Wednesday, October 18, 2023

ಧರ್ಮಸ್ಥಳ ಗ್ರಾಮಾಭಿವೃದ್ಧಿ ಗ್ರಾಹಕ ಸೇವಾ ಕೇಂದ್ರ 2 ವಾರ ಸ್ಥಗಿತ

Must read

ಧರ್ಮಸ್ಥಳ: ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. ಅಗತ್ಯ ಸಾಮಾಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದು ಜನರು ಹೊರಗಡೆ ಬಾರದಂತೆ ಸೂಚನೆ ನೀಡಿದೆ. ಈ ವಿಷಯವನ್ನು ಗಮನದಲ್ಲಿರಿಸಿಕೊಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತನ್ನ ಗ್ರಾಹಕ ಸೇವಾ ಕೇಂದ್ರಗಳನ್ನು ಸ್ಥಗಿತ ಮಾಡಲು ನಿರ್ಧರಿಸಿದ್ದು, ಸ್ವಸಹಾಯ ಸಂಘಗಳ ಸದಸ್ಯರ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದೆ.

ಸ್ವಸಹಾಯ ಸಂಘಗಳ ಸದಸ್ಯರ ಆರೋಗ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಮೇ 3ರಿಂದ ಮೇ 15ರವರೆಗೆ ಯೋಜನೆಯ ಎಲ್ಲ ಸ್ವಸಹಾಯ ಸಂಘಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದ್ದು ಮೇ 2ರಂದು ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಣದಲ್ಲಿ ಸಹಕಾರಿಸುವ ಸದುದ್ದೇಶದಿಂದ ಯೋಜನೆಯ ಗ್ರಾಹಕ ಸೇವಾ ಕೇಂದ್ರಗಳಿಗೆ ಕಾರ್ಯನಿರ್ವಹಿಸದಂತೆ ಸೂಚಿಸಿದ್ದು ಸ್ವಸಹಾಯ ಸಂಘಗಳ ಸದಸ್ಯರು ಹಣ ಸಂಗ್ರಹಣೆಗೆ ತೆರಳದಂತೆ ಹಾಗೂ ಗ್ರಾಹಕರು ತಮ್ಮ ಸಾಲದ ಕಂತುಗಳನ್ನು ಹಿಂದಿರುಗಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಹೇಳಲಾಗಿದೆ.

ಇನ್ನು ಈ ಕುರಿತು ಆದೇಶ ಪ್ರತಿಯನ್ನು ಹೊರಡಿಸಿದ್ದು ಮುಂದುವರಿದ ವಾರದ ಕಂತುಗಳನ್ನು ಕಟ್ಟುವ ಬಗ್ಗೆ ಸದ್ಯದಲ್ಲಿಯೇ ಪ್ರತ್ಯೇಕ ಸುತ್ತೋಲೆಯನ್ನು ಹೊರಡಿಸಲಾಗುವುದು ಎಂದು ಹೇಳಲಾಗಿದೆ.

ಸೋಂಕು ನಿಯಂತ್ರಣಿಸುವಲ್ಲಿ ಕೈ ಜೋಡಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಂಡ ಕೋವಿಡ್ ಪೀಡಿತರಿಗೆ ಸಹಾಯ ಹಸ್ತ ನೀಡಲು ಮುಂದಾಗಿದ್ದು ರಾಜ್ಯದ ಎಲ್ಲ ತಾಲೂಕುಗಳಲ್ಲಿನ (ಬೆಂಗಳೂರು ನಗರವನ್ನು ಹೊರತುಪಡಿಸಿ) ಕೋವಿಡ್ ಪೀಡಿತರಿಗೆ ಉಚಿತ ಸಂಚಾರಿ ವಾಹನ ವ್ಯವಸ್ಥೆಯನ್ನು ಕಲ್ಪಿಸುವ ಯೋಜನೆ ಹಾಕಿಕೊಂಡಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಆದೇಶದ ಮೇರೆಗೆ ಯೋಜನೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ತಲಾ 2ರಂತೆ ರಾಜ್ಯದಾದ್ಯಂತ ಒಟ್ಟು 350 ವಾಹನಗಳ ವ್ಯವಸ್ಥೆ ಮಾಡಿದ್ದು ಮೇ 4ರಿಂದವೇ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ.

ಇನ್ನು ಮುಂದಿನ 2 ವಾರಗಳ ಕಾಲ ವಾಹನ ವ್ಯವಸ್ಥೆ ಲಭ್ಯವಿರಲಿದ್ದು ಗ್ರಾಮೀಣ ಪ್ರದೇಶದಲ್ಲಿನ ಸೋಂಕು ಪೀಡಿತರಿಗೆ ತುರ್ತು ವಾಹನ ಸೌಲಭ್ಯ ಒಸಗಿಸಲಿದ್ದು ಆಸ್ಪತ್ರೆಗೆ ತೆರಳಲು ಅಥವಾ ಆಸ್ಪತ್ರೆಯಿಂದ ಹಿಂದಿರುಗಲು ಈ ವಾಹನ ಲಭ್ಯವಿರುತ್ತವೆ.

ಪ್ರಮುಖವಾಗಿ ಸಾಮನ್ಯ ವರ್ಗದವರನ್ನು ಗಮನದಲ್ಲಿರಿಸಿಕೊಂಡು ಈ ಯೋಜನೆಯನ್ನು ಪ್ರಾರಂಭಿಸಲಾಗಿದ್ದು ವಾಹನ ಸೌಲಭ್ಯವನ್ನು ಪಡೆದುಕೊಳ್ಳಲು ಇಚ್ಛಿಸುವವರು ಆಯಾ ತಾಲೂಕಿನ ಯೋಜನಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ.

ಇನ್ನು ಈ ಸೌಲಭ್ಯವು ಉಚಿತವಾಗಿದ್ದು ಆಕಸ್ಮಾತ್ ಕರೆ ಬರುವ ಸಮಯದಲ್ಲಿ ವಾಹನವು ಬೇರೆ ರೋಗಿಗಳ ಸೇವೆಯಲ್ಲಿ ತೊಡಗಿದ್ದರೆ ಆದ್ಯತೆಯ ನೆಲೆಯಲ್ಲಿ ಮೊದಲು ಕರೆ ಬಂದವರಿಗೆ ಮೊದಲ ಸೇವೆ ಲಭ್ಯವಿರುತ್ತದೆ.

ಈ ವ್ಯವಸ್ಥೆಯು ರೋಗಿಯ ಪ್ರಯಾಣಕ್ಕೆ ಲಭ್ಯವಿದೆಯೇ ಹೊರತು ಇದರಲ್ಲಿ ಆಂಬ್ಯುಲೆನ್ಸ್ ಸೌಲಭ್ಯವಿರುವುದಿಲ್ಲ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಸಾಮಾಜಿಕ ಕೆಲಸಗಳಿಂದಲ್ಲೇ ಗುರುತಿಸಿಕೊಂಡಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೋವಿಡ್ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ತನ್ನ ವೃತ್ತಿಪರತೆಯನ್ನು ಉಳಿಸಿಕೊಂಡಿದೆ. ಇದೀಗ ಪೂಜ್ಯ ಖಾವಂದರ ಮಾರ್ಗ ದರ್ಶನದಂತೆ ಎಲ್ಲ ಗ್ರಾಮಗಳಲ್ಲಿರುವ ಗ್ರಾಹಕ ಸೇವಾ ಕೇಂದ್ರಗಳನ್ನು ಲಸಿಕೆ ಕೇಂದ್ರಗಳಾಗಿ ಮಾರ್ಪಾಡು ಮಾಡಲಾಗಿದ್ದು, ಗ್ರಾಮೀಣ ಮಟ್ಟದಲ್ಲಿ ಪ್ರತಿಯೋರ್ವರಿಗೂ ಲಸಿಕೆ ನೀಡಬೇಕೆಂಬ ಉದ್ಧೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೇ ಈ ಸಂಬಂಧ ಸರಕಾರಕ್ಕೆ ಪತ್ರ ಬರೆಯಲಾಗಿದ್ದು, ಪ್ರತಿಯೊಂದು ಗ್ರಾಮದಲ್ಲಿ ಲಸಿಕೆ ನೀಡಲು ಬೇಕಾದ ವ್ಯವಸ್ಥೆ ಮಾಡಲು ಹಾಗೂ ಕಾರ್ಯನಿರ್ವಹಿಸಲು ಸ್ವಯಂ ಸೇವಕರನ್ನು ಒದಗಿಸುವುದಾಗಿ ಯೋಜನೆಯು ಸರಕಾರಕ್ಕೆ ಸೂಚಿಸಿದೆ. ರಾಜ್ಯದಲ್ಲಿ ಲಸಿಕೆಗಳು ಲಭ್ಯವಾದೊಡನೆ ಗ್ರಾಮೀಣ ಪ್ರದೇಶಗಳಿಗೆ ಅದನ್ನು ಸಾಗಿಸಲು ಬೇಕಾದ ವಾಹನದ ವ್ಯವಸ್ಥೆಯನ್ನೂ ಮಾಡಲು ಯೋಜನೆಯು ಸಿದ್ಧವಿದ್ದು, ಕೊರೊನಾ ರೋಗದ ವಿರುದ್ಧ ಹೋರಾಟದಲ್ಲಿ ಯೋಜನೆಯು ಸರ್ಕಾರ ಹಾಗೂ ಇತರ ಸಂಘ ಸಂಸ್ಥೆಗಳ ಜೊತೆಯೊಂದಿಗೆ ಸೇರಿ ಕಾರ್ಯನಿರ್ವಹಿಸುವಲ್ಲಿ ಸದಾ ಸಿದ್ಧವಿರುತ್ತದೆ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ತಿಳಿಸಿದ್ದಾರೆ.

More articles

Latest article