ಬಂಟ್ವಾಳ: ಇಲ್ಲಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 75 ಲಕ್ಷ ಗಳ ಹಿಂದೆ ನಿರ್ಮಾಣ ಗೊಂಡ ರಾಯಿ-ಕೈತ್ರೋಡಿ ಗ್ರಾಮೀಣ ರಸ್ತೆಗೆ ರೂ ೩೦ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣ ಕಾಮಗಾರಿ ಸೋಮವಾರ ಆರಂಭಗೊಂಡಿದೆ. ಈ ಹಿಂದೆ ಸ್ಥಳೀಯ ನಿವಾಸಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದಿವಂಗತ ಕೆ.ಸಂತೋಷ್ ಕುಮಾರ್ ಭಂಡಾರಿ ಸಹಿತ ಮಾಜಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು ಇವರ ಪ್ರತ್ಯೇಕ ಅನುದಾನದಲ್ಲಿ ಮೂರು ಬಾರಿ ಡಾಂಬರೀಕರಣ ಮತ್ತು ತೇಪೆ ಡಾಂಬರೀಕರಣ ಕಾಮಗಾರಿ ನಡೆದಿದೆ. ಉಳಿದಂತೆ ಭಾರೀ ತಿರುವು ಮತ್ತು ಕಿರಿದಾದ ಈ ರಸ್ತೆಯ ಬಹುತೇಕ ಕಡೆಗಳಲ್ಲಿ ಹೊಂಡಗಳೇ ತುಂಬಿಕೊಂಡು ಜೆಲ್ಲಿ ರಸ್ತೆಯುದ್ದಕ್ಕೂ ಹರಡಿಕೊಂಡಿತ್ತು. ಸುಮಾರು ೨.೫ ಕಿ.ಮೀ. ಉದ್ದದ ಈ ರಸ್ತೆಯನ್ನು ಪಂಜಿಕಲ್ಲು ಗ್ರಾಮ ಸಂಪಕರ್ಿಸುವ ಪುಂಚೋಡಿ ತನಕ ವಿಸ್ತರಿಸಲು ‘ಗ್ರಾಮ ಸಡಕ್’ ಅಥವಾ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಕಾಂಕ್ರಿಟೀಕರಣಗೊಳಿಸಬೇಕು ಎಂಬ ಬೇಡಿಕೆ ಕಳೆದ 10 ವರ್ಷಗಳಿಂದಲೂ ಕೇಳಿ ಬರುತ್ತಿದೆ.
ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಇದೇ ರಸ್ತೆಯಲ್ಲಿ ಪಾದಯಾತ್ರೆ ನಡೆಸಿದ್ದ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಮತ್ತು ಬೂಡ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಇವರಿಗೆ ಈ ರಸ್ತೆ ದುಸ್ಥಿತಿ ಬಗ್ಗೆ ಸ್ಥಳೀಯ ನಾಗರಿಕರು ಗಮನ ಸೆಳೆದಿದ್ದರು. ಇದೀಗ ಸಂಪರ‍್ಣ ಹದಗೆಟ್ಟ ರಸ್ತೆಗೆ ಶಾಸಕರು ಮಂಜೂರುಗೊಳಿಸಿದ ರೂ ೩೦ಲಕ್ಷ ವೆಚ್ಚದಲ್ಲಿ ರಾಯಿ-ಕೈತ್ರೋಡಿ ತನಕ ಕಾಂಕ್ರಿಟೀಕರಣ ಕಾಮಗಾರಿ ಆರಂಭಗೊಂಡಿರುವುದು ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಅನುದಾನ ಒದಗಿಸಿ,ಪಂಜಿಕಲ್ಲು ಗ್ರಾಮ ಸಂಪಕರ್ಿಸುವ ಪುಂಚೋಡಿ ತನಕ ಕಾಂಕ್ರಿಟೀಕರಣ ಕಾಮಗಾರಿ ಮುಂದುವರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪ್ರಸಕ್ತ ರಸ್ತೆ ವಿಸ್ತರಣೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಮತ್ತೆ ಮುಂದುವರಿಕಾ ರಸ್ತೆಗೆ ಕಾಂಕ್ರಿಟೀಕರಣಗೊಳಿಸಲು ಶಾಸಕರ ಗಮನ ಸೆಳೆಯುವುದಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಮತ್ತು ಸದಸ್ಯ ಸಂತೋಷ್ ಕುಮಾರ್ ಬೆಟ್ಟು ಪ್ರತಿಕ್ರಿಯಿಸಿದ್ದಾರೆ.