ಬಂಟ್ವಾಳ: ಬಂಟ್ವಾಳ ಪುರಸಭಾ ವಿಶೇಷ ಸಭೆಯ ವೇಳೆ ಆಡಳಿತ ಪಕ್ಷದ ಸದಸ್ಯರೋರ್ವರು ಲಸಿಕೆಯ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರಕಾರವನ್ನು ಟೀಕಿಸಿದ ವಿಚಾರ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ಮಧ್ಯೆ ವಾಗ್ವಾದ ನಡೆದು ತಾರಕಕ್ಕೇರಿದ ಘಟನೆ ಇಂದು ನಡೆದಿದೆ.
ಪುರಸಭಾ ಸಭಾಂಗಣದಲ್ಲಿ ಅಧ್ಯಕ್ಷ ಮಹಮ್ಮದ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಈ ವೇಳೆ ಲಿಸಿಕೆಯ ವಿಚಾರ ಚರ್ಚೆಯಾಗುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಅವರು ಮಾತಿನ ಭರದಲ್ಲಿ ರಾಜ್ಯ ಸರಕಾರ ಸತ್ತಿದೆ ಎಂಬ ಪದ ಬಳಕೆ ಮಾಡಿದರು. ಇದು ಪ್ರತಿಪಕ್ಷ ಸದಸ್ಯ ಹರಿಪ್ರಸಾದ್ ಪ್ರತಿಕ್ರಿಯಿಸಿ, ಲಸಿಕೆಯ ಕುರಿತು ಅಪಪ್ರಚಾರ ಮಾಡಿದ ಪರಿಣಾಮ ಆರಂಭದಲ್ಲಿ ಬಹುತೇಕ ಮಂದಿ ಲಸಿಕೆ ಪಡೆಯಲು ಮುಂದೆ ಬಂದಿಲ್ಲ. ಜತೆಗೆ ಹಿರಿಯ ಸದಸ್ಯ ಗೋವಿಂದ ಪ್ರಭು ಧ್ವನಿಗೂಡಿಸಿ, ಸರಕಾರ ಸರಿಯಾಗಿದ್ದು, ಪುರಸಭಾ ಆಡಳಿತ ಸತ್ತಿದೆ ಎಂದರು. ಈ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆದು, ಕುರ್ಚಿ ಬಿಟ್ಟು ಹೊಯ್ ಕೈವರೆಗೂ ಮುಂದುವರಿದು ಬಳಿಕ ಇತರರು ಸಮಾಧಾನ ಪಡಿಸಿದರು.
ಈ ಹಿಂದಿನ ವಿಚಾರಗಳನ್ನು ಬಿಟ್ಟು ಮುಂದಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚಾಗದಂತೆ ಕ್ರಮವಹಿಸಲು ತಹಶೀಲ್ದಾರ್ ರಶ್ಮಿ ಎಸ್. ಆರ್.ಅವರು ಸಲಹೆ ನೀಡಿದರು.
ಮೈಕ್ರೋ ಕಂಟೋನ್ಮೆಂಟ್ ವಲಯ ಗುರುತಿಸುವಲ್ಲಿ ಇಬ್ಬಗೆ ನೀತಿ ಅನುಸರಿಸಲಾಗುತ್ತಿದೆ ಎಂದು ಗೋವಿಂದ ಪ್ರಭು ಆರೋಪಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಮಾತನಾಡಿ, ಮೈಕ್ರೋ ಕಂಟೋನ್ಮೆಂಟ್ ವಲಯಗಳನ್ನು ಪುರಸಭೆಯೇ ಮಾಡಬೇಕಿದ್ದು, ಸೋಂಕಿತರು ತಿರುಗಾಡದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.
ಪುರಸಭಾ ಅಧಿಕಾರಿ ವರ್ಗ ಯಾವುದೇ ರೀತಿಯ ಸ್ಪಂದನೆ ನೀಡುತ್ತಿಲ್ಲ ಎಂದು ಸದಸ್ಯ ಗಂಗಾಧರ ಪೂಜಾರಿ ಸೇರಿದಂತೆ ಇತರ ಸದಸ್ಯರು ಆರೋಪಿಸಿದರೂ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಸೇರಿದಂತೆ ಇತರ ಯಾರೂ ಕೂಡ ಚಕಾರವೆತ್ತಿಲ್ಲ.
ಪುರಸಭೆಯಲ್ಲಿ ವಾರ್ ರೂಮ್ ತೆರೆಯುವ ಕುರಿತು ಪುರಸಭಾಧ್ಯಕ್ಷರು ಪ್ರಕಟಿಸಿದರು. ಜತೆಗೆ ತುರ್ತು ಅವಶ್ಯಕತೆಗೆ ಅನುದಾನ ಮೀಸಲಿರಿಸುವ ಕುರಿತು ಅಧ್ಯಕ್ಷರು ತಿಳಿಸಿದರು.
ಕೊರೊನಾ ಸಂಬಂಧಿಸಿ ಸಭೆಯನ್ನು ವಿಳಂಬವಾಗಿ ಕರೆದಿರುವ ಕುರಿತು ಸದಸ್ಯ ಮುನೀಶ್ ಆಲಿ ಅವರು ಆರೋಪಿಸಿದರು. ಆರೋಗ್ಯ ನಿರೀಕ್ಷಕರ ವಿರುದ್ಧ ಸದಸ್ಯ ಜನಾರ್ದನ ಚಂಡ್ತಿಮಾರ್ ಹರಿಹಾಯ್ದರು.
ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ನೋಡೆಲ್ ಅಧಿಕಾರಿ ಜ್ಞಾನೇಶ್ ಎಂ.ಪಿ. ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.