ಬಂಟ್ವಾಳ, ಮೇ 2: ಬಿ.ಸಿ.ರೋಡ್ ಅಜ್ಜಿಬೆಟ್ಟು ಎಂಬಲ್ಲಿ ಯುವಕನೋರ್ವನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಂಟ್ವಾಳ ಪೊಲೀಸರ ತಂಡ ಯಶಸ್ವಿಯಾಗಿದೆ.
ಬಿ.ಸಿ.ರೋಡ್ ಕೈಕಂಬ ಬಳಿಯ ಪರ್ಲ್ಯ ನಿವಾಸಿಗಳಾದ ಉಸ್ಮಾನ್ ಎಂಬವರ ಪುತ್ರ ಮುಹಮ್ಮದ್ ಇಮ್ರಾನ್ (38) ಮತ್ತು ಎಸ್.ಎಚ್.ಶಾಹುಲ್ ಹಮೀದ್ ಎಂಬವರ ಪುತ್ರ ಮುಹಮ್ಮದ್ ಸಫ್ವಾನ್ (21) ಬಂಧಿತ ಆರೋಪಿಗಳು.
ಬ್ರಹ್ಮರಕೋಟ್ಲು ನಿವಾಸಿ ಮನೋಜ್ ಸಪಲ್ಯ ಎಂಬಾತನಿಗೆ ಎಪ್ರಿಲ್ 4ರಂದು ರಾತ್ರಿ ಬಿ.ಸಿ.ರೋಡ್ ಬಳಿಯ ಅಜ್ಜಿಬೆಟ್ಟು ಕ್ರಾಸ್ ನಲ್ಲಿ ಸ್ಕೂಟರ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚೂರಿಯಿಂದ ಇರಿದು ಪರಾರಿಯಾಗಿದ್ದರು. ಪ್ರಕರಣವನ್ನು ಭೇದಿಸಲು ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು.
ಕೃತ್ಯ ಎಸಗಿದ ಆರೋಪಿಗಳ ಯಾವುದೇ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಸಿಕ್ಕಿರಲಿಲ್ಲ. ಅಲ್ಲದೆ ರಾತ್ರಿ ಘಟನೆ ನಡೆದಿದ್ದು ಸ್ಥಳದಲ್ಲಿ ಯಾವುದೇ ಸಿಸಿ ಕ್ಯಾಮೆರ ಕೂಡ ಇಲ್ಲದಿದ್ದರಿಂದ ಪ್ರಕರಣವನ್ನು ಭೇದಿಸುವುದು ಪೊಲೀಸರಿಗೆ ಭಾರೀ ಸವಾಲಿನ ಕೆಲಸವಾಗಿತ್ತು.
ಘಟನೆ ನಡೆದ ಕೂಡಲೇ ಇದೊಂದು ಕೌಟುಂಬಿಕ ಕಲಹದಿಂದ ನಡೆದಿರುವ ಘಟನೆಯಾಗಿದ್ದು ಮನೋಜ್ ಅವರ ಅಣ್ಣನೇ ಮನೋಜ್ ಗೆ ಚೂರಿಯಿಂದ ಇರಿದಿದ್ದಾನೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆದರೆ ಮನೋಜ್ ಅವರ ತಂದೆ ಹಾಗೂ ಸಂಬಂಧಿಕರು ಈ ಬಗ್ಗೆ ಸ್ಪಷ್ಟೀಕರಣ ನೀಡಿ ಇದು ಕೌಟುಂಬಿಕ ಕಲಹದಿಂದ ನಡೆದ ಘಟನೆ ಅಲ್ಲ. ಮನೋಜ್ ಅವರು ಒಬ್ಬನೇ ಪುತ್ರನಾಗಿದ್ದು ಅವರಿಗೆ ಅಣ್ಣ ಇಲ್ಲ. ಇದು ಪೊಲೀಸ್ ತನಿಖೆಯ ದಾರಿ ತಪ್ಪಿಸಲು ಮಾಡಿರುವ ಕೆಲಸವಾಗಿದೆ ಎಂದು ಹೇಳಿದ್ದರು.
ಅಲ್ಲದೆ ಈ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ನಿಜವಾದ ಆರೋಪಿಗಳನ್ನು ಬಂಧಿಸುವಂತೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಪೊಲೀಸರಿಗೆ ಸೂಚನೆ ನೀಡಿದ್ದರು. ಹೀಗಾಗಿ ಪ್ರಕರಣದ ತನಿಖೆಗೆ ಮೂರು ತಂಡಗಳನ್ನು ರಚಿಸಲಾಗಿತ್ತು. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣೆ ನಿರ್ದೇಶನದಂತೆ ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿ.ಬಿ.ಭಾಸ್ಕರ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ವೆಲೈಂಟೈನ್ ಡಿಸೋಜಾರವರ ನೇತ್ರತ್ವದಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸ್ ನಿರೀಕ್ಷಕ ಚೆಲುವರಾಜು ಬಿ., ಬಂಟ್ವಾಳ ನಗರ ಠಾಣಾ ಪೊಲೀಸ್ ಉಪ ನಿರೀಕ್ಷಕ ಅವಿನಾಶ್ ಮತ್ತು ಸಿಬ್ಬಂದಿಯವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕ ಪ್ರಸನ್ನ ಹಾಗೂ ಸಿಬ್ಬಂದಿಯವರು ಬಂಟ್ವಾಳ ನಗರ ಪೊಲೀಸ್ ಠಾಣಾ ಅಪರಾಧ ವಿಭಾಗದ ಪೊಲೀಸ್ ಉಪನಿರೀಕ್ಷಕರು, ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು, ವಿಟ್ಲ ಪೊಲಿಸ್ ಠಾಣಾ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು, ಪ್ರೊಬೆಷನರಿ ಪಿ.ಎಸ್.ಐ.ಯವರು ಮತ್ತು ವಿಶೇಷ ತಂಡದ ಸಿಬ್ಬಂದಿಗಳಾದ ಉದಯ ರೈ, ಪ್ರವೀಣ್ ಎಂ., ಪ್ರಶಾಂತ್ ಎಂ., ಕುಮಾರ್ ಹೆಚ್.ಕೆ, ವಿವೇಕ್, ರಾಘವೇಂದ್ರ, ಮೋಹನ್, ಗೋಣಿಬಸಪ್ಪ, ಕೃಷ್ಣ ಕುಲಾಲ್ ಮತ್ತು ತಾಂತ್ರಿಕ ವಿಭಾಗದ ಸಂಪತ್, ದಿವಾಕರ್ ಹಾಗೂ ವಿಜಯ್ ರವರು ಪಾಲ್ಗೊಂಡಿದ್ದಾರೆ.
ಯಾವುದೇ ರೀತಿಯ ಸುಳಿವು ಇಲ್ಲದ ಅತೀ ಕಿಷ್ಟಕರವಾದ ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡವನ್ನು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿರುತ್ತಾರೆ ಹಾಗೂ ಬಹುಮಾನವನ್ನು ಘೋಷಿಸಿರುತ್ತಾರೆ.