಗಳು ಬಂದರೂ ಗುತ್ತಿಗೆ ಸಂಸ್ಥೆಯ ಕೇಂದ್ರ ಕಚೇರಿಯ ಒಪ್ಪಿಗೆ ಬೇಕಾಗುವುದರಿಂದ ವಿಳಂಬವಾಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಿಸುತ್ತಾರೆ.
೧೭೪.೮ ಮೀ. ಉದ್ದದ ಸೇತುವೆ
ಮೂಲರಪಟ್ಣದಲ್ಲಿ ಸೇತುವೆಯು ೧೭೪.೮ ಮೀ. ಉದ್ದದಲ್ಲಿ ನಿರ್ಮಾಣಗೊಳ್ಳಲಿದ್ದು, ೧೦ ಮೀ. ಅಗಲವನ್ನು ಹೊಂದಿರುತ್ತದೆ. ಸೇತುವೆಯ ಮಧ್ಯದಲ್ಲಿ ೫ ಫಿಲ್ಲರ್ ಗಳು ನಿರ್ಮಾಣವಾಗಲಿದ್ದು, ಎರಡೂ ಬದಿಗಳಲ್ಲಿ ೨ ಅಬಾರ್ಡ್ಮೆಂಟ್ ಇರುತ್ತದೆ. ಫಿಲ್ಲರ್‌ಗಳ ಮಧ್ಯೆ ೨೮ ಮೀ. ಅಂತರವಿದ್ದು, ಸೇತುವೆಯ ೧೦ ಮೀ. ಅಗಲದಲ್ಲಿ ೭.೫ ಮೀ. ಅಗಲದಲ್ಲಿ ವಾಹನ ಸಂಚಾರಕ್ಕೆ ರಸ್ತೆ ಸಿಗಲಿದೆ.
ಎಲ್ಲಾ ಫಿಲ್ಲರ್‌ಗಳ ಕಾಮಗಾರಿ ಪೂರ್ಣಗೊಂಡ ತತ್‌ಕ್ಷಣ ಅವುಗಳ ಮೇಲ್ಭಾಗಕ್ಕೆ ಸ್ಲ್ಯಾಬ್‌ಗಳನ್ನು ಅಳವಡಿಸಲಾಗುತ್ತದೆ. ಈ ರೀತಿ ಅಳವಡಿಸುವ ಸ್ಲ್ಯಾಬ್‌ಗಳನ್ನು ಈಗಾಗಲೇ ಸಿದ್ಧಪಡಿಸಿ ಇಡಲಾಗಿದ್ದು, ಫಿಲ್ಲರ್‌ಗಳ ಕಾಮಗಾರಿ ಪೂರ್ಣಗೊಳ್ಳುವುದಕ್ಕೆ ಕಾಯಲಾಗುತ್ತಿದೆ. ಫಿಲ್ಲರ್‌ಗಳ ಕಾಮಗಾರಿ ಸುಮಾರು ೯೦ ಶೇ.ದಷ್ಟು ಪೂರ್ಣಗೊಂಡಿದ್ದು, ಸ್ಲ್ಯಾಬ್ ಹಾಕಿದ ಬಳಿಕ ಮೇಲ್ಭಾಗಕ್ಕೆ ಅಂತಿಮ ಹಂತದ ಕಾಂಕ್ರೀಟ್ ಹಾಕಲಾಗುತ್ತದೆ.
ಬಿರು ಬಿಸಿಲಲ್ಲೇ ಕಾಮಗಾರಿ
ಪ್ರಸ್ತುತ ಬಿರು ಬಿಸಿಲಿನ ವಾತಾವರಣವಿದ್ದು, ಬೆಳಗ್ಗಿನಿಂದ ಸಂಜೆಯವರೆಗೂ ಬಿಸಿಲು ಇರುತ್ತದೆ. ಪ್ರಸ್ತುತ ಉತ್ತರ ಭಾರತ ಮೂಲದ ಕಾರ್ಮಿಕರು ಕಾಮಗಾರಿಯಲ್ಲಿ ನಿರತರಾಗಿದ್ದು, ಬಿಸಿಲು ಇದ್ದರೂ, ಸೇತುವೆಯ ಕಾಮಗಾರಿಯನ್ನು ಬೇಸಗೆಯಲ್ಲೇ ನಡೆಸುವುದು ಅನಿವಾರ್ಯವಾಗಿದೆ.
ಮೂಲರಪಟ್ಣ ಸೇತುವೆ ಬಿದ್ದ ಬಳಿಕ ಈ ಭಾಗದ ಬಸ್ಸು ಸಂಚಾರ ಕಡಿತಗೊಂಡಿದೆ. ಸೇತುವೆಯ ಕೊಂಚ ದೂರದಲ್ಲಿರುವ ತೂಗು ಸೇತುವೆಯ ಮೂಲಕ ಜನರು ಸಂಪರ್ಕ ಸಾಧಿಸಿದ್ದರು. ಬೇಸಗೆಯಲ್ಲಿ ನದಿಗೆ ಮಣ್ಣು ಹಾಕಿ ರಸ್ತೆ ನಿರ್ಮಿಸಲಾಗುತ್ತಿದ್ದು, ಆದರೆ ಪ್ರಸ್ತುತ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ನಿರ್ಮಿಸಿಲ್ಲ.