ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಅವರು ಮಂಗಳವಾರ ಸಂಜೆ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಗೆ ಹಠಾತ್ ಭೇಟಿ ನೀಡಿ ಕೆಲವೊಂದು ವ್ಯವಸ್ಥೆಗಳ ಕುರಿತು ತಾಲೂಕು ವೈದ್ಯಾಧಿಕಾರಿಯವರಿಂದ ಮಾಹಿತಿ ಪಡೆದರು.
166 ಮಂದಿಗೆ ಲಸಿಕೆ : ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ 18 ವರ್ಷ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಮಂಗಳವಾರ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿದ್ದು, ಒಟ್ಟು 170 ಮಂದಿ ಲಸಿಕೆ ಪಡೆಯಲು ನೊಂದಣಿ ಮಾಡಲಾಗಿದ್ದು,ಈ ಪೈಕಿ 166 ಮಂದಿ ಲಸಿಕೆ ಪಡೆದಿದ್ದಾರೆ ಎಂದು ವೈದ್ಯಾಧಿಕಾರಿ ಡಾ.ಪುಪ್ಪಲತಾ ಅವರು ಶಾಸಕರಿಗೆ ಮಾಹಿತಿ ನೀಡಿದರು.
23 ಮಂದಿ ದಾಖಲು: ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಒಟ್ಟು 23 ಮಂದಿ ಕೋವಿಡ್ ಸೋಂಕಿತ ರೋಗಿಗಳು ದಾಖಲಾಗಿದ್ದು ,ಇವರ ಮಾಹಿತಿ ಪಡೆದ ಶಾಸಕ ರಾಜೇಶ್ ನಾಯಕ್ ಅವರ ಯೋಗಕ್ಷೇಮವನ್ನು ವಿಚಾರಿಸಿದರಲ್ಲದೆ ಅವರಿಗೆ ನೀಡಲಾಗುವ ಊಟೋಪಾಚಾರ,ಔಷಧದ ಕುರಿತು ಮಾಹಿತಿ ಪಡೆದು,ಯಾವುದೇ ರೀತಿಯ ಕೊರತೆಯಾಗದ ರೀತಿಯಲ್ಲಿ ನೋಡಿಕೊಳ್ಳುವಂತೆ ಹಾಗೂ ಅವಶ್ಯವಿದ್ದರೆ ನೇರ ತನ್ನನ್ನು ಸಂಪರ್ಕಿಸುವಂತೆ ಶಾಸಕರು ವೈದ್ಯಾಧಿಕಾರಿಯವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಡಾ. ವೇಣುಗೋಪಾಲ್, ಡಾ. ಕಿಶೋರ್ ಕುಮಾರ್, ಡಾ. ಸೌಮ್ಯ, ಡಾ. ಪಾವನ ಅವರು ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.