ಬಂಟ್ವಾಳ: ಗ್ರಾಮಗಳಿಗೆ ಹೊರಭಾಗದಿಂದ ಬರುವವರ ಕುರಿತು ಹೆಚ್ಚಿನ ನಿಗಾ ಇರಿಸಬೇಕು. ಕೊರೊನಾ ಸೋಂಕು ದೃಢಪಟ್ಟವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸಬೇಕು. ಜತೆಗೆ ಲಸಿಕೆ ಪಡೆಯಲು ಬಾಕಿ ಇದ್ದವರು ಹುಡುಕಿಕೊಂಡು ಲಭ್ಯವಿರುವ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಗ್ರಾ.ಪಂ. ಟಾಸ್ಕ್ ಫೋರ್ಸ್ ಸಮಿತಿಗೆ ಸೂಚನೆ ನೀಡಿದರು.
ಅವರು ಸರಪಾಡಿ, ಮಣಿನಾಲ್ಕೂರು ಹಾಗೂ ಉಳಿ ಗ್ರಾ.ಪಂ. ಗಳಲ್ಲಿ ಸ್ಥಳೀಯ ಟಾಸ್ಕ್ ಫೋರ್ಸ್ ಸಮಿತಿಗಳ ಸಭೆ ನಡೆಸಿದರು.
ಆಯಾಯ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಪಡಿತರ ವಿತರಣೆಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಎಚ್ಚರಿಕೆ ವಹಿಸಲು ತಹಶೀಲ್ದಾರ್ ರಶ್ಮಿ ಎಸ್.ಆರ್. ಸೂಚನೆ ನೀಡಿದರು. ವಾರಕ್ಕೊಂದು ಬಾರಿ ಟಾಸ್ಕ್ ಫೋರ್ಸ್ ಸಭೆ ನಡೆಸುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ತಿಳಿಸಿದರು.
ಸರಪಾಡಿ ಗ್ರಾ.ಪಂ. ಸದಸ್ಯ ಎನ್.ಧನಂಜಯ ಶೆಟ್ಟಿ ಅವರು, ಗ್ರಾಮಗಳಿಗೆ ಎಲ್ಲೆಲ್ಲಿಂದಲೋ ಬೋರ್ಡ್ ಹಾಕಿ ತರಕಾರಿ, ಮೀನಿನ ವಾಹನಗಳು ಬರುತ್ತಿವೆ ಎಂದು ತಿಳಿಸಿದರು.
ಸದಸ್ಯ ಬಾಲಕೃಷ್ಣ ಪೂಜಾರಿ ಅವರು, ಪಾಸಿಟಿವ್ ಬಂದವರು, ಪ್ರಾಥಮಿಕ ಸಂಪರ್ಕಿತರು ತಿರುಗಾಡುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.
ಮಣಿನಾಲ್ಕೂರು ಗ್ರಾ.ಪಂ. ಸದಸ್ಯ ಪುರುಷೋತ್ತಮ ಪೂಜಾರಿ ಅವರು, ಅಂಗಡಿ ಮುಂಗಟ್ಟುಗಳ ಮುಂದೆ ಅನಗತ್ಯ ಜನ ಸೇರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲು ತಿಳಿಸಿದರು.
ಉಳಿ ಗ್ರಾ.ಪಂ. ಸದಸ್ಯ ವಸಂತ ಅವರು, ಕ್ವಾರಂಟೈನ್ ವ್ಯವಸ್ಥೆಯನ್ನು ಸಮರ್ಪಕಗೊಳಿಸಲು ಸಲಹೆ ನೀಡಿದರು.
ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಫ್ಲೈಯಿಂಗ್ ಸ್ಕಾಡ್ ಅಧಿಕಾರಿ ಚೆನ್ನಕೇಶವಮೂರ್ತಿ, ಸರಪಾಡಿ ಗ್ರಾ.ಪಂ. ಅಧ್ಯಕ್ಷ ಲೀಲಾವತಿ ಧರ್ಣಪ್ಪ, ಉಪಾಧ್ಯಕ್ಷೆ ನಳಿನಿ, ಅಭಿವೃದ್ಧಿ ಅಧಿಕಾರಿ ಸಿಲ್ವಿಯಾ ಫೆರ್ನಾಂಡೀಸ್, ಮಣಿನಾಲ್ಕೂರು ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ, ಉಪಾಧ್ಯಕ್ಷೆ ಗೀತಾ ಅರಿಪ್ಪಾಡಿ, ಅಭಿವೃದ್ಧಿ ಅಧಿಕಾರಿ ವಸಂತಿ, ಉಳಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಮೈರ, ಉಪಾಧ್ಯಕ್ಷ ಚಿದಾನಂದ ರೈ, ಅಭಿವೃದ್ಧಿ ಅಧಿಕಾರಿ ಶ್ರೀಧರ, ಆಯಾಯ ಗ್ರಾ.ಪಂ.ಸದಸ್ಯರು, ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.