ಬಂಟ್ವಾಳ: ಸರಕಾರದ ನಿಯಮದಂತೆ ಕೋವಿಡ್ ಪ್ರಕರಣಗಳನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಯಿತು.
ಗ್ರಾಮದ ಜನರ ಸಹಕಾರ ಸಿಕ್ಕಿದರೆ ಕೋವಿಡ್ ನಿಯಂತ್ರಣ ಮಾಡಲು ಅತ್ಯಂತ ಸುಲಭ. ಪ್ರತಿಯೊಬ್ಬರೂ ಕೋವಿಡ್ ವ್ಯಾಕ್ಸಿನೇಷನ್ ಪಡೆದುಕೊಂಡರೆ ಮುಂದಿನ ಕೊರೊನಾ ಅಲೆಗಳಿಂದ ಪಾರಾಗಲು ಸಾಧ್ಯ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಟಾಸ್ಕ್ ಫೋರ್ಸ್ ಸಮಿತಿ ಪ್ರತಿದಿನ ಮಾಹಿತಿ ಪಡೆದಕೊಂಡು ಕೆಲಸ ಮಾಡಿದರೆ ಕೊರೊನಾ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ. ಗ್ರಾಮ ಪಂಚಾಯತ್ ಸಹಾಯವಾಣಿ ಸರಿಯಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.
ಕೋವಿಡ್ ವಿಚಾರಕ್ಕೆ ಸಂಬಂಧಿಸಿದಂತೆ ಜೊತೆಗೆ ಯಾವುದೇ ಸಮಸ್ಯೆಗಳಿದ್ದರು ಟಾಸ್ಕ್ ಫೋರ್ಸ್ ಸಮಿತಿ ಶಾಸಕರನ್ನು ಸಂಪರ್ಕ ಮಾಡಿದರೆ ದಿನದ 24 ಗಂಟೆಯೂ ನಿಮಗೆ ಸಹಾಯ ಮಾಡಲು ತಯಾರಿದ್ದೇನೆ, ಜೊತೆಗೆ ಶಾಸಕರ ವಾರ್ ರೂಂ ಕೂಡ ನಿಮ್ಮ ನೆರವಿಗೆ ಬರುತ್ತದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಒಟ್ಟು ಆರು ಕೊರೊನಾ ಸೊಂಕಿತ ಪ್ರಕರಣಗಳಿದ್ದು ಅದರಲ್ಲಿ ಇಬ್ಬರು ವ್ಯಕ್ತಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಉಳಿದ ನಾಲ್ಕು ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ವಂತರಾಗಿದ್ದಾರೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಬಡಗಕಜೆಕಾರು ಗ್ರಾ.ಪಂ. ಅಧ್ಯಕ್ಷೆ ಅಸ್ಮಾ, ಉಪಾಧ್ಯಕ್ಷ ಡೀಕಯ್ಯ ಬಂಗೇರ, ತಹಶಿಲ್ದಾರ್ ರಶ್ಮಿ ಎಸ್.ಆರ್., ತಾ.ಪಂ. ಇ.ಒ. ರಾಜಣ್ಣ, ಪಿ.ಡಿ.ಒ. ದೇವಕಿ, ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ಗ್ರಾಮ ಕರಣಿಕೆ ನಿಶ್ಮಿತಾ ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.