ಬಂಟ್ವಾಳ: ಲಸಿಕೆ ವಿಚಾರದಲ್ಲಿ ಮಾಹಿತಿ ಕೊರತೆಯನ್ನು ನೀಗಿಸಿ ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ಕೋವಿಡ್ ಸಂತ್ರಸ್ತರಿಗೆ ಧೈರ್ಯ ತುಂಬಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಮಾಣಿ ಗ್ರಾಮ ಪಂಚಾಯತ್ ನಲ್ಲಿ ಗುರುವಾರ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.
ಟಾಸ್ಕ್ ಫೋರ್ಸ್ ಸಮಿತಿ ಲಸಿಕೆ ವಿಚಾರ ಹಾಗೂ ಕೋವಿಡ್ ನಿಯಂತ್ರಣಕ್ಕೆ ಪೂರಕವಾಗಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು, ಕೊರೋನಾ ಸಂಪೂರ್ಣ ನಿರ್ಮೂಲನೆಯಾಗುವ ತನಕ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಹೊರ ಜಿಲ್ಲೆಗಳಿಂದ ಬಂದವರು ಕಡ್ಡಾಯವಾಗಿ ಒಂದುವಾರ ಕ್ವಾರಂಟೈನ್ ಗೆ ಒಳಪಡಿಸಬೇಕು ಎಂದರು.
ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್.ಆರ್. ಮಾಹಿತಿ ನೀಡಿ, ಲಸಿಕೆ ಪಡೆದುಕೊಳ್ಳುವವರು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು. ಕೊರತೆ ವಿಚಾರದಲ್ಲಿ ಆತಂಕ ಬೇಡ. ಆದ್ಯತೆ ಆಧಾರದಲ್ಲಿ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ ಎಂದರು.
ತಾ.ಪಂ. ಇ.ಒ. ರಾಜಣ್ಣ ಮಾತನಾಡಿ, ಕೋವಿಡ್ ನಿಯಮಗಳ ಪಾಲನೆ ಹಾಗೂ ಅದರ ನಿರ್ವಹಣೆ ಟಾಸ್ಕ್ ಫೋರ್ಸ್ ಸಮಿತಿಯ ಮುಖ್ಯ ಆಶಯವಾಗಿದ್ದು, ಗ್ರಾಮ ಪಂಚಾಯತ್ ಮಟ್ಟದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜೊತೆಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೇಸರ್, ಕೊಡೆ ವಿತರಣೆಗೆ ಪಂಚಾಯತ್ ಕ್ರಮ ಕೈಗೊಳ್ಳುವಂತೆ ಪಿಡಿಒ ರವರಿಗೆ ಸೂಚಿಸಿದರು.
ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪತ್ತೆಯಾದ 12 ಸಕ್ರೀಯ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಮೂರು ಮಂದಿ ಗುಣಮುಖರಾಗಿದ್ದಾರೆ. 9 ಸಕ್ರೀಯ ಪ್ರಕರಣಗಳು ಇದ್ದು, ಅವರ ಕುರಿತಾಗಿ ಗಮನಹರಿಸಲಾಗುತ್ತಿದೆ ಎಂದು ವೈದ್ಯಾಧಿಕಾರಿ ಡಾ. ಶಶಿಕಲಾ ಮಾಹಿತಿ ನೀಡಿದರು.
ಮಾಣಿ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಉಪಾಧ್ಯಕ್ಷ ಪ್ರೀತಿ ಡಿ.ಕುನ್ಹಾ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್.ಆರ್., ತಾ.ಪಂ. ಇ.ಒ. ರಾಜಣ್ಣ, ಪಿ.ಡಿ.ಒ. ನಾರಾಯಣ ಗಟ್ಟಿ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಗ್ರಾಮ ಕರಣಿಕೆ ಸುರಕ್ಷಾ, ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಶಶಿಕಲಾ, ಶಾಸಕರ ವಾರ್ ರೂಂ ಪ್ರಮುಖರಾದ ದೇವಪ್ಪ ಪೂಜಾರಿ, ಯಶವಂತ ನಾಯ್ಕ್ ,
ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.