ಬಂಟ್ವಾಳ: ಪರಿಶಿಷ್ಟ ಜಾತಿಯವರನ್ನು ಅಪಮಾನಿಸಿದ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಸುಜಾತ ಮಂಡಲ್ ಖಾನ್ ನೀಡಿರುವ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಬಂಟ್ವಾಳ ಎಸ್ಸಿ ಮೋರ್ಚಾದ ಅಧ್ಯಕ್ಷ ಕೇಶವ ದೈಪಲ ಉಪಸ್ಥಿತಿಯಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರಿಗೆ ಮನವಿ ಸಲ್ಲಿಸಲಾಯಿತು.
ಟಿಎಂಸಿ ನಾಯಕಿ ಸುಜಾತ ಮಂಡಲ್ ಖಾನ್ ತನ್ನ ಭಾಷಣದಲ್ಲಿ, ‘ಪರಿಶಿಷ್ಟ ಜಾತಿಯವರು ಬೇಡುವ ಭಿಕ್ಷುಕರು’ ಎಂದು ಹೇಳಿ ಪರಿಶಿಷ್ಟ ಜನಾಂಗದವರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಸಂದರ್ಭದಲ್ಲೇ ಈ ಹೇಳಿಕೆ ಕೊಟ್ಟಿರುವುದು ದುರದೃಷ್ಟಕರ. ಸುಜಾತ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಹೆಳಿಕೆಯನ್ನು ರಾಜ್ಯ ಎಸ್ಸಿ ಮೋರ್ಚದ ರಾಜ್ಯ ಕಾರ್ಯಕಾರಿಣಿ ಸದಸ್ಯ, ಮಂಗಳೂರು, ಉಡುಪಿ, ಹಾಸನದ ಸಹ ಪ್ರಭಾರಿ ದಿನೇಶ್ ಅಮ್ಟೂರ್ ಕೂಡಾ ತೀವ್ರವಾಗಿ ಖಂಡಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಮೇಶ್ ಕುದ್ರೆಬೆಟ್ಟು, ಉಪಾಧ್ಯಕ್ಷ ವಿಶ್ವನಾಥ್ ಚೆಂಡ್ತಿಮಾರ್, ಕಾರ್ಯದರ್ಶಿ ಹರೀಶ್ ನಾವೂರು ಹಾಗೂ ಪರಿಶಿಷ್ಟ ಜಾತಿಯ ಪ್ರಮುಖರು ಉಪಸ್ಥಿತರಿದ್ದರು.