ಬಂಟ್ವಾಳ: ತಾಲೂಕು ಪಂಚಾಯತ್ ಸದಸ್ಯ ಮತ್ತು ಎ.ಎಸ್.ಐ. ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ದೂರಿಗೆ ಪ್ರತಿದೂರು ದಾಖಲಾಗಿದೆ.
ತಾ.ಪಂ. ಸದಸ್ಯ ಮಹಾಬಲ ಆಳ್ವ ಅವರು ಬೆಳಿಗ್ಗೆ 9 ಗಂಟೆಯ ವೇಳೆ ಕಲ್ಲಡ್ಕದ ಪಂಚವಟಿ ಸಂಕೀರ್ಣದಲ್ಲಿರುವ ಮೆಡಿಕಲ್ ಸೆಂಟರ್ ಗೆ ಆಗಮಿಸುವ ವೇಳೆ ಬಂಟ್ವಾಳ ನಗರ ಪೋಲೀಸ್ ಠಾಣಾ ಎ.ಎಸ್.ಐ. ಕುಂಜ್ಞಿ ಅವರು ಲಾಟಿಯಲ್ಲಿ ಹೊಡೆದಿದ್ದಾರೆ ಎಂದು ದೂರು ನೀಡಿದ್ದಾರೆ.
ಬೆಳಿಗ್ಗೆ 9 ಗಂಟೆಯ ವೇಳೆ ಕೋವಿಡ್ ನಿಯಮದಂತೆ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸುವಂತೆ ಪೋಲೀಸರು ಸೂಚನೆ ನೀಡುತ್ತಾ ಬರುವ ವೇಳೆ ಮಹಾಬಲ ಆಳ್ವ ಅವರಿಗೆ ಮನೆಗೆ ತೆರಳುವಂತೆ ಹೇಳಿ ಲಾಟಿಯಿಂದ ಹೊಡೆದಿದ್ದಾರೆ ಎಂದು ಅವರು ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಅವರು ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಹೊರರೋಗಿಯಾಗಿ ದಾಖಲಾಗಿದ್ದರು.
ಪ್ರತಿದೂರು: ಕೋವಿಡ್ ನಿಯಮ ಪಾಲನೆ ಮಾಡದೆ ಉಲ್ಲಂಘನೆ ಮಾಡಿದ್ದಲ್ಲದೆ ಕೋವಿಡ್ ಸಂದರ್ಭದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೈಯಿಂದ ಹಲ್ಲೆ ಮಾಡಿದ್ದಾರೆ ಎಂದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಎ.ಎಸ್.ಐ. ದೂರು ನೀಡಿದ್ದಾರೆ.
ಜಿಲ್ಲಾಧಿಕಾರಿ ಅದೇಶದಂತೆ ಜಿಲ್ಲೆಯಲ್ಲಿ ಎಲ್ಲಾ ಅಂಗಡಿಗಳನ್ನು ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಮಾತ್ರ ತೆರದು ಮುಚ್ಚಬೇಕು. ಈ ಬಗ್ಗೆ ನಮಗೆ ತಾಲೂಕು ಆಡಳಿತ ಸೂಚನೆ ನೀಡಿದ್ದು 9 ಗಂಟೆ ಬಳಿಕವೂ ಅಂಗಡಿಗಳ ಬಾಗಿಲಿನಿಂದ ತೆರಳದ ವರಿಗೆ ವಾರ್ನಿಂಗ್ ನೀಡುತ್ತಾ ಬರುತ್ತಿದ್ದ ವೇಳೆ ತಾಲೂಕು ಪಂಚಾಯತ್ ಸದಸ್ಯ ಮಹಾಬಲ ಆಳ್ವ ಅವರು ಪ್ರತಿರೋಧ ವ್ಯಕ್ತಪಡಿಸಿ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೈಯಿಂದ ಹಲ್ಲೆ ಮಾಡಿದ್ದಾರೆ ಎಂದು ಅವರು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲಹೊತ್ತು ಬಿಗುವಿನ ವಾತಾವರಣ: ತಾ.ಪಂ. ಸದಸ್ಯ ಹಾಗೂ ಪೋಲೀಸ್ ನಡುವಿನ ಗಲಾಟೆ ಬಳಿಕ ಕಲ್ಲಡ್ಕ ಪೇಟೆಯಲ್ಲಿ ಕೆಲಸ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಸ್ಥಳದಲ್ಲಿ ಯುವಕರು ಗುಂಪು ಸೇರಿದ್ದು ಪೋಲಿಸರು ಮತ್ತು ಯುವಕರ ಮಧ್ಯೆ ವಾಗ್ವಾದ ನಡೆಯುವ ವೀಡಿಯೋ ವೈರಲ್ ಆಗಿದೆ.
ಕೂಡಲೇ ಸ್ಥಳಕ್ಕೆ ಬಂದ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಪರಿಸ್ಥಿತಿ ಯನ್ನು ತಿಳಿಯಾಗಿಸಿದ್ದಾರೆ.