ಬಂಟ್ವಾಳ: ತಾಲೂಕಿನಲ್ಲಿ ಕೊರೊನಾ ನಿಯಂತ್ರಣ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದ್ದು ರೋಗಿಗಳ ಸಾಗಿಸುವ ನಿಟ್ಟಿನಲ್ಲಿ ತನ್ನ ಅನುದಾನದಿಂದ ಬಂಟ್ವಾಳಕ್ಕೆ ಆಕ್ಸಿಜನ್ ಸೌಲಭ್ಯವಿರುವ ಆ್ಯಂಬುಲೆನ್ಸ್ ಒದಗಿಸುವುದಾಗಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಜತೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪತ್ರಕರ್ತರ ಜತೆ ಮಾತನಾಡಿದರು.
ಕೋವಿಡ್ ನಿರ್ವಹಣೆಗಾಗಿ ದ.ಕ. ಜಿಲ್ಲೆಗೆ ರಾಜ್ಯದಿಂದ ಈಗಾಗಲೇ 50 ಕೋ.ರೂ. ಅನುದಾನ ಬಂದಿದೆ. ಜತೆಗೆ ತನ್ನ ನಿಧಿಯಿಂದಲೂ 2.5 ಕೊ.ರೂ.ಗಳನ್ನು ನೀಡಿದ್ದೇನೆ. ಈ ಕುರಿತು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಆಕ್ಸಿಜನ್ ಆ್ಯಂಬುಲೆನ್ಸ್ ಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಆ್ಯಂಬುಲೆನ್ಸ್ ಗಳನ್ನು ನೀಡಲಾಗುತ್ತದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಕೊರೊನಾ ನಿಯಂತ್ರಣ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದ್ದು ಪ್ರತಿ ಗ್ರಾಮದಲ್ಲೂ ಸಭೆ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸದ್ಯಕ್ಕೆ ಇಲ್ಲಿನ ರೋಗಿಗಳಿಗೆ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಜತೆಗೆ ಕೋವಿಡ್ ಕೇರ್ ಸೆಂಟರ್ ಗಳನ್ನು ಸಿದ್ಧಪಡಿಸಲಾಗಿದೆ . ಹೀಗಾಗಿ ಸದ್ಯಕ್ಕೆ ಬಂಟ್ವಾಳದಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದರು.
ಬಂಟ್ವಾಳ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣ ಕಾರ್ಯದ ಕುರಿತು ತೆಗೆದುಕೊಂಡ ಕ್ರಮಗಳನ್ನು ಶಾಸಕರು ವಿವರಿಸಿದರು. ಬಂಟ್ವಾಳ ತಾಲೂಕಿನಲ್ಲಿ ಕೊರೊನಾ ಸ್ಥಿತಿಗತಿಗಳ ಕುರಿತು ತಹಶೀಲ್ದಾರ್ ರಶ್ಮಿ ಎಸ್. ಆರ್. ತಿಳಿಸಿದರು. ಸರಕಾರಿ ಆಸ್ಪತ್ರೆಯ ವ್ಯವಸ್ಥೆಯನ್ನು ಆಡಳಿತ ವೈದ್ಯಾಧಿಕಾರಿ ಡಾ.ಪುಷ್ಪಲತಾ ವಿವರಿಸಿದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿಸೋಜ, ನಗರ ಠಾಣಾ ಇನ್ಸ್‌ಪೆಕ್ಟರ್ ಚೆಲುವರಾಜು, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮೊದಲಾದವರಿದ್ದರು.