ಬಂಟ್ವಾಳ: ಕೊರೋನ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿ ಯಾವುದೇ ಆಕ್ಸಿಜನ್ ಸಮಸ್ಯೆ ಉಂಟಾಗದಂತೆ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಎಂ.ಸಿ.ಎಫ್. ಅವರ ಸಹಭಾಗಿತ್ವದಲ್ಲಿ ಆಕ್ಸಿಜನ್ ಪ್ಲ್ಯಾಂಟ್ ನಿರ್ಮಿಸಲು ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು ಶೀಘ್ರದಲ್ಲೇ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಹೇಳಿದರು.
ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಶುಕ್ರವಾರ ಬಂಟ್ವಾಳ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ, ಕೋವಿಡ್ ಎರಡನೇ ಲಸಿಕೆ ಪಡೆದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಈಗಾಗಲೇ 25 ಆಕ್ಸಿಜನ್ ಬೆಡ್ ಗಳು ಸಿದ್ಧವಾಗಿದೆ. ಇನ್ನೂ ಹೆಚ್ಚುವರಿಯಾಗಿ 10 ಆಕ್ಸಿಜನ್ ಬೆಡ್ ಗಳು ಸಿದ್ಧವಾಗುತ್ತಿದೆ. ತಾಲೂಕಿನ ವಾಮದಪದವು ಆಸ್ಪತ್ರೆಯ 30 ಬೆಡ್ ಗಳಲ್ಲಿ 12 ಬೆಡ್ ಗಳನ್ನು ಕೊರೋನ ರೋಗಿಗಳಿಗೆ ಮೀಸಲಿಡಲಾಗಿದೆ. ಅದನ್ನು 20ಕ್ಕೆ ಏರಿಕೆ ಮಾಡಿ ಎಲ್ಲಾ ಬೆಡ್ ಗಳಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುವುದು ಎಂದರು.
ಗುರುವಾರ ತಾಲೂಕಿನಲ್ಲಿ 200ಕ್ಕೂ ಅಧಿಕ ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ 15 ಮಂದಿ ಕೊರೋನ ರೋಗಿಗಳು ಇದ್ದು ಅವರಲ್ಲಿ 5 ಮಂದಿ ತುರ್ತು ನಿಗಾ ಘಟಕದಲ್ಲಿ ಮತ್ತು 9 ಮಂದಿ ಜನರಲ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಪರಿಸ್ಥಿತಿ ನಿಯಂತ್ರಣಕ್ಕೆ ತಾಲೂಕಿನ ಎಲ್ಲಾ ವೈದ್ಯರು, ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ ವಿಶೇಷ ಕಾಳಜಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಜೊತೆಗೆ ಪಕ್ಷದ ವಾರ್ ರೂಂ ಕೂಡ ಜನರ ನಿರಂತರ ಸೇವೆಯಲ್ಲಿ ಇದೆ ಎಂದರು ಅವರು ಹೇಳಿದರು.
ವಾಮದಪದವಿನ ಎರಡು, ಕಲ್ಲಡ್ಕ, ವಿಟ್ಲ, ವಗ್ಗದ ತಲಾ ಒಂದು ಹಾಸ್ಟೆಲ್ ಗಳನ್ನು ಕೋವಿಡ್ ಹಾರೈಕೆ ಕೇಂದ್ರವಾಗಿ ಮಾರ್ಪಡಿಸಲಾಗಿದ್ದು ಈ ಒಟ್ಟು ಐದು ಹಾಸ್ಟೆಲ್ ಗಳಲ್ಲಿ 250 ಬೆಡ್ ಗಳು ಲಭ್ಯವಾಗಲಿದೆ. ಎಲ್ಲಾ ಬೆಡ್ ಗಳಿಗೂ ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
45 ವರ್ಷ ಮೇಲ್ಪಟ್ಟವರು ಎಲ್ಲರೂ ವ್ಯಾಕ್ಸಿನ್ ಪಡೆಯಬೇಕು. ಒಂದನೇ ವಾಕ್ಸಿನ್ ಪಡೆದವರು ಎರಡನೇ ವ್ಯಾಕ್ಸಿನ್ ಕೂಡಲೇ ಪಡೆಯಬೇಕು. 18 ವರ್ಷ ಮೇಲ್ಪಟ್ಟವರು ವ್ಯಾಕ್ಸಿನ್ ಗಾಗಿ ನೋಂದಣಿ ಮಾಡಬೇಕು. ಮೊದಲು ನೋಂದಣಿ ಮಾಡಿದವರಿಗೆ ಅದ್ಯತೆಯ ಮೇರೆಗೆ ವ್ಯಾಕ್ಸಿನ್ ಕೊಡಲಾಗುವುದು ಎಂದು ಅವರು ಹೇಳಿದರು.
ಕೊರೋನ ವೈರಸ್ ನಿಯಂತ್ರಣಕ್ಕೆ ಜನರು ಆಡಳಿತದೊಂದಿಗೆ ಸಹಕಾರ ನೀಡಬೇಕು. ಲಸಿಕೆ ಪಡೆಯುವುದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಮಾಡಬೇಕು. ಕರ್ಫ್ಯೂ ಸಂದರ್ಭದಲ್ಲಿ ಅನಗತ್ಯವಾಗಿ ಮನೆಯಿಂದ ಹೊರ ಬರಬಾರದು. ಯಾವುದಾದರೂ ತುರ್ತು ಸಂದರ್ಭದಲ್ಲಿ ಸಂಬಂಧಿಸಿದವರಿಗೆ ಕರೆ ಮಾಡಿ ಸೇವೆ ಪಡೆಯಿರಿ ಎಂದು ಅವರು ಸಲಹೆ ನೀಡಿದರು.
ಬಳಿಕ ಅವರು ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲ್ಯಾಂಟ್ ನಿರ್ಮಾಣಕ್ಕೆ ಬೇಕಾದ ಜಾಗವನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ವೈದ್ಯಾಧಿಕಾರಿ ದೀಪಾ ಪ್ರಭು ಉಪಸ್ಥಿತರಿದ್ದರು.