ಬಂಟ್ವಾಳ: ಲಾಕ್ ಡೌನ್ ನಡುವೆಯೂ ತಾಲೂಕಿನ ನೈನಾಡು ಸ್ನೇಹಗಿರಿ ಎಂಬಲ್ಲಿರುವ ಸರಕಾರಿ ಗೇರು ಮರದ ಹಾಡಿಯಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿರುವ ಪುಂಜಾಲಕಟ್ಟೆ ಠಾಣಾ ಪೊಲೀಸರು 11 ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಪುಂಜಾಲಕಟ್ಟೆ ಪೊಲೀಸ್ ಠಾಣಾ ಎಸ್ಸೈ ಸೌಮ್ಯ ಜೆ. ಅವರು ಸಿಬ್ಬಂದಿಯೊಂದಿಗೆ ಕೋವಿಡ್ – 19 ರೋಗದ ಮುನ್ನೆಚ್ಚರಿಕಾ ಕ್ರಮವಾಗಿ ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಲಭಿಸಿದ ಮಾಹಿತಿಯಂತೆ ಕೋಳಿ ಅಂಕಕ್ಕೆ ದಾಳಿ ನಡೆಸಿದ್ದಾರೆ.
ದಾಳಿ ವೇಳೆ 11 ಮಂದಿ ಆರೋಪಿಗಳನ್ನು ಬಂಧಿಸಿದ್ದು ಕೆಲವು ಆರೋಪಿಗಳು ಓಡಿ ತಪ್ಪಿಸಿಕೊಂಡಿರುತ್ತಾರೆ. ಆರೋಪಿಗಳು ಸರಕಾರದ ಕೋವಿಡ್ – 19 ರೋಗ ನಿಯಂತ್ರಣದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಗುಂಪುಗೂಡಿಕೊಂಡು ಕಾನೂನು ಬಾಹಿರವಾದ ಕೋಳಿ ಅಂಕದಲ್ಲಿ ತೊಡಗಿದ್ದ ಬಗ್ಗೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.