ಬಂಟ್ವಾಳ: ರಮಝಾನ್ ತಿಂಗಳು ಅಂತ್ಯಗೊಂಡು ಬುಧವಾರ ಸಂಜೆ ಶವ್ವಾಲ್ ತಿಂಗಳ ಮೂದಲ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳ ಮುಸ್ಲಿಮರು ಗುರುವಾರ ಈದುಲ್ ಫಿತ್ರ್ ಅನ್ನು ಸರಳವಾಗಿ ಆಚರಿಸಿದರು.
ಕೊರೋನ ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಮಸೀದಿಗಳು ಹಾಗೂ ಈದ್ಗಾ ಮೈದಾನಗಳು ಬಂದ್ ಆಗಿದ್ದು ಹೀಗಾಗಿ ಹಬ್ಬದ ಪ್ರಯುಕ್ತ ನಡೆಯಬೇಕಿದ್ದ ಸಾಮೂಹಿಕ ವಿಶೇಷ ಪ್ರಾರ್ಥನೆಗಳು ನಡೆದಿಲ್ಲ.
ಇನ್ನು ಹಬ್ಬದ ದಿನ ಮುಸ್ಲಿಮರು ಪರಸ್ಪರ ಆಲಂಗಿಸಿ ಶುಭಾಶಯ ವಿನಿಮಯ ಮಾಡುವುದು, ವಿಶೇಷ ಭೋಜನ ಕೂಟ ಏರ್ಪಡಿಸುವುದು, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಭೇಟಿ ನೀಡುವುದು, ಅಗಲಿದ ಕುಟುಂಬ ಸದಸ್ಯರ ಗೋರಿಯನ್ನು ಸಂದರ್ಶಿಸುವುದು ಸಹಿತ ಮೊದಲಾದ ಯಾವುದೇ ಆಚರಣೆಗಳು ಇಲ್ಲದೆ ಮುಸ್ಲಿಮರು ಸರಳವಾಗಿ ಈದ್ ಆಚರಣೆ ಮಾಡಿದರು.
ಮುಸ್ಲಿಮ್ ಬಾಂಧವರಿಗೆ ಹಲವು ಗಣ್ಯರು ಶುಭಾಶಯ ಹೇಳಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ ನಾಡಿನ ಎಲ್ಲ ಮುಸ್ಲಿಮ್ ಬಾಂಧವರಿಗೆ ಹಬ್ಬದ ಶುಭಾಶಯ ಹೇಳಿದ್ದು, ಪವಿತ್ರ ಈದುಲ್ ಫಿತ್ರ್ ಸಾರುವ ಸ್ನೇಹ ಮತ್ತು ಭಾತೃತ್ವದ ಸಂದೇಶವನ್ನು ನಾವೆಲ್ಲರೂ ಅರಿತು ಜೀವನದಲ್ಲಿ ಅಳವಡಿಸಿಕೊಂಡು ಪ್ರೀತಿ ವಿಶ್ವಾಸದೊಂದಿಗೆ ಬಾಳೋಣ. ಪವಿತ್ರ ರಮಝಾನ್ ಒಂದು ತಿಂಗಳ ಕಠಿಣ ಉಪವಾಸ ವ್ರತ ಮುಗಿಸಿ ಗುರುವಾರ ಈದುಲ್ ಫಿತ್ರ್ ಆಚರಿಸುವ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶಾಂತಿ, ಸುಖ, ಸಂತೋಷ, ನೆಮ್ಮದಿ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ದೇವನು ಕರುಣಿಸಲಿ. ಸಮಾಜವನ್ನು ಭಾದಿಸಿರುವ ಕೋವಿಡ್-19 ನಿಂದ ನಾವೆಲ್ಲರೂ ಆದಷ್ಟು ಬೇಗ ಮುಕ್ತರಾಗೋಣ. ಮನೆಯಲ್ಲಿ ಸುರಕ್ಷಿತವಾಗಿದ್ದು ಕುಟುಂಬದೊಂದಿದೆ ಹಬ್ಬವನ್ನು ಆಚರಿಸಿ ಎಂದು ಶುಭ ನುಡಿದಿದ್ದಾರೆ.
ಹಾಗೆಯೇ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಈದ್ ಶುಭಾಶಯ ಹೇಳಿದ್ದಾರೆ.