ಬಂಟ್ವಾಳ: ಕೋವಿಡ್-19 ಎರಡನೇ ಅಲೆಯ ಲಾಕ್‌ಡೌನ್ ಕಾರಣದಿಂದ ಸಂಕಷ್ಟಕ್ಕೀಡಾದ ಗ್ರಾಮೀಣ ವರದಿಗಾರರಿಗೆ ಮತ್ತು ಪತ್ರಕರ್ತರಿಗೂ ಆರ್ಥಿಕ ಪರಿಹಾರ ಒದಗಿಸಬೇಕಾಗಿ ದ.ಕ. ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ವಿನಂತಿಸಿದ್ದಾರೆ.
ಕೊರೊನಾ ಮಾಹಾಮಾರಿಯ ವಿರುದ್ಧದ ಹೋರಾಟದಲ್ಲಿ ಗ್ರಾಮೀಣ ವರದಿಗಾರರ ಪಾಲೂ ಇದೆ.ಅವರು ಕೊರೊನಾ ಸೋಂಕಿಗೆ ಒಳಗಾಗುವ ಭೀತಿ ಇದ್ದರೂ ಹಳ್ಳಿ ಪ್ರದೇಶದಲ್ಲಿ ವರದಿಗಾರಿಕೆ ನಡೆಸುತ್ತಿದ್ದಾರೆ.ಅರೆಕಾಲಿಕ ಉದ್ಯೋಗಿಗಳಾಗಿರುವ ಗ್ರಾಮೀಣ ವರದಿಗಾರರು ಆರ್ಥಿಕವಾಗಿ ದುರ್ಬಲರಾಗಿದ್ದು, ಅವರಿಗೂ ಇತರ ಸಮುದಾಯಗಳಿಗೆ ಆರ್ಥಿಕ ಪರಿಹಾರ ಘೋಷಿಸಿರುವಂತೆ ಪರಿಹಾರ ಒದಗಿಸಬೇಕು. ಈ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಲ್ಲಿಯೂ ಮನವಿ ಮಾಡಿರುವುದಾಗಿ ತುಂಗಪ್ಪ ಬಂಗೇರ ಅವರು ತಿಳಿಸಿದ್ದಾರೆ.