ಬಂಟ್ವಾಳ: ರಮಝಾನ್ ತಿಂಗಳ ಕೊನೆಯಲ್ಲಿ ನೀಡುವ ಫಿತ್ರ್ ಝಕಾತ್ (ಕಡ್ಡಾಯ ದಾನ) ಈ ಬಾರಿ ಹೇಗೆ ವಿತರಿಸಬಹುದು ಎಂಬ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ.
ರಮಝಾನ್ ತಿಂಗಳ ಕೊನೆಯ ದಿನ ರಾತ್ರಿ ಚಂದ್ರ ದರ್ಶನವಾಗಿ ಈದ್ ದಿನದ ಬೆಳಗ್ಗೆ ವಿಶೇಷ ಪ್ರಾರ್ಥನೆಗೆ ತೆರಳುವ ಮೊದಲು ಅರ್ಹರಿಗೆ ನೀಡಿ ಮುಗಿಸಬೇಕಾದ ಫಿತ್ರ್ ಝಕಾತ್ ಅನ್ನು ಈ ಬಾರಿ ಲಾಕ್ ಡೌನ್ ಜಾರಿಯಲ್ಲಿ ಇರುವುದರಿಂದ ಹೇಗೆ ನೀಡಬೇಕೆಂಬ ಸಂಶಯ ಮುಸ್ಲಿಮರಲ್ಲಿ ಇತ್ತು.
ಈ ಬಗ್ಗೆ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು, ಲಾಕ್ ಡೌನ್ ಸಂದರ್ಭದಲ್ಲಿ ಫಿತ್ರ್ ಝಕಾತ್ ನೀಡುವ ನಿಯಮಗಳ ಬಗ್ಗೆ ಪ್ರಕಟನೆಯನ್ನು ಹೊರಡಿಸಿದ್ದಾರೆ.
1) ಫಿತ್ರ್ ಝಕಾತ್ ಅನ್ನು ರಮಝಾನ್ ತಿಂಗಳ ಪ್ರಾರಂಭದಿಂದಲೇ ನೀಡಬಹುದು. ಆದರೆ ಝಕಾತ್ ಸ್ವೀಕರಿಸಿದವನು ಹಬ್ಬದ ದಿನದ ವರೆಗೆ ಜೀವಂತವಾಗಿರಬೇಕು. ಹಾಗಾದರೆ ಮಾತ್ರ ಝಕಾತ್ ಸ್ವೀಕಾರಾರ್ಹವಾಗುತ್ತದೆ.
2) ಫಿತ್ರ್ ಝಕಾತ್ ಅನ್ನು ನೀಡಲು ಹಾಗೂ ಪಡೆಯಲು ತೊಡಕಾಗುವ ಲಾಕ್ ಡೌನ್ ಇರುವುದರಿಂದ ಫಿತ್ರ್ ಝಕಾತ್ ಅನ್ನು ವಿತರಿಸಲು ಶರೀಅತ್ ಗೆ ವಿರುದ್ಧವಾಗದಂತೆ ಝಕಾತ್ ನ ಸಾಮಗ್ರಿಗಳನ್ನು ಅರ್ಹರಿಗೆ ತಲುಪಿಸುವ ವ್ಯವಸ್ಥೆಗಾಗಿ ಜಮಾಅತ್ ಸಮಿತಿಗಳು ರೂಪಿಸಬಹುದು.
3) ಮೇಲೆ ವಿವರಿಸಿದ ರೀತಿಯಲ್ಲಿ ವಿತರಿಸಲು ಸಾಧ್ಯವಾಗದಿದ್ದರೆ “ಫಿತ್ರ್ ಝಕಾತ್ ಅನ್ನು ಅದರ ಸಮಯಕ್ಕೆ ಮನೆಗೆ ಜನರು ಬಂದರೆ ನೀಡುವೆನು” ಎಂಬ ನಿಯ್ಯತ್ (ಸಂಕಲ್ಪ) ನೊಂದಿಗೆ ಝಕಾತ್ ನ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಇರಿಸಬೇಕು ಎಂದು ಖಾಝಿಯವರ ಪ್ರಕಟನೆ ತಿಳಿಸಿದೆ.