ಬಂಟ್ವಾಳ: ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಶೀಘ್ರದಲ್ಲೇ ಆಕ್ಸಿಜನ್ ತಯಾರಿಕ ಘಟಕ ಅನುಷ್ಠಾನಗೊಳ್ಳಲಿದ್ದು ಇದರ ಜೊತೆಗೆ ವಾಮದಪದವು ಸಮುದಾಯ ಆರೋಗ್ಯ ಕೇಂದ್ರ ದಲ್ಲೂ ಆಕ್ಸಿಜನ್ ಘಟಕ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಶಾಸಕರ ಕಚೇರಿಯಲ್ಲಿ ನಡೆಸಿದ ವಾರ್ ರೂಂ. ಪ್ರಮುಖರ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಈಗಾಗಲೇ ವಾಮದಪದವು ಆಕ್ಸಿಜನ್ ಘಟಕಕ್ಕೆ ದಾನಿಯೊಬ್ಬರು ಮುಂದೆ ಬಂದಿದ್ದು ಅದಕ್ಕೆ ಅಗತ್ಯ ವಾಗಿ ಬೇಕಿರುವ ಕಟ್ಟಡ ನಿರ್ಮಾಣ ವೊಂದನ್ನು ಶೀಘ್ರವಾಗಿ ಮಾಡಿ ಕೊಡಲಾಗುತ್ತದೆ. ಅದರ ಅನುಮತಿಗಾಗಿ ಜಿಲ್ಲಾಧಿಕಾರಿ ಒಪ್ಪಿಗೆ ಪಡೆದು ತಹಶಿಲ್ದಾರ್ ಗೆ ಸೂಚಿಸುವುದಾಗಿ ತಿಳಿಸಿದರು.
ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿರುವ ಹೆಚ್ಚುವರಿ ವೆಂಟಿಲೇಟರ್ ಗಳನ್ನು ವೆನ್ಲಾಕ್ ಆಸ್ಪತ್ರೆಗೆ ನೀಡಲಾಗಿದ್ದು ಬಂಟ್ವಾಳ ದ ರೋಗಿಗಳಿಗೆ ಆದ್ಯತೆ ನೆಲೆ ಯಲ್ಲಿ ಅಲ್ಲೇ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಒಟ್ಟು 33 ಗ್ರಾಮ ಪಂಚಾಯತ್ ಗಳಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಲಾಗಿದ್ದು ಉಳಿದ 6 ಪಂಚಾಯತ್ ಗಳ ಸಭೆ ಶೀಘ್ರವಾಗಿ ಮುಗಿಸಲಿದ್ದೇವೆ ಎಂದರು.
ಬಂಟ್ವಾಳದಲ್ಲಿ 6 ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ನೀಡಲಾಗುತ್ತಿದ್ದು 147 ಬೆಡ್ ಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ ತಲಾ ಮೂರು ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಿವೆ. 10 ಕಡೆಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರಯಲಾಗಿದೆ. 238 ಬೆಡ್ ಸೌಕರ್ಯಗಳಿವೆ. ಅಗತ್ಯ ಬಿದ್ದರೆ ಅಳಿಕೆ ಸತ್ಯ ಸಾಯಿ ವಿದ್ಯಾಸಂಸ್ಥೆ ಯವರು 70 ಬೆಡ್ ವ್ಯವಸ್ಥೆ ಇರುವ ಕೇರ್ ಸೆಂಟರ್ ತೆರೆಯಲು ಸಿದ್ದರಿದ್ದಾರೆ ಎಂದರು.
ಕೋವಿಡ್ ಸೊಂಕಿತರು ಸಾವನ್ನಪ್ಪಿದರೆ ಅವರ ಅಂತ್ಯಸಂಸ್ಕಾರದ ವೆಚ್ಚವನ್ನು ಶಾಸಕರ ವಾರ್ ರೂಂನಿಂದ ಭರಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅವರು, ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಇನ್ನೂ ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು.
ಪಕ್ಷದ ಜವಬ್ದಾರಿ ಎನ್ನುವುದಕ್ಕಿಂತಲೂ ಸೇವೆ ಎಂಬ ದೃಷ್ಟಿಯಿಂದ ಕೆಲಸ ಮಾಡಿ ಎಂದು ಅವರು ಹೇಳಿದರು.
ಸಭೆಯಲ್ಲಿ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಅವರು ವಾರದ ಸಂಪೂರ್ಣ ವರದಿ ನೀಡಿದರು.