ಬೆಂಗಳೂರು: ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ಗುರುವಾರ ಸಂಜೆ ಆದೇಶಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಇದೀಗ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬೆಂಗಳೂರು ನಗರ, ಮೈಸೂರು, ಮಂಗಳೂರು, ಉಡುಪಿ-ಮಣಿಪಾಲ, ಬೀದರ್, ಕಲಬುರಗಿ ಮತ್ತು ತುಮಕೂರು ನಗರಗಳಲ್ಲಿ 10 ರಿಂದ 20ರವರೆಗೆ (ಈ ಎರಡೂ ದಿನಗಳನ್ನು ಒಳಗೊಂಡಂತೆ) ಕರ್ಫ್ಯೂ ಜಾರಿ ಮಾಡಲಾಗಿದೆ.
- ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮತ್ತು ಅವರ ಸಹಾಯಕರಿಗೆ ವೈದ್ಯಕೀಯ ಸೇವೆಗಾಗಿ ಸಂಚಾರಕ್ಕೆ ಅನುಮತಿಸಲಾಗಿದೆ.
- ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಕಾರ್ಖಾನೆಗಳು, ಕಂಪೆನಿಗಳು, ಸಂಸ್ಥೆಗಳು ಯಥಾರೀತಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಆದರೆ, ಸಂಬಂಧಿಸಿದ ಕಾರ್ಮಿಕರು, ನೌಕರರು ಕರೊನಾ ಕರ್ಫ್ಯೂ ಅವಧಿಗೆ ಮುನ್ನವೇ ಕರ್ತವ್ಯದಲ್ಲಿ ಹಾಜರು ಇರಬೇಕು.
- ವೈದ್ಯಕೀಯ ಸೇವೆಗಳನ್ನು ಮತ್ತು ತುರ್ತು ಚಟುವಟಿಕೆಗೆ ಮಾತ್ರ ಅನುಮತಿಸಲಾಗಿದ್ದು, ಇನ್ನುಳಿದಂತೆ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಿದೆ.
- ಅತ್ಯವಶ್ಯಕ ಸೇವೆಗಳನ್ನು ಒದಗಿಸುವ ವಾಹನಗಳು, ಸರಕು ಸಾಗಾಣಿಕ ವಾನಗಳು, ಹೋಮ್ ಡೆಲಿವರಿ, ಇ- ಕಾಮರ್ಸ್ ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ.
- ರಾತ್ರಿ ವೇಳೆಯಲ್ಲಿನ ಬಸ್ಸು, ರೈಲು ಹಾಗೂ ವಿಮಾನದ ದೂರ ಪ್ರಯಾಣಕ್ಕೆ ಅನುಮತಿಸಲಾಗಿದೆ. ಪ್ರಯಾಣಿಕರು ಮನೆಯಿಂದ ನಿಲ್ದಾಣಗಳಿಗೆ ಮತ್ತು ನಿಲ್ದಾಣದಿಂದ ಮನೆಗೆ ಅಧಿಕೃತ ಟಿಕೆಟ್ಗಳ ಆಧಾರದ ಮೇಲೆ ಆಟೊ- ಕ್ಯಾಬ್ ಇತ್ಯಾದಿಗಳ ಮೂಲಕ ಸಂಚರಿಸಲು ಅನುಮತಿ ನೀಡಲಾಗಿದೆ.
ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಒಂದು ವೇಳೆ ಆದೇಶ ಉಲ್ಲಂಘನೆ ಮಾಡಿದರೆ ಅಂಥವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯಡಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರ ಹೇಳಿದೆ.