Friday, April 5, 2024

ವಿಶ್ವ ಆರೋಗ್ಯ ದಿನ – ಎಪ್ರಿಲ್ 7

ಜಾಗತಿಕವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ ಎಪ್ರಿಲ್ 7ರಂದು ವಿಶ್ವ ಆರೋಗ್ಯ ದಿನ ಎಂದು ಆಚರಿಸುತ್ತದೆ. 1950 ಎಪ್ರಿಲ್ 7ರಂದು ಆರಂಭವಾದ ಈ ಆಚರಣೆ, ಪ್ರತಿ ವರ್ಷ ಯಾವುದಾದರೊಂದು ವಿಶೇಷ ದ್ಯೇಯವಾಕ್ಯ ಇಟ್ಟುಕೊಂಡು ಆಚರಿಸಲಾಗುತ್ತದೆ.

2017 ರಲ್ಲಿ ಖಿನ್ನತೆಯನ್ನು ಸೋಲಿಸಿ ಎಂಬ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಆಚರಿಸಲಾಗಿತ್ತು. 2019ರ ಧೇಯವಾಕ್ಯ ಎಲ್ಲೆಲ್ಲಿಯೂ ಎಲ್ಲರಿಗೂ ಆರೋಗ್ಯ, ಎಂಬ ಉದ್ದೇಶವನ್ನು ಇಟ್ಟುಕೊಂಡು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಜಾಗತಿಕ ಜಗತ್ತಿನ 700ಕೋಟಿ ಜನಸಂಖ್ಯೆಯ ಅರ್ಧದಷ್ಟು ಜನರು ಸೂಕ್ತ ವೈದ್ಯಕೀಯ ಸೌಲಭ್ಯ ದೊರಕಿಸುವುದೇ ವಿಶ್ವಸಂಖ್ಯೆಯ ಆದ್ಯತೆಯಾಗಿದೆ. ವಿಶ್ವಸಂಖ್ಯೆ ತನ್ನ 70ನೇ ವಾರ್ಷಿಕೋತ್ಸವವನ್ನು ಆಚರಿಸುವ ಈ ಸಂದರ್ಭದಲ್ಲಿ ಸರ್ವರಿಗೂ ಆರೋಗ್ಯ ಎಂಬ ಘೋಷಣೆಯಡಿಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಭಾಗ್ಯ ಕಲ್ಪಿಸುವ ಕನಸನ್ನು ಹೊಂದಿದೆ. ಜಾಗತಿಕ ಜನಸಂಖ್ಯೆಯಲ್ಲಿನ 100 ಮಿಲಿಯನ್ ಮಂದಿ ಬಡತನ ರೇಖೆಗಿಂತಲೂ ಕೆಳಗಿನವರಾಗಿದ್ದು, ಅಧಿಕ ವೈದ್ಯಕೀಯ ವೆಚ್ಚದ ಕಾರಣದಿಂದಾಗಿ ಬಡತನ ರೇಖೆಯು ಕೆಳಗೆಯೇ ಉಳಿಯುವಂತಾಗಿದೆ. ದುಡಿದ ಹಣವೆಲ್ಲಾ ಆರೋಗ್ಯ ಸಂಬಂಧಿ ವೈದ್ಯಕೀಯ ವೆಚ್ಚಕ್ಕಾಗಿ ವ್ಯಯಿಸುವುದರಿಂದ ದಿನವೊಂದರಲ್ಲಿ ಕನಿಷ್ಟ 2ಡಾಲರ್‌ನಲ್ಲಿ ಬದುಕಬೇಕಾದ ಅನಿವಾರ್ಯತೆ ಹೊಂದಿದ್ದಾರೆ. ಇನ್ನೂ ಜಾಗತಿಕ ಜನಸಂಖ್ಯೆಯು 800ಮಿಲಿಯನ್ ಮಂದಿ (ಜನಸಂಖ್ಯೆಯು 12ಶೇಕಡಾದಷ್ಟು) ತಮ್ಮ ಸಂಪಾದನೆಯ 10ಶೇಕಡಾದಷ್ಟು ಆರೋಗ್ಯಕ್ಕಾಗಿ ವ್ಯಯಿಸುತ್ತಾರೆ ಎಂದು ವಿಶ್ವಸಂಸ್ಥೆಯು ವರದಿಗೊಳಿಸಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಅಮೇರಿಕಾ, ಯುರೋಪ್, ಏಷ್ಯಾಖಂಡದ ಕೆಲವೊಂದು ದೇಶಗಳು ಈ ರೀತಿಯ ವೆಚ್ಚವನ್ನು ಸರಿದೂಗಿಸುವ ಸಾಮರ್ಧ್ಯ ಹೊಂದಿದೆ. ಆದರೆ ಬಡರಾಷ್ಟ್ರಗಳಾದ ಆಫ್ರೀಕಾ, ಲಿಬಿಯಾ ಮತ್ತು ಏಷ್ಯಾಖಂಡದ ಕೆಲವು ರಾಷ್ಟ್ರಗಳು ಆರೋಗ್ಯಕ್ಕಾಗಿ ಹೆಚ್ಚಿನ ಹಣ ವ್ಯಯಿಸಲಾಗದಿರುವುದು ಜಾಗತಿಕ ಜಗತ್ತಿನ ದುರಂತವೆಂದರೂ ತಪ್ಪಲ್ಲ. 2018ರ ಧೇಯ್ಯವೆಂದರೆ ಎಲ್ಲರಿಗೂ ಎಲ್ಲೆಲ್ಲೂ ಆರೋಗ್ಯ ಎಂದಾಗಿದ್ದು, ಇದರ ಆಶಯದಡಿ ಜಗತ್ತಿನ ಎಲ್ಲರಿಗೂ ಅಗತ್ಯವಿದ್ದಾಗಲ್ಲೆಲ್ಲ ಉನ್ನತ ವೈದ್ಯಕೀಯ ಸೌಲಭ್ಯ ಯಾವುದೇ ಆಥಿಕ ಅಡಚಣೆ ಇಲ್ಲದೆ ಸಿಗಬೇಕು ಎಂಬುದಾಗಿರುತ್ತದೆ.

ಎಲ್ಲರಿಗೂ ಆರೋಗ್ಯ ಎಂದರೆ ಎಲ್ಲರಿಗೂ ಉಚಿತ ಆರೋಗ್ಯ ಸೌಲಭ್ಯ ಎಂದರ್ಥವಿಲ್ಲ. ಯಾಕೆಂದರೆ ಜಗತ್ತಿನ ಯಾವ ರಾಷ್ಟ್ರವೂ ಎಲ್ಲರಿಗೂ ಏಕಕಾಲದಲ್ಲಿ ಎಲ್ಲಾ ಸಮಯದಲ್ಲಿ ಉಚಿತ ಆರೋಗ್ಯ ಸೌಲಭ್ಯ ಕೊಡಲು ಸಾಧ್ಯವಾಗದು. ಆದರೂ ಎಲ್ಲರಿಗೂ ಕನಿಷ್ಟ ಮೂಲಭೂತ ವೈದ್ಯಕೀಯ ಸೌಲಭ್ಯ ನೀಡಿ ಹಂತ ಹಂತವಾಗಿ ಉನ್ನತ ವೈದ್ಯಕೀಯ ಸೌಲಭ್ಯ ನೀಡುವ ಸಮದ್ದೇಶ ಹೊಂದಿದೆ. ಎಲ್ಲರಿಗೂ ಎಲ್ಲೆಲ್ಲಿಯೂ ಆರೋಗ ಎಂಬುದು ಕೇವಲ ವ್ಯಕ್ತಿ ಆಧಾರಿತ ಸೇವೆ ಆಗಿರದೆ, ಜಗತ್ತಿನ ಎಲ್ಲ ಸಮುದಾಯಕ್ಕೆ ಮೂಲಭೂತ ವೈದ್ಯಕೀಯ ಸೌಲಭ್ಯ ನೀಡುವುದೇ ಆಗಿರುತ್ತದೆ. ಉದಾಹರಣೆಗೆ ನೀರಿಗೆ ಪ್ಲೋರೈಡ್ ಮಿಶ್ರಣ ಅಥವಾ ಸೊಳ್ಳೆ ಉತ್ಪಾದನೆಗೆ ಪ್ರೋತ್ಸಾಹಿಸುವ ವಾತಾವರಣವನ್ನು ನಿಯಂತ್ರಿಸವುದು ಅಥವಾ ವೈರಾಣು ಉತ್ಪತ್ತಿಯಾಗದಂತೆ ತಡೆಯುವ ಉದ್ದೇಶ ಹೊಂದಿದೆ. ಎಲ್ಲರಿಗೂ ಆರೋಗ್ಯ ಎಂದರೆ ಕೇವಲ ವೈದ್ಯಕೀಯ ಸೌಲಭ್ಯ ಮತ್ತು ಹಣಕಾಸಿನ ನೇರವು ನೀಡುವುದು ಆಗಿರುವುದಿಲ್ಲ. ಮೂಲಭೂತ ಸೌಲಭ್ಯಗಳಾದ ಶುದ್ದ ನೀರು, ಶುದ್ದ ಗಾಳಿ, ಶುದ್ದ ಬೆಳಕು ನೀಡಿ ರೋಗವನ್ನು ತಡೆಗಟ್ಟುವ ಪ್ರಕ್ರಿಯೆ ಹೆಚ್ಚು ಒತ್ತು ನೀಡುವ ಸದುದ್ದೇಶ ಹೊಂದಿದೆ. ಇದರ ಜೊತೆಗೆ ಉನ್ನತ ವೈದ್ಯಕೀಯ ಸೌಲಭ್ಯಗಳು, ಸಲಕರಣೆಗಳು ಮತ್ತು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಕೂಡ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಗುರುತರ ಉದ್ದೇಶ ಹೊಂದಿದೆ. ಸೂಕ್ತ ಕಾನೂನು ಮತ್ತು ಸರಕಾರದ ಕಾಯಿದೆಗಳ ಮುಖಾಂತರ ಎಲ್ಲರಿಗೂ ಸಕಾಲದಲ್ಲಿ ಸಕಲ ವೈದ್ಯಕೀಯ ಸೌಲಭ್ಯ ತಲುಪಿಸುವ ಮಹದಾಸೆ ಹೊಂದಿದೆ. ವೈದ್ಯಕೀಯ ನೆರವು ಎನ್ನುವುದು ಬರೀ ಆಸ್ಪತ್ರೆ ಕಟ್ಟಿಸಿ ಉಚಿತ ಜೆನೆರಿಕ್ ಔಷದಿ ನೀಡುವುದು ಅಲ್ಲ. ಜನರಿಗೆ ಪ್ರಾಥಮಿಕ ಅವಶ್ಯಕತೆಗಳನ್ನು ನೀಡಿ ರೋಗ ಬರದಂತೆ ಮತ್ತು ರೋಗ ಉಲ್ಬಣಿಸದಂತೆ ಪೂರಕವಾದ ವಾತಾವರಣ ಸೃಷ್ಟಿಸುವ ಉನ್ನತ ದ್ಯೇಯವನ್ನು ಹೊಂದಿದೆ. ಮೆಡಿಕಲ್ ಕಾಲೇಜ್‌ನ್ನು ನಿರ್ಮಿಸಿ ವೈದ್ಯರ ಸಂಖ್ಯೆ ಜಾಸ್ತಿ ಮಾಡಿ ರೋಗಕ್ಕೊಂದರಂತೆ ಪರಿಣಿತ ವೈದ್ಯರನ್ನು ಸೃಷ್ಟಿಸುವುದಲ್ಲ. ಹೊಸ ಹೊಸ ರೋಗವನ್ನು ಹುಟ್ಟಿಸುವುದಲ್ಲ. ರೋಗದ ಬಗ್ಗೆ ಜನರಲ್ಲಿ ಜಾಗೃತಿ, ಅರಿವು ಮೂಡಿಸಿ ರೋಗದ ಚಿಕಿತ್ಸೆಗಿಂತ ರೋಗ ತಡೆಗಟ್ಟುವುದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಜನರನ್ನು ಜಾಣರನ್ನಾಗಿಸುವ ಸದುದ್ದೇಶ ಹೊಂದಿದೆ.

ಜೀವನ ಶೈಲಿ ಮತ್ತು ಆರೋಗ್ಯ: ಬದಲಾದ ಜೀವನಶೈಲಿ ಆಹಾರ ಪದ್ಧತಿಯಿಂದಾಗಿ ದಿನಕ್ಕೊಂದರಂತೆ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿದೆ. ಪುರಾತನ ರೋಗಗಳಾದ ಕುಷ್ಠರೋಗ, ಸಿಫಿಲಿಸ್ ಮುಂತಾದ ಖಾಯಿಲೆಗಳು ಈಗ ಮಾಯಾವಾಗಿದೆ. ಆದರೆ ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗ ಬರುವ ರೋಗಗಳಾದ ಮಧುಮೇಹ ರಕ್ತದೊತ್ತಡ, ಹೃದಾಯಾಘಾತ, ಖಿನ್ನತೆ ಮುಂತಾದ ರೋಗಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇಂದಿನ ಧಾವಂತದ, ಒತ್ತಡದ ಜೀವನ ಕ್ರಮದಿಂದಾಗಿ ಯಾರಿಗೂ ಆರೋಗ್ಯದ ಬಗ್ಗೆ ಗಮನ ಹರಿಸಲು ಸಮಯವಿಲ್ಲದಿರುವುದೇ ಬಹುದೊಡ್ಡ ದುರಂತ. ಮೇಲೆ ತಿಳಿಸಿದ ಈ ಎಲ್ಲಾ ಹೆಚ್ಚಿನ ಹೊಸ ರೋಗಗಳನ್ನು ಜೀವನ ಶೈಲಿಯ ಬದಲಾವಣೆಯಿಂದಲೇ ಸರಿಪಡಿಸಿಕೊಳ್ಳಬಹುದು. ಆಹಾರ ಪದ್ಧತಿಯ ಬದಲಾವಣೆಯಿಂದ ಹೆಚ್ಚಿನ ರೋಗಗಳನ್ನು ಜೌಷಧಿ ಇಲ್ಲಿದೆ ನಿಯಂತ್ರಿಸಬಹುದು ಎಂದು ನಮಗೆ ತಿಳಿದಿದೆ. ಆದರೂ ಆಹಾರಕ್ಕಿಂತ ಜಾಸ್ತಿ ಔಷಧಿ ತಿನ್ನುವ ವರ್ಗದವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
೨೦೧೯ರ ವಿಶ್ವ ಆರೋಗ್ಯ ದಿನದ ಧ್ಯೇಯವಾಕ್ಯ ಆರೋಗ್ಯ, ಎಲ್ಲರಿಗೂ ಎಲ್ಲೆಡೆಯೂ ಎಂಬ ಮಾತಿಗೆ ಪೂರಕವಾದ ವಾತಾವರಣವನ್ನು ನಾವು ನಿರ್ಮಿಸಿಕೊಳ್ಳಬೇಕಾದ ಅನಿವಾರ್‍ಯತೆಯ ಕಾಲಘಟ್ಟದಲ್ಲಿ ನಾವಿಂದು ನಿಂತಿದ್ದೇವೆ.
೧. ಒತ್ತಡದ ಜೀವನ ಶೈಲಿಗೆ ತಿಲಾಂಜಲಿ ನೀಡಿ. ಕೆಲಸದ ವಾತಾವರಣದಲ್ಲಿ ಒತ್ತಡ ಜಾಸ್ತಿ ಇದ್ದಲ್ಲಿ ಕೆಲಸಕ್ಕೆ ರಾಜಿನಾಮೆ ನೀಡಿ ಹೊಸ ಕೆಲಸ ನೋಡಿಕೊಳ್ಳಿ. ಆರೋಗ್ಯಕ್ಕಿಂತ ಮಿಗಿಲಾದ ವಸ್ತು ಇನ್ನಾವುದೂ ಇಲ್ಲ. ನೆನಪಿರಲಿ ಎಷ್ಟು ಹಣ ನೀವು ಕೂಡಿಟ್ಟರೂ ಒಂದು ಖಾಯಿಲೆ ಒಂದು ಸೂಕ್ತ ಚಿಕಿತ್ಸೆ ಪಡೆಯುವಷ್ಟರಲ್ಲಿ ನಿಮ್ಮ ಕೂಡಿಟ್ಟ ಹಣ ಕರಗಿ ಹೋಗಿರುತ್ತದೆ. ಈಗಿನ ಶೇಕಡಾ ೫೦ ಮಂದಿ ಯುವಜನರು ವೃತ್ತಿ ಸಂಬಂಧಿತವಾದ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಈ ಕಾರಣದಿಂದ ಆತ್ಮಹತ್ಯೆಯಂತಹಾ ಘಟನೆ ಪ್ರತಿದಿನ ನಾವು ನೋಡುತ್ತೇವೆ ಕೇಳುತ್ತೇವೆ ಮತ್ತು ಮರೆಯುತ್ತೇವೆ.
೨. ಧೂಮಪಾನ ಮಧ್ಯಪಾನಕ್ಕೆ ತಿಲಾಂಜಲಿ ಇಡಿ. ಕ್ಯಾನ್ಸರ್‌ನಂತಹ ಮಾರಕ ರೋಗಗಳು ಈ ದುಶ್ಚಟ್ಟಗಳಿಂದಲೇ ಬರುತ್ತದೆ ಎಂಬುದು ಸೂರ್‍ಯ ಚಂದ್ರರಷ್ಟೇ ಸತ್ಯವಾದ ಮಾತು. ರಾತ್ರಿ ಕಂಡ ಬಾಯಿಗೆ ಹಗಲು ಬೀಳುವ ಮೂರ್ಖ ಕೆಲಸಕ್ಕೆ ಮುಂದಾಗಬೇಡಿ.
೩. ದೈನಂದಿನ ಜೀವನದಲ್ಲಿ ಯೋಗ, ಪ್ರಾಣಯಾನ ಧ್ಯಾನ, ಬಿರುಸು ನಡಿಗೆ, ವ್ಯಾಯಾಮ, ಸ್ವಿಮ್ಮಿಂಗ್ ಸೈಕ್ಲಿಂಗ್, ಮುಂತಾದವುಗಳನ್ನು ಅಳವಡಿಸಿಕೊಂಡಲ್ಲಿ, ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತ ನಿಮ್ಮ ಹತ್ತಿರ ಸುಳಿಯುವುದೇ ಇಲ್ಲ.
೪. ಆದಷ್ಟು ಹಸಿ ತರಕಾರಿ, ಹಸಿರು ಸೊಪ್ಪು, ಕಾಳು ಬೇಳೆ ಇರುವ ಆಹಾರ ಸೇವಿಸಿ. ಮೂಲಹಾರಕ್ಕೆ ಹೆಚ್ಚು ಒತ್ತು ಕೊಡಿ. ನಾರಿನಂಶ ಮತ್ತು ಪೌಷ್ಠಿಕಾಂಶ ಇರುವ ಆಹಾರ ಜಾಸ್ತಿ ಸೇವಿಸಿ.
೫. ತಾಜಾ ಹಣ್ಣು ಹಂಪಲು ನೈಸರ್ಗಿಕ ಪೇಯ, ಮತ್ತು ನೀರನ್ನು ಧಾರಾಳವಾಗಿ ಸೇವಿಸಿ. ಕೃತಕ ಆಹಾರ ಪದ್ಧತಿ ಸಿದ್ಧ ಆಹಾರ, ದಿಢೀರ್ ಆಹಾರ, ಕೃತಕ ಪೇಯಗಳನ್ನು ಅನಿವಾರ್‍ಯವಾದಲ್ಲಿ ಮಾತ್ರ ಬಳಸಿ. ಜಂಕ್ ಪುಡ್ ಬೇಡವೇ ಬೇಡ.
೬. ಬೇಗ ಮಲಗಿ ಬೇಗ ಏಳು ಎಂಬ ಹಿರಿಯರ ಮಾತನ್ನು ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಪಾಲಿಸಿ. ತಡರಾತ್ರಿವರೆಗೆ ಮೋಜು, ಮಸ್ತಿ, ಕುಡಿತ, ಕುಣಿತ ಮಾಡಿ ಪ್ರಾತಃ ಕಾಲದಲ್ಲಿ ಮಲಗಿ ಸೂರ್ಯ ನಡುನೆತ್ತಿಗೆ ಬಂದಾಗ ಏಳುವ ಹವ್ಯಾಸ ಬಹಳ ಅಪಾಯಕಾರಿ.
೭. ಅತಿಯಾದ ಮೊಬೈಲ್, ಕಂಪ್ಯೂಟರ್ ಬಳಕೆಯನ್ನು ನಿಯಂತ್ರಿಸಿ. ತಂತ್ರಜ್ಞಾನ ಬೆಳೆದಂತೆಲ್ಲಾ ಹೊಸ ಹೊಸ ಉಪಕರಣ ಬರುವುದು ಸಹಜ. ಆದರೆ ದೈನಂದಿನ ಜೀವನದ ಅತಿ ಅನಿವಾರ್‍ಯದಲ್ಲಿ ಮಾತ್ರ ಬಳಸಿ.
೮. ಸ್ವಯಂ ಔಷಧಿಗಾರಿಕೆ ಮಾಡುವುದೇ ಬೇಡ, ಡಾ| ಗೂಗಲ್ ಸಹವಾಸ ಬೇಡವೇ ಬೇಡ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ವೈದ್ಯರ ಪರಿಹಾರ ನೀಡುತ್ತಾರೆ. ನಿಮ್ಮ ನಂಬಿಕೆ ಎಂದೂ ಹುಸಿಯಾಗದು. ನಿರಂತರವಾಗಿ ನಿಯಮಿತವಾಗಿ ವೈದ್ಯರ ಸಲಹೆ ಮತ್ತು ಮಾರ್ಗದರ್ಶನ ಇದ್ದರೆ ಯಾವ ರೋಗವೂ ನಿಮ್ಮ ಹತ್ತಿರ ಸುಳಿಯುವುದಿಲ್ಲ.

 

ಕೊನೆಮಾತು
ಆರೋಗ್ಯವೇ ಭಾಗ್ಯ ಎಂಬುದು ನಮಗೆಲ್ಲ ತಿಳಿದೇ ಇದೆ. ಮೊದಲೆಲ್ಲಾ ರೋಗವಿಲ್ಲದ ಸ್ಥಿತಿಗೆ ಆರೋಗ್ಯ ಎಂಬುದಾಗಿ ಹೇಳಿದ್ದಾರೆ. ಆದರೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಾವು ತಿನ್ನುವ ಆಹಾರ, ಸೇವಿಸುವ ಗಾಳಿ, ಬದುಕುವ ಜೀವನ ಶೈಲಿ ಎಲ್ಲವೂ ಕಲುಷಿತವಾಗಿದೆ. ಈ ಕಾರಣದಿಂದಲೇ ರೋಗವಿಲ್ಲದ ಆರೋಗ್ಯವಂಥ ಮನುಷ್ಯನ್ನು ಭೂತಗನ್ನಡಿ ಹುಡುಕಿ ಹಿಡಿದರೂ ಸಿಗದಂತಹ ಪರಿಸ್ಥಿತಿ ಬಂದಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ರೋಗದಿಂದ ಬಳಲುತ್ತಿದ್ದಾರೆ. ಮಧುಮೇಹ, ರಕ್ತದೊತ್ತಡ, ಖಿನ್ನತೆ ಹೀಗೆ ಒಂದಲ್ಲ ಒಂದು ರೋಗ ಎಲ್ಲರನ್ನೂ ಕಾಡುತ್ತಿದೆ. ಹಾಗಾಗಿ ಆರೋಗ್ಯ ಎಂಬ ಶಬ್ದವನ್ನು ರೋಗವಿಲ್ಲದ ದೇಹಸ್ಥಿತಿಯ ಬದಲಾಗಿ, ಜೀವನೋತ್ಸಾಹ ಎಂಬುದಾಗಿ ವ್ಯಾಖ್ಯಾನಿಸಲಾಗಿದೆ. ಮಧುಮೇಹ, ರಕ್ತದೊತ್ತಡ ಇದ್ದರೂ, ದಿನಬೆಳಗೆದ್ದು ಕೆಲಸ ಮಾಡಲು ಹುಮ್ಮಸ್ಸು ಇದ್ದಲ್ಲಿ ಆತನನ್ನು ಆರೋಗ್ಯವಂತ ವ್ಯಕ್ತಿಯೆಂದು ಕರೆಯುವ ಅನಿವಾರ್ಯತೆ ಒದಗಿದೆ. ಯಾವುದೇ ರೋಗವಿಲ್ಲದಿದ್ದರೂ ಖಿನ್ನತೆಯಿಂದಾಗಿ ಅಥವಾ ಇನ್ನಾವುದೇ ಕಾರಣದಿಂದ ಕೆಲಸ ಮಾಡುವ ಆಸಕ್ತಿ ಅಥವಾ ಹುಮ್ಮಸ್ಸು ಇಲ್ಲದಿದ್ದಲ್ಲಿ ಅಂತಹ ವ್ಯಕ್ತಿಗಳನ್ನು ರೋಗಿ ಎನ್ನುವ ಕಾಲಘಟ್ಟದಲ್ಲಿ ನಾವಿಂದು ನಿತ್ತಿದ್ದೇವೆ. ರೋಗವಿದ್ದರೂ, ರೋಗವನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಮಾಜದ ಬೆಳವಣಿಗೆಗೆ ಪೂರಕವಾಗಿ ಧನಾತ್ಮಕ ಕೊಡುಗೆ ಕೊಡುವ ವ್ಯಕ್ತಿಗಳನ್ನು ಆರೋಗ್ಯವಂತ ಎಂದು ಪರಿಗಣಿಸಲಾಗುತ್ತದೆ ಎಂದರೂ ಅತಿಶಯೋಕ್ತಿಯಲ್ಲ ಮಧುಮೇಹ ಮತ್ತು ರಕ್ತದೊತ್ತಡ ಎನ್ನುವುದನ್ನು ಸೂಕ್ತ ಔಷದಿ, ಆಹಾರ ಪದ್ಧತಿ ಮತ್ತು ಜೀವನ ಶೈಲಿ ಮಾರ್ಪಾಡು ಮಾಡಿಕೊಂಡು ನೂರು ಕಾಲ ಸುಖವಾಗಿ ಬದುಕಲು ಬೇಕಾದ ಎಲ್ಲಾ ವ್ಯವಸ್ಥೆಗಳು ಈಗ ಎಲ್ಲರಿಗೂ ಲಭ್ಯವಿರುವುದೇ ಸಮಾಧಾನಕಾರ ಅಂಶವಾಗಿದೆ.
ಇನ್ನು ಆರೋಗ್ಯ ಎನ್ನುವುದು ಯಾವುದೇ ಮಾರುಕಟ್ಟೆಯಲ್ಲಿ ಸಿಗುವ ವಸ್ತುವಲ್ಲ ಎಂಬುದನ್ನು ಜನರು ಅರಿಯಬೇಕು ಪ್ರತಿದಿನವೂ ವೈದ್ಯರು ಸೂಚಿಸಿದ ಹತ್ತಾರು ಔಷಧಿ ಸೇವಿಸಿ ನೂರುಕಾಲ ಬದುಕುತ್ತೇನೆ ಎಂಬ ಭ್ರಮೆಯಿಂದ ಜನರು ಹೊರಬರಬೇಕು ವೈದ್ಯರು ಏನಿದ್ದರೂ ರೋಗದ ಲಕ್ಷಣಗಳನ್ನು ಅಭ್ಯಸಿಸಿ ಚಿಕಿತ್ಸೆ ನೀಡಿ ಔಷಧಿ ನೀಡುತ್ತಾರೆಯೇ ಹೊರತು ಕೆಲವೊಂದು ಕಾಯಿಲೆಗಳನ್ನು ಗುಣಪಡಿಸುವುದಕ್ಕಿಂತ ನಿಯಂತ್ರಣದಲ್ಲಿರುವುದಕ್ಕೆ ಹೆಚ್ಚಿನ ಗಮನ ನೀಡುತ್ತಾರೆ ಎಂಬ ಸಾರ್ವಕಾಲಿಕ ಸತ್ಯವನ್ನು ಜನರು ಜೀರ್ಣಿಸಿಕೊಳ್ಳಲೇ ಬೇಕು. ಈ ನಿಟ್ಟಿನಲ್ಲಿ ಜನರು ತಮ್ಮ ಜವಾಬ್ದಾರಿ ಅರಿತು ನಿಬಾಯಿಸಬೇಕಾದ ಅನಿವಾರ್ಯತೆ ಇದೆ. ಎಲ್ಲವನ್ನು ಸರಕಾರವೇ ನೀಡಬೇಕು ಎನ್ನುವುದು ಶುದ್ಧ ತಪ್ಪು ಕಲ್ಪನೆ. ಸರಕಾರ ಏನಿದ್ದರೂ ಆಸ್ಪತ್ರೆ, ವೈದ್ಯರ ಸೇವೆ, ಔಷಧಿಗಳನ್ನು ನೀಡಬಹುದು. ಮೂಲಭೂತ ಸೌಕರ್ಯಗಳನ್ನು ನೀಡಬಹುದು. ಸ್ವಚ್ಛಗಾಳಿ, ಶುದ್ಧ ನೀರು, ಶುಭ್ರ ಬೆಳಕು ಇವೆಲ್ಲದನ್ನು ಪಡೆಯಲು ಸರಕಾರದ ಜೊತೆಗೆ ಜನರೂ ಕೈಗೂಡಿಸಬೇಕು. ಪ್ರತಿಯೊಬ್ಬರು ತಮ್ಮ ಪರಿಸರವನ್ನು ಸ್ವಚ್ಚವಾಗಿಡಬೇಕು. ಕೊಳಚೆ ಪ್ರದೇಶಗಳಲ್ಲಿ ಸೊಳ್ಳೆಗಳು ಉತ್ಪಾದನೆ ಆಗಿ. ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಜನರು ಪರಿಸರದ ಬಗ್ಗೆ ನೈಮಲ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಪರಿಸರದ ನೀರು ಸ್ವಚ್ಚವಾಗಿಡಲು ಸರಕಾರದ ಜೊತೆ ಮತ್ತು ಸ್ಥಳೀಯ ಆಡಳಿತದ ಜೊತೆಗೆ ಜನರೂ ಕೈ ಜೋಡಿಸಬೇಕು. ಶುದ್ಧಗಾಳಿ ಸಿಗಬೇಕಿದ್ದಲ್ಲಿ ಮರಗಿಡಗಳನ್ನು ಕಡಿಯದೇ ಮರಗಿಡಗಳನ್ನು ಬೆಳೆಸಿ ಶುದ್ಧ ಗಾಳಿಸಿಗಲು ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಳ್ಳಬೇಕು. ಮರಗಿಡ ಕಡಿದು, ಗುಡ್ಡ ಬರಿದು ಮಾಡಿ ಕಾಂಕ್ರೀಟ್ ಕಾಡು ಬೆಳೆಸಿ, ಕೈಗಾರಿಕೆಗಳಿಗೆ ಹೆಚ್ಚಿನ ಆಧ್ಯತೆ ನೀಡಿದಲ್ಲಿ ಪರಿಸರ ಮಾಲಿನ್ಯವಾಗಿ ಆರೋಗ್ಯ ಎನ್ನುವುದು ಗಗನ ಕುಸುಮವಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಎಲ್ಲವನ್ನು ಸರಕಾರ ನೀಡಬೇಕು ಎಂಬ ಧೋರಣೆ ತಪ್ಪು. ಎಲ್ಲ ರೋಗಗಳಿಗೂ ಔಷಧಿ ಇದೆ. ಮತ್ತು ಎಲ್ಲ ರೋಗಗಳನ್ನು ವೈದ್ಯರು ಗುಣಪಡಿಸುತ್ತಾರೆ ಎಂಬ ಭ್ರಮಾ ಲೋಕದಿಂದ ಜನರು ಹೊರಬರಲೇಬೇಕು, ಇಲ್ಲವಾದಲ್ಲಿ ದಿನಕ್ಕೊಂದರಂತೆ ಹೊಸ ರೋಗಗಳು ಹುಟ್ಟುತ್ತದೆ. ಮತ್ತು ಪ್ರತಿಯೊಂದು ರೋಗಕ್ಕೆ ಒಬ್ಬ ತಜ್ಞ ವೈದ್ಯರು ಹುಟ್ಟಿಕೊಳ್ಳಬಹುದೇ ಹೊರತು, ಸುಂದರ ಸುದೃಢ ಸಮಾಜದ ನಿರ್ಮಾಣ ಖಂಡಿತಾ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯೂ ತಮ್ಮ ಹೊಣೆಗಾರಿಕೆ ಅರಿತು ನಿಭಾಯಿಸಿದಲ್ಲಿ ಮಾತ್ರ ಎಲ್ಲೆಲ್ಲಿಯೂ ಎಲ್ಲರಿಗೂ ಆರೋಗ್ಯ ಎಂಬ ವಿಶ್ವಸಂಸ್ಥೆಯ ೨೦೧೮ರ ವಿಶ್ವ ಆರೋಗ್ಯ ದಿನದ ಆಚರಣೆಯ ಧ್ಯೇಯ ವಾಕ್ಯಕ್ಕೆ ನ್ಯಾಯ ಒದಗೀತು. ಇಲ್ಲವಾದಲ್ಲಿ ಎಲ್ಲರಿಗೂ ಆರೋಗ್ಯ ಎನ್ನುವುದು ಮರೀಚಿಕೆಯಾಗುವ ಎಲ್ಲ ಸಾಧ್ಯತೆಗಳು ಇದೆ. ಹೀಗಾಗಿ ವಿಶ್ವ ಆರೋಗ್ಯ ದಿನದಂದು ನಾವೆಲ್ಲ ಸುಂದರ ಸುದೃಢ ಸಮಾಜದ ನಿರ್ಮಾಣ ಮಾಡುವ ಪ್ರತಿಜ್ಞೆ ಮಾಡೋಣ. ಅದರಲ್ಲಿಯೇ ನಮ್ಮೆಲ್ಲರ ಮತ್ತು ಸಮಾಜದ ಒಳಿತು ಅಡಗಿದೆ.

 


ಡಾ|| ಮುರಲೀ ಮೋಹನ್ ಚೂಂತಾರು

More from the blog

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...

ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ ತಾಲೂಕಿನ ಶಕ್ತಿಕೇಂದ್ರವಾದ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಬಿಜೆಪಿ...

ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್ “ಹೋಟೆಲ್ ಅನ್ನಪೂರ್ಣ” ಶುಭಾರಂಭ

ಬಂಟ್ವಾಳ ತಾಲೂಕಿನ ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ಅರುಣ್ ಕುಮಾರ್, ಮಹೇಶ್ ಕುಮಾರ್, ಜನಾರ್ಧನ್ ಪೊಸೊಳಿಗೆ ಮಾಲಕತ್ವದ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್. "ಹೋಟೆಲ್ ಅನ್ನಪೂರ್ಣ" ಶುಭಾರಂಭಗೊಂಡಿತು. ಶ್ರೀ...

ನಂದನಹಿತ್ಲು ವೈದ್ಯನಾಥ, ಅರಸು, ಜುಮಾದಿ ಬಂಟ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ

ಬಂಟ್ವಾಳ: ಇಲ್ಲಿನ ಪೇಟಯಲ್ಲಿರುವ ನಂದನಹಿತ್ಲು ವೈದ್ಯನಾಥ,ಅರಸು,ಜುಮಾದಿ ಬಂಟ ದೈವಸ್ಥಾನದಲ್ಲಿ ಕಾಲವಧಿಯ ನೇಮೋತ್ಸವವು ಗುರುವಾರ ಬೆಳಗ್ಗೆ ಸಂಪನ್ನಗೊಂಡಿತು. ಕ್ಷೇತ್ರದ ತಂತ್ರಿಗಳಾದ ಪೊಳಲಿ ಗಿರಿಪ್ರಕಾಶ್ ತಂತ್ರಿವರ ನೇತೃತ್ವದಲ್ಲಿ‌ ನಡೆದ ವಿವಿಧ ವೈಧಿಕ ವಿಧಿವಿಧಾನಗಳ ಬಳಿಕ ಮೊದಲದಿನ ಶ್ರೀ...