ಬಂಟ್ವಾಳ: ಪ್ರಧಾನಿ ಮೋದಿಯವರ ಅಧಿಕಾರದ 7 ನೇ ವರ್ಷದ ಸಂಭ್ರಾಮಾಚರಣೆಯ ಸೇವಾ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷವಾಗಿ ” ಬಿಜೆಪಿ ಕ್ಷೇಮ ನಿಧಿ” ಯೋಜನೆಗೆ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಚಾಲನೆ ನೀಡಿದರು.
ಶಾಸಕರ ವೈಯಕ್ತಿಕ 10 ಲಕ್ಷ ಹಾಗೂ ಬಿಜೆಪಿ ಪಕ್ಷದ ಪ್ರಮುಖರಿಂದ ಸೇವಾ ರೂಪದ ವತಿಯಿಂದ ಪಡೆದುಕೊಂಡು ಒಟ್ಟು 25 ಲಕ್ಷರೂಗಳ ” ಚೆಕ್ ನ್ನು ಬಂಟ್ವಾಳ ಅಧ್ಯಕ್ಷ ದೇವಪ್ಪ ಪೂಜಾರಿ ಅವರಲ್ಲಿ ನೀಡುವ ಮೂಲಕ ” ಬಿಜೆಪಿ ಕ್ಷೇಮ ನಿಧಿ” ಯೋಜನೆಗೆ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ಚಾಲನೆ ನೀಡಲಾಗಿದೆ.
ಬಳಿಕ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು ಅವರು ಕೊರೊನಾ ಕಾಲದಲ್ಲಿ ಜನರಿಗೆ ಧೈರ್ಯ , ವಿಶ್ವಾಸ ತುಂಬಬೇಕಾಗಿದ್ದ ಕಾಂಗ್ರೇಸ್ ತನ್ನ ಡೋಂಗಿ ರಾಜಕಾರಣದ ಮೂಲಕ ಹಾದಿ ತಪ್ಪಿಸುವ ಕೆಲಸ ಮಾಡಿದೆ ಎಂದು ಆರೋಪ ವ್ಯಕ್ತಪಡಿಸಿದರು.
ಕೊರೊನಾ ಲಸಿಕೆ ಬಂದಾಗ ಅಪಪ್ರಚಾರ ಮಾಡಿದ್ದ ಕಾಂಗ್ರೇಸ್ ನ ಸಿದ್ದರಾಮಯ್ಯ ಲಸಿಕೆ ಬಂದಾಗ ಆರಂಭದಲ್ಲಿಯೇ ಪಡೆದಿದ್ದಾರೆ, ಆದರೆ ಜನರ ಕತ್ತಲಲ್ಲಿರಿಸಿದ್ದಾರೆ, ಆದರೆ ಎಲ್ಲಾ ಅಪಪ್ರಚಾರಗಳ ನಡುವೆ ದೇಶದಲ್ಲಿ 20 ಕೋಟಿ ಜನರಿಗೆ ಉಚಿತವಾಗಿ ಲಸಿಕೆ ನೀಡಿದ್ದರೆ ಅದು ಬಿಜೆಪಿ ನೇತೃತ್ವದ ಮೋದಿಯವರ ಆಡಳಿತ ಎಂಬ ಸಂತೋಷ ನಮಗಿದೆ.
ಕಳೆದ 70 ವರ್ಷಗಳಲ್ಲಿ ಗಾಂಧಿ ಕುಟುಂಬಕ್ಕೆ ಅಡ್ಡ ಬೀಳುವುದು ಬಿಟ್ಟು ಏನು ಮಾಡಿದ್ದೀರಿ ಎಂದು ಆರೋಪ ವ್ಯಕ್ತಪಡಿಸಿದರು. ಅಷ್ಟು ವರ್ಷಗಳ ಲ್ಲಿ ಆಗದ ಕೆಲಸ ಕೇವಲ ಏಳು ವರ್ಷಗಳಲ್ಲಿ ಆಗಿದೆ, ಮೋದಿ ಸರಕಾರ ಬಂದ ಬಳಿಕ ಶಿಕ್ಷಣ , ಆರೋಗ್ಯ, ಕೇತ್ರದಲ್ಲಿ ಮಹತ್ತರ ವಾದ ಸುಧಾರಣೆ ಕಂಡಿದೆ ಎಂದರು.
ನಿರಂತರವಾಗಿ ಏಳು ವರ್ಷಗಳ ಕಾಲ ಆಡಳಿತ ಮಾಡಿ ಭಾರತವನ್ನು ಜಗತ್ತಿನ ಎತ್ತರಕ್ಕೆ ಬೆಳೆಯುವಂತೆ ಮಾಡಿದ ಏಕೈಕ ಪ್ರಧಾನಿ ಅದು ನರೇಂದ್ರ ಮೋದಿಯವರು ಎಂದು ಅವರು ತಿಳಿಸಿದರು.
ಜಗತ್ತಿಗೆ ಮಾಸ್ಕ್ ಕಿಟ್ ಗಳನ್ನು ಆರಂಭದಲ್ಲಿ ನೀಡಿ ಕೊರೊನಾ ನಿಯಂತ್ರಣ ಮಾಡಿದ ಪ್ರಧಾನಿ ಇದ್ದರೆ ಭಾರತದ ಪ್ರಧಾನಿ ಮೋದಿಯವರು.
ದ.ಕ.ಜಿಲ್ಲೆಯ ಎಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ಬೆಡ್ ಗಳ ಸುಸಜ್ಜಿತ ವಾದ ವ್ಯವಸ್ಥೆ ಆಗಿದ್ದರೆ ಪ್ರಧಾನಿ ಮೋದಿಯವರ ಆಡಳಿತದಲ್ಲಿ ಎಂದು ಹೇಳಲು ಹೆಮ್ಮೆ ಪಡುತ್ತೇವೆ .
ಕಾಂಗ್ರೆಸ್ ಆಡಳಿತ ದ ಸಂದರ್ಭದಲ್ಲಿ ಬಂದಿರುವ ರೋಗಗಳಿಗೆ ಚಿಕಿತ್ಸೆ ಕಂಡುಹಿಡಿಯಲು ಸಾಧ್ಯವಾಗದ ಸರಕಾರ ಬಿಜೆಪಿ ವಿರುದ್ದ ಟೀಕೆ ಮಾಡುತ್ತಿದ್ದಾರೆ.
ಕೊರೊನಾ ರೋಗ ಬಂದು ಕೆಲವೇ ದಿನಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಲಸಿಕೆ ತಯಾರು ಮಾಡಿದ ಹೆಗ್ಗಳಿಕೆ ಮೋದಿ ಸರಕಾರಕ್ಕಿದೆ ಎಂದರು.
ಕೊರೊನಾ ಮಧ್ಯೆಯೂ ಭಾರತ ಉಳಿದಿದ್ದರೆ ಮೋದಿಯವರ ಆಡಳಿತದಿಂದ ಮಾತ್ರ ಸಾಧ್ಯ ಎಂದರು.
ಬಂಟ್ವಾಳ ದಲ್ಲಿ ಗೂಂಡಾಗಿರಿ, ಭ್ರಷ್ಟಾಚಾರಗಳು, ಅಕ್ರಮ ಅವ್ಯಾವಹಾರಗಳು ನಿಂತಿದ್ದರೆ ಅದು ಬಂಟ್ವಾಳ ಶಾಸಕ ರ ರಾಜಧರ್ಮದ ಆಡಳಿತದಿಂದ ಸಾಧ್ಯ ವಾಯಿತು ಎಂದು ಅವರು ಹೇಳಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ ಕೋವಿಡ್ ಸೊಂಕಿನಿಂದ ಪೋಷಕರು ಮೃತಪಟ್ಟ ಬಡ ಕುಟುಂಬ ಗಳ ಮಕ್ಕಳ ನ್ನು ಗುರುತಿಸಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಪೋಷಣೆಯ ಜವಬ್ದಾರಿಯಿಂದ ಬಿಜೆಪಿ ಕ್ಷೇಮ ನಿಧಿ ಯೋಜನೆಗೆ ಚಾಲನೆ ಮಾಡಲಾಗಿದೆ.
ಜನಪ್ರತಿನಿಧಿಗಳು ಮತ್ತು ಜವಬ್ದಾರಿಯುತ ಸ್ಥಾನದಲ್ಲಿರುವ ಸಂದರ್ಭದಲ್ಲಿ ಟೀಕೆ ಟಿಪ್ಪಣಿ ಗಳು ಬರುವುದು ಸಹಜ, ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಜನರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಿ, ಎಂದು ಅವರು ತಿಳಿಸಿದರು.
ಬಿಜೆಪಿ ಕ್ಷೇಮ ನಿಧಿ ಯೋಜನೆ ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಅವರು ತಿಳಿಸಿದರು. ಕೊರೊನಾ ಕಷ್ಟದ ಕಾಲದಲ್ಲಿ ಜನರ ಸೇವೆ ಮಾಡಲು ನಾನು ಶಾಸಕನಾಗಿ ಆಯ್ಕೆ ಆಗಿರುವುದು ಬಹಳಷ್ಟು ಸಂತಸ ತಂದಿದೆ.
ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಮಾತನಾಡಿ ವಿಶಿಷ್ಟ ವಾದ ಕಾರ್ಯಕ್ರಮಗಳ ಮೂಲಕ ಈ ಭಾಗದ ಬಡ ಮಕ್ಕಳ ಕಣ್ಣಿರು ಒರೆಸುವ ಕೆಲಸ ಮಾಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.
ಸಂಘಟನೆಯ ಜೊತೆಯಲ್ಲಿ ಪಕ್ಷ ಸೇವಾ ಕಾರ್ಯಕ್ರಮಗಳನ್ನು ಮಾಡಿದ ಹಿನ್ನೆಲೆಯಲ್ಲಿ ಪ್ರಸ್ತುತ ಬಿಜೆಪಿ ಬಲಿಷ್ಠವಾಗಿದೆ ಎಂದು ಅವರು ಹೇಳಿದರು. ಕ್ಷೇಮ ನಿಧಿ ವಿಸ್ತಾರವಾಗಿ ಬೆಳೆದು ದ.ಕ.ಜಿಲ್ಲೆಯ ಬಡವರ್ಗದ ಮಕ್ಕಳ ಜೀವನಕ್ಕೆ ಪೂರಕವಾಗಿ ಕೆಲಸ ಮಾಡಲಿ ಎಂದು ಹಾರೈಸಿದರು.
ಶಾಸಕರ ವೈಯಕ್ತಿಕ ನೆಲೆಯಲ್ಲಿ ಪೌರಕಾರ್ಮಿಕರು ಹಾಗೂ ಆಶಾಕಾರ್ಯಕರ್ತಯರಿಗೆ ಮಳೆಗಾಲದ ರೈನ್ ಕೋಟ್ ಹಾಗೂ ಆಹಾರ ಸಾಮಗ್ರಿ ಕಿಟ್ ವಿತರಣೆಯನ್ನು ನಡೆಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ ಅವರು , ಸಹಾಯವಾಣಿ ಮೂಲಕ ಬಂದ ಕರೆಗಳಿಗೆ ಸ್ಪಂದಿಸಿ ದ ಶಾಸಕರ ವಾರ್ ರೂಮ್ ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸ, ಆಹಾರ ಕಿಟ್ ಗಳ ವಿತರಣೆ, ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆಯ ಕೆಲಸ, ಉಚಿತ ಅಂಬ್ಯುಲೆನ್ಸ್ , ಉಚಿತ ಶವಸಂಸ್ಕಾರ ಹೀಗೆ ಶಾಸಕರ ವಾರ್ ರೂಮ್ ಗಳಿಗೆ ಬಂದ ಪ್ರತಿಯೊಂದು ಕರೆಗಳಿಗೆ ಸ್ಪಂದನೆ ನೀಡಲಾಗಿದೆ.ಕೊರೊನಾ ಜೊತೆಗೆ ಇನ್ನು ಅನೇಕ ಜನಪರ ಯೋಜನೆಗಳನ್ನು ಸರಕಾರದ ಜೊತೆ ಗೆ ವೈಯಕ್ತಿಕ ನೆಲೆಯಲ್ಲಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಉಪಸ್ಥಿತರಿದ್ದರು.
ಸಭೆಯಲ್ಲಿ ಬಿಜೆಪಿ ಪ್ರಮುಖರಾದ ಆರ್.ಸಿ.ನಾರಾಯಣ ರೆಂಜ, ಸುಲೋಚನ ಜಿ.ಕೆ.ಭಟ್, ಸಂದೇಶ್ ಶೆಟ್ಟಿ ಮತ್ತಿತರರು ಹಾಜರಿದ್ದರು.
ಕ್ಷೇತ್ರದ ಅಧ್ಯಕ್ಷ ದೇವಪ್ಪ ಪೂಜಾರಿ ಸ್ವಾಗತಿಸಿ,ಪ್ರಧಾನಿ ಕಾರ್ಯದರ್ಶಿ ಡೊಂಬಯ್ಯ ಅರಳ ಕಾರ್ಯಕ್ರಮ ನಿರೂಪಿದರು.